Shravana Fashion 2025: ಶ್ರಾವಣ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಅತ್ಯಾಕರ್ಷಕ ಎಥ್ನಿಕ್ವೇರ್ಸ್
Shravana Fashion 2025: ಶ್ರಾವಣ ಮಾಸದ ಸಂಭ್ರಮಕ್ಕೆ ಹಬ್ಬಗಳಿಗೆ ಧರಿಸಬಹುದಾದ ಬಗೆಬಗೆಯ ಗ್ರ್ಯಾಂಡ್ ಎಥ್ನಿಕ್ವೇರ್ಗಳು ಕಾಲಿಟ್ಟಿವೆ. ಯಾವ್ಯಾವ ಔಟ್ಫಿಟ್ಗಳು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಟೈ ನಾಟ್ ಫ್ಯಾಷನ್ ಬೋಟಿಕ್ನ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಶಿಲ್ಪಾ ಪೂಜಾರಿ ಇಲ್ಲಿ ವಿವರಿಸಿದ್ದಾರೆ.

ಚಿತ್ರಕೃಪೆ: ಟೈ ನಾಟ್ ಫ್ಯಾಷನ್ ಬೋಟಿಕ್


ಈ ಬಾರಿಯ ಶ್ರಾವಣ ಮಾಸದ ಸಂಭ್ರಮಕ್ಕೆ ವೈವಿಧ್ಯಮಯ ಗ್ರ್ಯಾಂಡ್ ಎಥ್ನಿಕ್ವೇರ್ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ. ಮುಂಬರುವ ಸಾಲು ಸಾಲು ಹಬ್ಬಗಳು ಆಗಮಿಸುವ ಈ ಫೆಸ್ಟೀವ್ ಸೀಸನ್ನ ಕಳೆ ಹೆಚ್ಚಿಸಲು ಸಜ್ಜಾಗಿವೆ.

ವೈವಿಧ್ಯಮಯ ಟ್ರೆಡಿಷನಲ್ ವೇರ್ಸ್
ಹೌದು, ಈ ಬಾರಿಯ ಫೆಸ್ಟೀವ್ ಸೀಸನ್ನಲ್ಲಿ, ಇದೀಗ ಎಥ್ನಿಕ್ವೇರ್ಗಳದ್ದೇ ಕಾರುಬಾರು. ಸೋ, ವೆಸ್ಟರ್ನ್ ಔಟ್ಫಿಟ್ಗಳು ಸೈಡಿಗೆ ಸರಿದಿವೆ. ಏನಿದ್ದರೂ ನೋಡಲು ದೇಸಿ ಲುಕ್ ನೀಡುವ ಅದರಲ್ಲೂ ಗ್ರ್ಯಾಂಡ್ ಲುಕ್ ನೀಡುವಂತಹ ಲೆಕ್ಕವಿಲ್ಲದಷ್ಟು ಬಗೆಯ ಊಹೆಗೂ ಮೀರಿದ ಟ್ರೆಡಿಷನಲ್ವೇರ್ಗಳು ಕಾಲಿಟ್ಟಿವೆ ಎನ್ನುವ ಟೈ ನಾಟ್ ಫ್ಯಾಷನ್ ಬೋಟಿಕ್ನ ಡಿಸೈನರ್ ಶಿಲ್ಪಾ ಪೂಜಾರಿ ಪ್ರಕಾರ, ಈ ಸೀಸನ್ನಲ್ಲಿ ಆದಷ್ಟೂ ಈ ಎಥ್ನಿಕ್ವೇರ್ಗಳನ್ನು ಕೊಳ್ಳುವುದು ಉತ್ತಮ. ವಿನೂತನ ವಿನ್ಯಾಸ ಇಲ್ಲವೇ ನಮಗೆ ಬೇಕಾದಂತಹ ಶೇಡ್ಸ್ನವು ಅತಿ ಹೆಚ್ಚು ಅಪ್ಷನ್ನಲ್ಲಿ ಲಭ್ಯ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಎಥ್ನಿಕ್ವೇರ್ಗಳಿವು
ಈ ಹಬ್ಬದ ಸೀಸನ್ನಲ್ಲಿ ನಾನಾ ವಿನ್ಯಾಸದ ಲಂಗ-ದಾವಣಿ, ಸೀರೆ ಶೈಲಿಯ ಹಾಫ್ ಸೀರೆ, ಲೆಹೆಂಗಾ ಶೈಲಿಯವು, ಕಾಂಟ್ರಾಸ್ಟ್ ಬಣ್ಣದವು, ಗ್ರ್ಯಾಂಡ್ ಲುಕ್ ನೀಡುವ ಕಾಂಚೀಪುರಂ ಫ್ಯಾಬ್ರಿಕ್ನವು, ಇಕ್ಕಟ್ ಹಾಗೂ ಬಿಗ್ ಬಾರ್ಡರ್ ರೇಷ್ಮೆ ಸೀರೆಯಲ್ಲಿ ಹೊಲೆದ ಲಂಗ-ದಾವಣಿಗಳು ಬಂದಿವೆ. ಇನ್ನು ಉದ್ದ-ಲಂಗ ಎಂದು ಕರೆಸಿಕೊಳ್ಳುತ್ತಿದ್ದ, ಲಾಂಗ್ ಸ್ಕರ್ಟ್ನವು ಕೊಂಚ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಟ್ರೆಡಿಷನಲ್ ಟಚ್ ನೀಡುವ ರೇಷ್ಮೆ ಸೀರೆಯ ಫ್ಯಾಬ್ರಿಕ್ನಲ್ಲಿ ಬಾರ್ಡರ್ ಡಿಸೈನ್ನಲ್ಲಿ ಎಂಟ್ರಿ ನೀಡಿವೆ.

ಗ್ರ್ಯಾಂಡ್ ಡಿಸೈನರ್ವೇರ್ಸ್
ಲಾಂಗ್ ಕುರ್ತಾ, ಸಲ್ವಾರ್ ಚೂಡಿದಾರ್ ಕೂಡ ಝರಿ ಬಾರ್ಡರ್ ಹಾಗೂ ಎಥ್ನಿಕ್ ಲುಕ್ ನೀಡುವ ಫ್ಯಾಬ್ರಿಕ್ನಲ್ಲಿ ಬಂದಿವೆ. ಇದರೊಂದಿಗೆ ಸದಾ ಉಡುಪನ್ನು ಗ್ರ್ಯಾಂಡ್ ಆಗಿ ಬಿಂಬಿಸಬಲ್ಲ ದುಪಟ್ಟಾಗಳು ಕೂಡ ಹೆವ್ವಿ ಡಿಸೈನ್ನಲ್ಲಿ ಆಗಮಿಸಿವೆ ಎನ್ನುತ್ತಾರೆ ಶಿಲ್ಪಾ.

ಕಿಡ್ಸ್ ಟ್ರೆಡಿಷನಲ್ವೇರ್ಸ್
ಇನ್ನು, ಮಕ್ಕಳ ಸೌಂದರ್ಯವನ್ನು ಹೆಚ್ಚಿಸಬಲ್ಲ ಮಿನಿ ಲಂಗ-ದಾವಣಿ, ರೆಡಿ ಸೀರೆ ಹಾಗೂ ರೇಷ್ಮೆ ಫ್ಯಾಬ್ರಿಕ್ನಂತೆ ಕಾಣುವ ಫ್ಯಾಬ್ರಿಕ್ನಲ್ಲಿ ಫ್ರಾಕ್ ಹಾಗೂ ಗೌನ್ಗಳು ಆಗಮಿಸಿವೆ. ಇವು ನೋಡಲು ಪುಟ್ಟ ಗೌರಮ್ಮನಂತೆ ಬಿಂಬಿಸುತ್ತವೆ ಎನ್ನುತ್ತಾರೆ ಡಿಸೈನರ್ ಶಿಲ್ಪಾ ಪೂಜಾರಿ.