Wedding Fashion 2026: ಟ್ರೆಡಿಷನಲ್ ಕೂದಲ ವಿನ್ಯಾಸಕ್ಕೆ ಸಾಥ್ ನೀಡುತ್ತಿರುವ ಹೇರ್ ಜ್ಯುವೆಲರಿಗಳು
ಮದುವೆಯ ಸಂಭ್ರಮ ಹೆಚ್ಚಿಸಲು ಹೆಣ್ಣುಮಕ್ಕಳಿಗೆ ಇಷ್ಟವಾಗುವಂತಹ ನಾನಾ ವಿನ್ಯಾಸದ ಹೇರ್ ಜ್ಯುವೆಲರಿಗಳು ಇದೀಗ ವೆಡ್ಡಿಂಗ್ ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಜತೆಗೆ ನೋಡಲು ಆಕರ್ಷಕವಾಗಿ ಕಾಣುವ ಇವು ಸಾಂಪ್ರದಾಯಿಕ ಶೈಲಿಗೆ ಹೊಂದುವಂತಹ ನಾನಾ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ಈ ಕುರಿತಂತೆ ಇಲ್ಲಿವೆ ಡಿಟೇಲ್ಸ್.
ಚಿತ್ರಕೃಪೆ: ಪಿಕ್ಸೆಲ್ -
ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್ನಲ್ಲಿ ಇದೀಗ ನಾನಾ ವಿನ್ಯಾಸದ ಹೇರ್ ಜ್ಯುವೆಲರಿಗಳು ಬಂದಿವೆ. ಮದುವೆಯಾಗುವ ಹೆಣ್ಣು ಮಾತ್ರವಲ್ಲ, ಭಾಗವಹಿಸುವ ಇತರೇ ಹೆಣ್ಣು ಮಕ್ಕಳು ಕೂಡ ಧರಿಸಬಹುದಾದ ಈ ಹೇರ್ ಜ್ಯುವೆಲರಿಗಳು ನಾನಾ ವಿನ್ಯಾಸಗಳಲ್ಲಿ ಟ್ರೆಂಡಿಯಾಗಿವೆ. ಜತೆಗೆ ನೋಡಲು ಆಕರ್ಷಕವಾಗಿ ಕಾಣುವ ಇವು ಸಾಂಪ್ರದಾಯಿಕ ಶೈಲಿಗೆ ಹೊಂದುವಂತಹ ನಾನಾ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ.
ಆಕರ್ಷಕ ಜಡೆ ಸಿಂಗಾರಕ್ಕೆ ಸಾಥ್
ಹೂ ಬಳ್ಳಿಯ ಕುಸುರಿ ಹೊಂದಿರುವಂತವು, ನವಿಲು, ಗಂಡು ಭೇರುಂಡ, ಜಿಂಕೆ, ನಾಗರ ಹೀಗೆ ಪ್ರಾಣಿ ಪಕ್ಷಿಗಳ ಎಂಬೋಸಿಂಗ್ ಹೊಂದಿದಂತವು, ಕೃಷ್ಣ ರಾಧೆ, ಗೋಪಾಲ ಹೀಗೆ ನಾನಾ ಅವತಾರಗಳ ಪೆಂಡೆಂಟ್ ರೀತಿಯ ಜಡೆ ಬಿಲ್ಲೆಗಳನ್ನೊಳಗೊಂಡ ಹೇರ್ ಜ್ಯುವೆಲರಿ ಕ್ಲಿಪ್ಗಳು ಈ ವೆಡ್ಡಿಂಗ್ ಸೀಸನ್ನಲ್ಲಿ ಪಾಪುಲರ್ ಆಗಿವೆ.
ವೆರೈಟಿ ಹೇರ್ ಜ್ಯುವೆಲ್ ಡಿಸೈನ್ಸ್
ಇನ್ನು, ಜಡೆ ಬಂಗಾರ, ಟೆಂಪಲ್ ಡಿಸೈನ್, ಜಡೆ ಆಕ್ಸೆಸರೀಸ್, ಮುತ್ತಿನ ಜಡೆ, ನಾಗರ ಜಡೆ, ಮ್ಯಾಂಗೋ, ಪೀಕಾಕ್, ಗೋಲ್ಡನ್ ಜಡೆ ಹೀಗೆ ನಾನಾ ಹೆಸರಿನಲ್ಲಿ ಟ್ರೆಂಡಿಗೆ ತಕ್ಕಂತೆ ಬಿಡುಗಡೆಗೊಂಡು ಹೆಣ್ಣು ಮಕ್ಕಳ ಪ್ರೀತಿಗೆ ಇವು ಪಾತ್ರವಾಗಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಕೂದಲಿಗೆ ಟ್ರೆಡಿಷನಲ್ ಜಡೆ ಬಿಲ್ಲೆಯ ಅಲಂಕಾರ
ಧರಿಸುವವರು ಉದ್ದನೆಯ ಜಡೆ ಹೆಣೆದುಕೊಂಡರೆ ಸಾಕು, ಅದಕ್ಕೆ ಫಿಟ್ಆಗುವ ರೀತಿಯಲ್ಲಿ ರೆಡಿ ಇರುವ ಈ ಜಡೆ ಬಿಲ್ಲೆ ಜ್ಯುವೆಲ್ಗಳನ್ನು ಹಾಕಬಹುದು. ಮಕ್ಕಳ ಪುಟ್ಟ ಜಡೆಗೂ ಇವನ್ನು ಹಾಕಬಹುದು. ರೆಡಿ ಇರುವ ಜಡೆ ಕಟ್ಟಿದಲ್ಲಿ ಜಡೆ ಸಿಂಗಾರ ಕಂಪ್ಲೀಟ್ ಆಗುತ್ತದೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ರಕ್ಷಾ.
ಅವರ ಪ್ರಕಾರ, ಜಡೆಯ ಸಿಂಗಾರವೆಂದರೇ ಮೊದಲೆಲ್ಲಾ ಗಂಟೆಗಟ್ಟಲೇ ಸಮಯ ಹಿಡಿಯುತ್ತಿತ್ತು. ಇದೀಗ ಈ ರೆಡಿಮೇಡ್ ಜಡೆ ಜ್ಯುವೆಲ್ಗಳಿಂದ ಜಡೆಯ ಸಿಂಗಾರ ಮಾಡುವುದು ಸುಲಭವಾಗಿದೆಯಂತೆ.
ಜಡೆ ಸಿಂಗಾರ ಪ್ರಿಯರಿಗೆ ಟಿಪ್ಸ್
- ಸೀರೆ, ದಾವಣಿ-ಲಂಗ ಹಾಗೂ ಲೆಹೆಂಗಾಗಳಿಗೂ ಟ್ರೆಡಿಷನಲ್ ಜಡೆ ಬಿಲ್ಲೆ ಸಿಂಗಾರ ಸೂಟ್ ಆಗುತ್ತದೆ.
- ಕೂದಲಿನ ಲೆಂತ್ಗೆ ಅನುಗುಣವಾಗಿ ಸೂಕ್ತವಾಗಿರುವ ಹೇರ್ ಜ್ಯುವೆಲ್ ಬಳಸಿ.
- ಜಡೆ ತೆಳುವಾಗಿದ್ದಲ್ಲಿ ಲೈಟ್ವೇಟ್ ಹೇರ್ ಆಕ್ಸೆಸರೀಸ್ ಆಯ್ಕೆ ಮಾಡಿ.
- ಹಬ್ಬ ಮದುವೆ ಸಮಾರಂಭಗಳಿಗೆ ಧರಿಸಿದಲ್ಲಿ ಆಕರ್ಷಕವಾಗಿ ಕಾಣುವುದು.