IPL 2025: ಆರ್ಸಿಬಿ ಪರ 300 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. ಅಲ್ಲದೆ ಈ ಇನಿಂಗ್ಸ್ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ ಆರ್ಸಿಬಿ ಪರ ಐಪಿಎಲ್ನಲ್ಲಿ 300 ಸಿಕ್ಸರ್ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.



ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ 2025ರ ಇಂಡಿಯನ್ ಪೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, 33 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 62 ರನ್ ಬಾರಿಸಿದರು.

ಕೊಹ್ಲಿ-ಬೆಥೆಲ್ ಜುಗಲ್ಬಂದಿ
ಆರ್ಸಿಬಿ ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಜಾಕೋಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 97 ರನ್ ಚಚ್ಚಿದರು. ಸ್ಪೋಟಕ ಬ್ಯಾಟ್ ಮಾಡಿದ ಜಾಕೋಬ್ ಬೆಥೆಲ್ 33 ಎಸೆತಗಳಲ್ಲಿ 55 ರನ್ಗಳನ್ನು ಸಿಡಿಸಿದರು.

5 ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತಮ್ಮ ಸ್ಪೋಟಕ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ 5 ಸಿಕ್ಸರ್ಗಳನ್ನು ಬಾರಿಸಿದ್ದರು. ಆ ಮೂಲಕ ಆರ್ಸಿಬಿ ಪರ ಐಪಿಎಲ್ ಟೂರ್ನಿಯಲ್ಲಿ 300 ಸಿಕ್ಸರ್ಗಳನ್ನು ಪೂರ್ಣಗೊಳಿಸಿದರು.

ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಟಿ20 ಕ್ರಿಕೆಟ್ನಲ್ಲಿ ಏಕೈಕ ತಂಡದ ಪರ 300 ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ, ಐಪಿಎಲ್ ಟೂರ್ನಿ ಹಾಗೂ ಚಾಂಪಿಯನ್ಸ್ ಲೀಗ್ನಲ್ಲಿ ಸಿಡಿಸಿದ್ದಾರೆ.

ಏಕೈಕ ತಂಡದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ: 300*
ಕ್ರಿಸ್ ಗೇಲ್: 263
ರೋಹಿತ್ ಶರ್ಮಾ: 262
ಕೈರೊನ್ ಪೊಲಾರ್ಡ್: 258
ಎಂಎಸ್ ಧೋನಿ: 257

ವಿರಾಟ್ ಕೊಹ್ಲಿ 505 ರನ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಆಡಿದ 11 ಇನಿಂಗ್ಸ್ಗಳಲ್ಲಿ 63.12ರ ಸರಾಸರಿ ಮತ್ತು 143.47ರ ಸ್ಟ್ರೈಕ್ ರೇಟ್ನಲ್ಲಿ 505 ರನ್ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.