ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿಯ ಮಗನೇ ಉತ್ತರಾಧಿಕಾರಿಯಾಗಬೇಕೆಂದು ಇರಾನ್‌ನ ಎಲೈಟ್ ಫೋರ್ಸ್ ಬಯಸಿದ್ದು ಏಕೆ?

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯ ಜಂಟಿ ದಾಳಿಯಿಂದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ಬಳಿಕ ಅವರ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಈ ಆಯ್ಕೆಗೆ ಕಾರಣ ಈ ಒಂದು ಕಾರಣ ಸಾಕಿತ್ತು. ಅಂತಹ ಕಾರಣ ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮೊಜ್ತಬಾ ಖಮೇನಿಗೆ ಅಧಿಕಾರ ಸಿಗಲು ಕಾರಣ ಏನು ಗೊತ್ತೇ?

ಸಂಗ್ರಹ ಚಿತ್ರ -

ಟೆಹರಾನ್‌: ಇಸ್ರೇಲ್ (Israel) ಹಾಗೂ ಅಮೆರಿಕ (america) ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps ) ಒತ್ತಾಯದ ಮೇರೆಗೆ ಅವರ ಸ್ಥಾನಕ್ಕೆ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಸುಮಾರು 37 ವರ್ಷಗಳ ಕಾಲ ಇರಾನ್ ಅನ್ನು ಆಳಿದ ಅಯತೊಲ್ಲಾ ಅಲಿ ಖಮೇನಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ ಬಳಿಕ ತಕ್ಷಣವೇ ಉತ್ತರಾಧಿಕಾರಿಯ ನೇಮಕಕ್ಕೆ ಒತ್ತಡಗಳು ಹೆಚ್ಚಾಗಿತ್ತು.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೇವಲ ಎಂಟು ತಿಂಗಳಲ್ಲಿ ಇರಾನ್ ಮೇಲೆ ಇಸ್ರೇಲ್ ಜೊತೆ ಸೇರಿ ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ನಾಯಕನ ಹತ್ಯೆ ಮಾಡಿಸಿದರು. ಇದರಿಂದ ಇರಾನ್ ನಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಸುಪ್ರೀಂ ನಾಯಕ ಅನುಪಸ್ಥಿತಿಯು ಇರಾನ್‌ನ ಅಧಿಕಾರ ರಚನೆಯ ಎರಡು ಸ್ತಂಭಗಳಾದ ಕ್ಲೆರಿಕಲ್ ಸ್ಥಾಪನೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಅಸ್ಥಿರಗೊಳಿಸುತ್ತದೆ.

ಖಮೇನಿ ಪುತ್ರ ಮೊಜ್ತಬಾ ಖಮೇನಿ ಇರಾನ್‌ನ ಹೊಸ ಸರ್ವೋಚ್ಚ ನಾಯಕ

ಈ ಹಿನ್ನೆಲೆಯಲ್ಲಿ 88 ಸದಸ್ಯರ ಕ್ಲೆರಿಕಲ್ ಪ್ಯಾನಲ್ ಆದ ತಜ್ಞರ ಸಭೆಯು ಮೊಜ್ತಾಬಾ ಖಮೇನಿ ಅವರನ್ನು ದೇಶದ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಿದೆ. ಅವರ ನೇಮಕಾತಿಯನ್ನು ಐಆರ್‌ಜಿಸಿ ಬೆಂಬಲಿಸಿದ್ದು, ಧಾರ್ಮಿಕ ನಾಯಕರು ಕೂಡ ಒತ್ತಾಯಿಸಿದ್ದರು ಎನ್ನಲಾಗಿದೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್

ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದೇಶದ ಪ್ರಬಲ ಶಕ್ತಿಯಾಗಿದೆ. ಇದು ಸರ್ವೋಚ್ಚ ನಾಯಕನ ಆಜ್ಞೆಗಳನ್ನು ಮಾತ್ರ ಪಾಲಿಸುತ್ತದೆ. ಇದಕ್ಕೆ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಶಸ್ತ್ರಾಗಾರದ ಮೇಲ್ವಿಚಾರಣೆ ಮಾಡುವ ಮತ್ತು ವಿದೇಶಿ ಕಾರ್ಯಾಚರಣೆಗಳನ್ನು ನಡೆಸುವ ಅಧಿಕಾರವಿದೆ. ಇದೀಗ ಈ ಪಡೆಯೇ ಮಧ್ಯಪ್ರಾಚ್ಯದಾದ್ಯಂತ ಇರಾನ್ ದಾಳಿಯನ್ನು ವಿಸ್ತರಿಸಲು ಕಾರಣವಾಗಿದೆ.

1980ರ ದಶಕದಲ್ಲಿ ನಡೆದ ಇರಾಕ್‌ನೊಂದಿಗಿನ ಯುದ್ಧದ ಸಮಯದಲ್ಲಿ ಇದು ಶಕ್ತಿಶಾಲಿಯಾಗಿ ಬೆಳೆಯಿತು. ಬಳಿಕ ಒಮ್ಮೆ ವಿಸರ್ಜನೆಯಾದರೂ ಅಲಿ ಖಮೇನಿ ಅದಕ್ಕೆ ಆರ್ಥಿಕ ಮತ್ತು ಗುಪ್ತಚರ ಶಕ್ತಿಯನ್ನು ನೀಡಿದರು. ಇದರಿಂದಾಗಿ ಅದು ತನ್ನದೇ ಆದ ಗುಪ್ತಚರ ವಿಭಾಗಗಳನ್ನು ಹೊಂದಿದೆ.

ಮೊಜ್ತಾಬಾ ಅವರ ಆಯ್ಕೆಗಾಗಿ ಶಿಯಾ ಶಕ್ತಿಯ ಪ್ರಮುಖ ಸ್ಥಾನವಾದ ಕೋಮ್‌ನಲ್ಲಿ ಸಭೆ ನಡೆಯುತ್ತಿದ್ದಾಗ ಇಸ್ರೇಲ್ ಆ ಕಟ್ಟಡವನ್ನು ತನ್ನ ಕ್ಷಿಪಣಿಗಳಿಂದ ನಾಶಪಡಿಸಲಾಗಿದೆ ಎಂದು ಹೇಳಿತ್ತು. ಆದರೆ ಇಸ್ರೇಲ್ ದಾಳಿ ನಡೆಸಿದಾಗ ಕಟ್ಟಡ ಖಾಲಿಯಾಗಿತ್ತು ಎಂದು ಇರಾನ್ ನ ಮಾಧ್ಯಮವೊಂದು ವರದಿ ಮಾಡಿದೆ.

ಮೊಜ್ತಾಬಾ ಆಯ್ಕೆ ಏಕೆ?

ಮೊಜ್ತಾಬಾ ಅವರು 57ನೇ ವಯಸ್ಸಿನಲ್ಲಿ ತಂದೆಯ ಕಚೇರಿಯ ನಿರ್ವಹಣೆಯನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಅಸಾಂಪ್ರದಾಯಿಕ ಯುದ್ಧದಲ್ಲಿ ಪರಿಣತಿ ಹೊಂದಿರುವ ಶಾಖೆಯಾದ ಕುಡ್ಸ್ ಫೋರ್ಸ್‌ನ ಉನ್ನತ ಶ್ರೇಣಿಯ ಜೊತೆ ಆಳವಾದ ಸಂಬಂಧವನ್ನು ಹೊಂದಿದ್ದರು. ಹೀಗಾಗಿ ಅವರ ನೇಮಕಾತಿಗೆ ಇರಾನ್ ಗಾರ್ಡ್‌ಗಳು ಒತ್ತಾಯಿಸಿದ್ದರು. ಈ ಬಿಕ್ಕಟ್ಟಿನ ಸಮಯದಲ್ಲಿ ಇರಾನ್ ಅನ್ನು ಮುನ್ನಡೆಸಲು ಅಗತ್ಯವಾದ ಅರ್ಹತೆಗಳನ್ನು ಮೊಜ್ತಾಬಾ ಹೊಂದಿದ್ದರು.

ಮೊಜ್ತಾಬಾ ಅವರು 1987 ರ ಸುಮಾರಿಗೆ ಇಸ್ಲಾಮಿಕ್ ಮಿಲಿಟರಿ ದಳಕ್ಕೆ ಸೇರಿದ್ದು, 1980 ರಿಂದ 1988 ರವರೆಗೆ ಇರಾಕ್ ಜೊತೆಗಿನ ಇರಾನ್‌ನ ದೀರ್ಘ ಯುದ್ಧದ ಕೊನೆಯ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಅವರ ತಂದೆ ಅಯತೊಲ್ಲಾ ಅಲಿ ಖಮೋನಿ ದೇಶದ ಸರ್ವೋಚ್ಚ ನಾಯಕರಾದರು. ತಂದೆಗಿಂತಲೂ ಹೆಚ್ಚು ಕಠಿಣ ನಿಲುವನ್ನು ಹೊಂದಿರುವ ಮೊಜ್ತಾಬಾ ಖಮೇನಿ ಇರಾನ್‌ನಲ್ಲಿ ಇತ್ತೀಚೆಗೆ ನಡೆದಿರುವ ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನಗಳ ಹಿಂದೆ ಅವರೇ ಇದ್ದರು ಎನ್ನಲಾಗುತ್ತಿದೆ.

US-Israel-Iran War: ಇರಾನ್‌ ಸುಪ್ರೀಂ ಲೀಡರ್‌ ಯಾರೇ ಆದ್ರೂ ಟಾರ್ಗೆಟ್:‌ ಇಸ್ರೇಲ್‌ ಎಚ್ಚರಿಕೆ

ಮೊಜ್ತಾಬಾ ಅವರ ಆಯ್ಕೆಯು ದೇಶದ ಭದ್ರತೆ ಮತ್ತು ಮಿಲಿಟರಿ ಉಪಕರಣಗಳ ಬಳಕೆ ವಿಚಾರದಲ್ಲಿ ಒಂದು ಪ್ರಮುಖ ನಿರ್ಧಾರವಾಗಿದೆ. ಆದರೆ ಇವರ ಆಯ್ಕೆಗೆ ಎಲ್ಲರೂ ಒಮ್ಮತ ವ್ಯಕ್ತಪಡಿಸುವುದಿಲ್ಲ. ಯಾಕೆಂದರೆ ಇವರು ಆಡಳಿತ ನಿಷ್ಠರಾಗಿದ್ದರೂ ಅಯತೊಲ್ಲಾ ಅಲಿ ಖಮೇನಿ ಅವರ ಆಡಳಿತದ ನಿರಂತರತೆಯ ಸಂಕೇತವಾಗಿ ಕಾಣಲಾಗುತ್ತದೆ.

ದೇಶದ ಸರ್ವೋಚ್ಚ ನಾಯಕನ ಸ್ಥಾನಕ್ಕೆ ಅಯತೊಲ್ಲಾ ಅವರ ಮೊಮ್ಮಗ ಸಯ್ಯದ್ ಹಸನ್ ಖಮೇನಿ ಮತ್ತು ಅಲಿರೆಜಾ ಅರಾಫಿ ಅವರ ಹೆಸರುಗಳು ಕೇಳಿ ಬಂದಿತ್ತು. ಆದರೂ ಮೊಜ್ತಬಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿರುವುದು ಇರಾನ್ ತನ್ನ ದೇಶದ ಈ ಹಿಂದಿನ ಕ್ರಾಂತಿಕಾರಿ ನಿಲುವನ್ನು ಮುಂದುವರಿಸಲು ಒಪ್ಪಿಕೊಂಡಂತಾಗಿದೆ.