DK Shivakumar: ಗಾಳ ಹಾಕಿ ಮೀನು ಹಿಡಿಯುವುದು ಹೇಗೆಂದು ನನಗೆ ಗೊತ್ತು: ಡಿ.ಕೆ. ಶಿವಕುಮಾರ್
World Fisheries Day: ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆ ಬಹಳ ತಾಳ್ಮೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ನ.22: ಕಾಂಗ್ರೆಸ್ ಸರ್ಕಾರ (Congress Government) ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುತ್ತಿದ್ದು, ಈ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಮೀನುಗಾರರಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯ ಮೇಳದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 10 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಈ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಯಲ್ಲಿ ವಿದ್ಯುತ್ ಇಲಾಖೆಗೆ 3 ಸಾವಿರ ಕೋಟಿಯಷ್ಟು ಮೊತ್ತ ಪಾವತಿಸಬೇಕಾಗಿದೆ. ಈ ಕೆರೆಗಳ ಪೈಕಿ ಸಣ್ಣ ಕೆರೆಗಳನ್ನು ಸೊಸೈಟಿಗಳಿಗೆ ಜವಾಬ್ದಾರಿ ನೀಡುತ್ತೇವೆ. ಉಳಿದ ಕೆರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗುವುದು. ಇದನ್ನು ಬಳಸಿಕೊಂಡು ನೀವು ಮೀನುಗಾರಿಕೆ ವೃತ್ತಿ ಮಾಡಬೇಕು ಎಂದು ತಿಳಿಸಿದರು.
ಮೀನು ಎಂದರೆ ಲಕ್ಷ್ಮಿ. ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತೀರಿ. ನಿಮಗೆ ಸೂರ್ಯ, ಚಂದ್ರ ಎರಡೇ ಕಾಣುವುದು. ಉಳಿದಂತೆ ನಿಮ್ಮ ಆತ್ಮಬಲದಿಂದ ಇದನ್ನು ಮಾಡಿಕೊಂಡು ಬರುತ್ತಿದ್ದೀರಿ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ. ನಾನು ಮುಖ್ಯಮಂತ್ರಿಗಳಿಗೆ ಮಶೀರ್ ಫಿಶ್ ತೋರಿಸಿದೆ. ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆ ಬಹಳ ತಾಳ್ಮೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಒಂದು ಮೀನು ಸಿಗುವುದಿಲ್ಲ. ಅಂತಹ ತಾಳ್ಮೆ ವೃತ್ತಿ ನಡೆಸುತ್ತಿರುವ ನೀವು ಶ್ರಮಜೀವಿಗಳು ಎಂದು ಬಣ್ಣಿಸಿದರು.
ಇದನ್ನೂ ಓದಿ : ಸಿಎಂ ದೊಡ್ಡವರು, ಅವರ ಅಧಿಕಾರವನ್ನು ನಾವ್ಯಾರೂ ಪ್ರಶ್ನಿಸುತ್ತಿಲ್ಲ: ಡಿಕೆಶಿ
ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ
ನಿಮಗೆ ವಿಶ್ವ ಮೀನುಗಾರಿಕೆ ದಿನದ ಶುಭಾಶಯಗಳು. ನಿಮಗೆ ಒಳ್ಳೆಯದಾಗಲಿ. ಮುಂದಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಮೀನುಗಾರಿಕೆಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗುವುದು. ನಾವು ನಿಮ್ಮ ಜತೆಗೆ ಇದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.