ಸಿಜೆಪಿ ಸಂಸತ್ ಮೆರವಣಿಗೆಗೆ ದೆಹಲಿ ಪೊಲೀಸರಿಂದ ನಿರಾಕರಣೆ; ಕಾಕ್ರೋಚ್ ಪಕ್ಷಕ್ಕೆ ಕೊಟ್ಟ ವಾರ್ನಿಂಗ್ ಏನು?
ದೆಹಲಿಯ ಜಂತರ್ ಮಂತರ್ ನಿಂದ ಸಂಸತ್ತಿನವರೆಗೆ ಕಾಕ್ರೋಚ್ ಜನತಾ ಪಕ್ಷವು ಸೋಮವಾರ ಮೆರವಣಿಗೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ದೆಹಲಿ ಪೊಲೀಸರು ಅನುಮತಿಯನ್ನೇ ನೀಡಿಲ್ಲ. ಹೀಗಾಗಿ ಬಂಧನಗಳಾಗುವ ಸಾಧ್ಯತೆಗಳಿವೆ. ಸಿಜೆಪಿ ನಾಯಕರು ಸೋಮವಾರ ನಡೆಸಲಿರುವ ಸಂಸತ್ ಮೆರವಣಿಗೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನಾಯಕರು ಸೋಮವಾರ ದೆಹಲಿಯ (Delhi) ಜಂತರ್ ಮಂತರ್ (Jantar Mantar) ನಿಂದ ಸಂಸತ್ತಿನವರೆಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದು, ಆದರೆ ಇದಕ್ಕೆ ದೆಹಲಿ ಪೊಲೀಸರು (Delhi police) ಅನುಮತಿಯನ್ನೇ ನೀಡಿಲ್ಲ. ಹೀಗಾಗಿ ಅನುಮತಿ ಸಿಗದೇ ಸಿಜೆಪಿ ನಾಯಕರು ಪ್ರತಿಭಟನೆ ನಡೆಸಿದರೆ ಬಂಧನಗಳಾಗುವ ಸಾಧ್ಯತೆಗಳಿವೆ. ಸಿಜೆಪಿ ನಾಯಕರು ನಡೆಸಲಿರುವ ಸಂಸತ್ತಿನ ಮೆರವಣಿಗೆಯಿಂದ ಹೆಚ್ಚಿನ ಭದ್ರತಾ ವಲಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಪೊಲೀಸರು, ಕಾಕ್ರೋಚ್ ಜನತಾ ಪಕ್ಷವು ಸೋಮವಾರ ಬೆಳಗ್ಗೆ ಸಂಸದ್ ಚಲೋ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ. ಆದರೆ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ದೆಹಲಿಯ ಜಂತರ್ ಮಂತರ್‌ನಲ್ಲಿ ಅವರು ನಡೆಸುತ್ತಿರುವ ಸಂಪೂರ್ಣ ಉಪವಾಸ ಮುಷ್ಕರ ಅಕ್ರಮವಾಗಿದೆ. ಇದಕ್ಕೆ ಹೊಸ ಅನುಮತಿಯನ್ನು ಪಡೆಯಲಾಗಿಲ್ಲ ಎಂದು ಹೇಳಿದರು.
ಅಭಿಜಿತ್ ದೀಪ್ಕೆ ಮೈಮೇಲೆ ಮೇಲೆ ಶಾಯಿ ಎರಚಿದ ಮಹಿಳೆ: ʼʼನೀಲಿ ನನ್ನ ಬಣ್ಣ, ಜೈ ಭೀಮ್ʼʼ ಎಂದ ಸಿಜೆಪಿ ಸಂಸ್ಥಾಪಕ
ಅಪಾರ ಪ್ರಮಾಣದಲ್ಲಿ ಜನ ಸೇರಿಸಿಕೊಂಡು ಮೆರವಣಿಗೆ ನಡೆಸುವುದರಿಂದ ಹೆಚ್ಚಿನ ಭದ್ರತಾ ವಲಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೇ ಮಧ್ಯ ದೆಹಲಿ ಭಾಗದಲ್ಲಿ ಸಾರಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಮೆರವಣಿಗೆಯನ್ನು ತಡೆಯಲಾಗುವುದು. ದೊಡ್ಡ ಪ್ರಮಾಣದಲ್ಲಿ ಜನರು ಸಂಸತ್ತಿನ ಕಡೆಗೆ ತೆರಳಿದರೆ ಬಂಧನವನ್ನು ನಡೆಸುವುದಾಗಿ ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಕೇವಲ ಒಂದು ದಿನದ ಅನುಮತಿ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಅವರು ಸಹಿ ಹಾಕಿದ್ದರು. ಆದರೆ ಅವರು ಬಳಿಕ ಅನುಮತಿ ಪಡೆಯದೆ ಪ್ರತಿಭಟನೆಯನ್ನು ಮುಂದುವರಿಸಿದ್ದರು ಎಂದರು.
ಸಂಸತ್ ಚಲೋ ಬಗ್ಗೆ ಸಿಜೆಪಿ ವಕ್ತಾರ ಅಭಿಜೀತ್ ದೀಪ್ಕೆ ನಮಗೆ ಎಂದಿಗೂ ಮಾಹಿತಿ ನೀಡಿಲ್ಲ ಅಥವಾ ಅನುಮತಿಗಾಗಿ ಅರ್ಜಿ ಸಲ್ಲಿಸಿಲ್ಲ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಪ್ರತಿಭಟನೆಯಾಗಿದೆ. ಪ್ರತಿಭಟನೆ ನಡೆಸಲು ಅವರಿಗೆ ಕೇವಲ ಒಂದು ದಿನದ ಅನುಮತಿ ನೀಡಲಾಗಿತ್ತು. ಆದರೂ ಅವರು ಪ್ರತಿಭಟನೆಯನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ವಕ್ತಾರೆ ವೈಷ್ಣವಿ ಗೌರ್, ಮೆರವಣಿಗೆ ಬಗ್ಗೆ ನಾವು ಬಹಳ ಹಿಂದೆಯೇ ತಿಳಿಸಿದ್ದೇವೆ. ಅವರಿಗೆ ನಮ್ಮ ಮೆರವಣಿಗೆ ಯೋಜನೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ನಮಗೆ ಖಂಡಿತಾ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
ಜಂತರ್ ಮಂತರ್ ನಲ್ಲಿ ಬಿಗಿ ಭದ್ರತೆ
ಸಿಜೆಪಿ ನಾಯಕರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಿರುವುದರಿಂದ ದೆಹಲಿಯ ಜಂತರ್ ಮಂತರ್ ಸುತ್ತಮುತ್ತ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿಭಟನಾ ಪ್ರದೇಶದ ಒಳಗೆ 100 ಕ್ಕೂ ಹೆಚ್ಚು ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಪಡೆ ಘಟಕಗಳನ್ನು ನಿಯೋಜಿಸಲಾಗಿದೆ. ಸೋಮವಾರದ ಮೆರವಣಿಗೆಗೆ ಹೆಚ್ಚುವರಿ ಘಟಕಗಳು ಮತ್ತು ಅರೆಸೈನಿಕ ಪಡೆಗಳನ್ನು ಕರೆಸಲಾಗುವುದು. ಸ್ಥಳದ ಸುತ್ತಲೂ ಹೆಚ್ಚುವರಿ ಪೊಲೀಸ್ ವ್ಯಾನ್‌ಗಳನ್ನು ಇರಿಸಲಾಗಿದೆ ಎಂದು ತಿಳಿಸಿದರು.
ಸಿಜೆಪಿ ನಾಯಕರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಮತ್ತು ಪೊಲೀಸರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದು ಸುಳ್ಳು. ನಾವು ಅವರ ಮೇಲೆ ದಾಳಿ ಮಾಡಿಲ್ಲ, ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ. ಅವರ ಎಲ್ಲಾ ಆರೋಪಗಳು ಸುಳ್ಳು. ಸೋನಮ್ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಾವು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದರು.
ಪೊಲೀಸ್ ಆಯುಕ್ತರಾದ ಅನುರಾಗ್ ಕುಮಾರ್ ಅವರು ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದರು. ಸಭೆಯಲ್ಲಿ ಅವರು ಪೊಲೀಸ್ ಭದ್ರತೆ ಹಾಗೂ ದೀಪ್ಕೆ ಮತ್ತು ಅವರ ವಕ್ತಾರರ ದಿನಚರಿಗಳನ್ನು ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.