ಕೊಲ್ಕತಾ, ಜು. 22: ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಪಕ್ಷದ ಬಂಡಾಯ ಶಾಸಕ ಮದನ್ ಮಿತ್ರಾ (Madan Mitra) ಅವರಿಗೆ ಮಾನಹಾನಿ ಆರೋಪದಡಿ ಕಾನೂನು ಪ್ರಕಾರ ನೋಟಿಸ್ ಜಾರಿಗೊಳಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟಿಎಂಸಿ ಬಿಡುಗಡೆ ಮಾಡಿದ ಕಾನೂನು ನೋಟಿಸ್ ಪ್ರಕಾರ, ಮದನ್ ಮಿತ್ರಾ ಸಾರ್ವಜನಿಕವಾಗಿ ಅಭಿಷೇಕ್ ಬ್ಯಾನರ್ಜಿಯನ್ನು ಅಪರಾಧಿ, ಕೊಲೆಗಾರ ಎಂದು ಕರೆದಿರುವುದಲ್ಲದೆ, ಹಣ ನೀಡಿ ಸುಪಾರಿ ಹತ್ಯೆ ಮಾಡಿಸುತ್ತಾರೆ ಹಾಗೂ ಅಪರಾಧ ಮನೋಭಾವ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇವು ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಯಾವುದೇ ವಾಸ್ತವಿಕ ಆಧಾರವಿಲ್ಲದ ಹೇಳಿಕೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನೋಟಿಸ್‌ನಲ್ಲಿ, "ನೀವು ನನ್ನ ಕಕ್ಷಿದಾರರ ವಿರುದ್ಧ ಹಲವು ಸುಳ್ಳು, ದುರುದ್ದೇಶಪೂರಿತ ಆರೋಪ ಮಾಡಿದ್ದೀರಿ. ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರವಿಲ್ಲ. ನೀವು ನೀಡಿರುವ ಪ್ರತಿಯೊಂದು ಹೇಳಿಕೆಯೂ ಸುಳ್ಳು ಎಂಬುದು ನಿಮಗೂ ತಿಳಿದಿದೆ" ಎಂದು ಉಲ್ಲೇಖಿಸಲಾಗಿದೆ.
ಈ ಬೆಳವಣಿಗೆ ಟಿಎಂಸಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ನಡೆದಿದೆ. ಕೆಲ ದಿನಗಳ ಹಿಂದೆ ಹಿರಿಯ ಶಾಸಕ ಮದನ್ ಮಿತ್ರಾ, ಮಾಜಿ ರಾಜ್ಯಸಭಾ ಸದಸ್ಯ ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾಗಿದ್ದರು. ಪಕ್ಷ ತೊರೆಯಲು ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವೇ ಪ್ರಮುಖ ಕಾರಣ ಎಂದು ಅವರು ಬಹಿರಂಗವಾಗಿ ಆರೋಪಿಸಿದ್ದರು.
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ತಾತ್ಕಾಲಿಕ ರಿಲೀಫ್; ಕಚೇರಿ ವಿರುದ್ಧದ ಬುಲ್ಡೋಜರ್ ಕ್ರಮಕ್ಕೆ ಹೈಕೋರ್ಟ್ ತಡೆ
"ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪಕ್ಷದ ಸಂಘಟನೆಯನ್ನು ಬಲಪಡಿಸುವ ಬದಲು ಅಭಿಷೇಕ್ ಬ್ಯಾನರ್ಜಿ ಅವರನ್ನು ಮುಂದಿರಿಸುವುದರತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ. ಟಿಎಂಸಿ ಒಬ್ಬ ವ್ಯಕ್ತಿಯ ಪಕ್ಷವಲ್ಲ" ಎಂದು ಮದನ್ ಮಿತ್ರಾ ಹೇಳಿದ್ದಾರೆ.
ಇದಲ್ಲದೆ, ಪಕ್ಷದ ವಿವಿಧ ಸಮಿತಿಗಳ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಆತಂಕಗಳನ್ನು ಹಲವು ಬಾರಿ ಮಮತಾ ಬ್ಯಾನರ್ಜಿ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮದನ್ ಮಿತ್ರಾ ಆರೋಪಿಸಿದ್ದಾರೆ.
ಈ ನಡುವೆ, ಟಿಎಂಸಿಯಲ್ಲಿ ಬಂಡಾಯ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ, "ಅಗತ್ಯವಿದ್ದರೆ ಪಕ್ಷವನ್ನು ಮತ್ತೆ ಆರಂಭಿಸುವ ಶಕ್ತಿಯೂ ನಮ್ಮಲ್ಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹಳೆಯ ನಾಯಕರ ನಿರ್ಗಮನದಿಂದ ಟಿಎಂಸಿ ದುರ್ಬಲವಾಗುವುದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಮದನ್ ಮಿತ್ರಾ ಇಲ್ಲಿಯವರೆಗೆ ಅಭಿಷೇಕ್ ಬ್ಯಾನರ್ಜಿ ಕಳುಹಿಸಿರುವ ಕಾನೂನು ನೋಟಿಸ್‌ಗೆ ಅಧಿಕೃತ ಉತ್ತರ ನೀಡಿಲ್ಲ. ಆದರೆ ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಟಿಎಂಸಿಯೊಳಗಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಬಹಿರಂಗವಾಗಿರುವುದನ್ನು ತೋರಿಸಿದೆ.