ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜಕೀಯ ಜೀವನದಲ್ಲಿ ಅಧಿಕಾರವನ್ನೇ ಕಳೆದುಕೊಳ್ಳದ ನಾಯಕ ಅಜಿತ್ ಪವಾರ್; ಪೊಲಿಟಿಕಲ್‌ ಜರ್ನಿ ಹೇಗಿತ್ತು?

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಅಧಿಕಾರಕ್ಕೇರಿದ ಮೇಲೆ ಮತ್ತೆ ಒಮ್ಮೆಯೂ ಅಧಿಕಾರದಿಂದ ಕೆಳಗಿಳಿದಿಲ್ಲ. ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾದರೂ ಅಜಿತ್ ಪವರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra politics) ಸಾಕಷ್ಟು ತಲ್ಲಣಗಳು ಆಗಿದ್ದರೂ ಕೂಡ ಅಜಿತ್ ಪವರ್ (Maharashtra Deputy Chief Minister Ajit pawar) ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯ ರಂಗದಲ್ಲಿ ಎಂದಿಗೂ ಅಧಿಕಾರವನ್ನೇ ಕಳೆದುಕೊಳ್ಳದ ನಾಯಕನಾಗಿ ಗುರುತಿಸಿಕೊಂಡಿರುವ ಅಜಿತ್ ಪವಾರ್ ಸಾವು ಬಳಿ ಬರುವವರೆಗೂ ಅಧಿಕಾರದಲ್ಲೇ ಉಳಿದಿದ್ದರು. ಬಿಜೆಪಿ ನಾಯಕ (BJP Leader) ದೇವೇಂದ್ರ ಫಡ್ನವೀಸ್ ಅಧಿಕಾರದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ (Deputy Chief Minister) ಪವಾರ್ ಬಳಿಕ ಏಕನಾಥ್ ಶಿಂಧೆ ಅವರು ಅಧಿಕಾರಕ್ಕೇರಿದಾಗಲೂ ಉಪಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡರು.

ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಎಂದಿಗೂ ಅಧಿಕಾರದಿಂದ ಹೊರಗುಳಿಯದ ಒಬ್ಬ ವ್ಯಕ್ತಿ ಎಂದರೆ ಅಜಿತ್ ಪವಾರ್. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು 2019ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದಾಗ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅನಂತರ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಮುನ್ನಡೆಸಿದ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾದಾಗ ಅವರಿಗೂ ಉಪಮುಖ್ಯಮಂತ್ರಿಯಾಗಿದ್ದರು. ಶಿವಸೇನೆಯ ಹಲವು ನಾಯಕರು ಎಂವಿಎ ಸರ್ಕಾರವನ್ನು ತ್ಯಜಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಏಕನಾಥ್ ಶಿಂಧೆ ಅವರ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದರು.

ಮಹಾರಾಷ್ಟ್ರದಲ್ಲಿ ಐದು ಬಾರಿ ಡಿಸಿಎಂ ಆಗಿದ್ದ ಅಜಿತ್‌ "ಪವರ್‌" ಹೇಗಿತ್ತು ಗೊತ್ತಾ?

ಅಜಿತ್ ಪವಾರ್ ಯಾರು?

1959ರ ಜುಲೈ 22ರಂದು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ದಿಯೋಲಾಲಿ ಪ್ರವರ ಎಂಬ ಹಳ್ಳಿಯಲ್ಲಿ ಜನಿಸಿದ ಅಜಿತ್ ಪವಾರ್ ಅವರ ರಾಜಕೀಯ ಜೀವನದ ಮೇಲೆ ಗ್ರಾಮೀಣ ಭಾರತದ ಸಾಮಾಜಿಕ, ಆರ್ಥಿಕ ಸವಾಲುಗಳು ಸಾಕಷ್ಟು ಪ್ರಭಾವ ಬೀರಿತ್ತು. ಇದರ ಪರಿಣಾಮದಿಂದಲೇ ಅವರು ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒಟ್ಟು ನೀಡಿದರು. ಇದು ಅವರ ರಾಜಕೀಯ ಭವಿಷ್ಯಕ್ಕೆ ಭದ್ರ ಅಡಿಪಾಯವಾಯಿತು.

ಶಿಕ್ಷಣ ಅರ್ಧದಲ್ಲೇ ಮೊಟಕು

ಮುಂಬೈನ ಪ್ರಸಿದ್ಧ ರಾಜ್‌ಕಮಲ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಅನಂತರಾವ್ ಪವಾರ್ ಅವರು ಸಾವನ್ನಪ್ಪಿದ್ದ ಬಳಿಕ ಅಜಿತ್ ಪವಾರ್ ಅವರ ಶಿಕ್ಷಣ ಅರ್ಧದಲ್ಲೇ ಮೊಟಕುಗೊಂಡಿತ್ತು. ಬಳಿಕ ಅವರು ತಮ್ಮ ಕುಟುಂಬವನ್ನು ಪೋಷಿಸಲು ಕೆಲಸಕ್ಕೆ ಸೇರಿಕೊಂಡರು.

ರಾಜಕೀಯ ಪ್ರಯಾಣ

1982ರಲ್ಲಿ ಅವರ ಚಿಕ್ಕಪ್ಪ ಶರದ್ ಪವಾರ್ ಅವರು ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾದರು. ಇದು ಅವರ ಜೊತೆ ಇದ್ದ ಅಜಿತ್ ಪವಾರ್ ಅವರಿಗೆ ಗ್ರಾಮೀಣ ಆರ್ಥಿಕ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿತ್ತು. ವೃತ್ತಿಜೀವನದುದ್ದಕ್ಕೂ ಪ್ರಮುಖ ಸಚಿವ ಸ್ಥಾನಗಳಲ್ಲಿ ಇದ್ದ ಅಜಿತ್ ಪವಾರ್, 1991 ರಿಂದ 1992ರ ವರೆಗೆ ಕೃಷಿ ಮತ್ತು ವಿದ್ಯುತ್ ಖಾತೆ ಸಚಿವರಾಗಿ, 1992 ರಿಂದ 1993ರವರೆಗೆ ನೀರು ಸರಬರಾಜು, ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ, 1999 ರಿಂದ 2004 ರವರೆಗೆ ನೀರಾವರಿ ಸಚಿವರಾಗಿ, 2004ರಲ್ಲಿ ಐದು ತಿಂಗಳ ಕಾಲ ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು ಮತ್ತು ನೈರ್ಮಲ್ಯ, ನೀರಾವರಿ ಸಚಿವರಾಗಿ, 2004ರಿಂದ 2010ರವರೆಗೆ ಜಲಸಂಪನ್ಮೂಲ ಸಚಿವರಾಗಿ, 2010ರಿಂದ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಮಹತ್ವದ ಘಟನೆಗಳಿಗೆ ಸಾಕ್ಷಿ

2019ರಲ್ಲಿ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಬಿಟ್ಟು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿ ಮಾಡಿಕೊಂಡ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಒಲಿದು ಬಂತು. ಆದರೆ ಮೂರು ದಿನಗಳ ಬಳಿಕ ಉಂಟಾದ ರಾಜಕೀಯ ತಲ್ಲಣದಿಂದ ಫಡ್ನವೀಸ್ ರಾಜೀನಾಮೆ ನೀಡಬೇಕಾಯಿತು. ಇದರ ಬಳಿಕ ಎನ್ ಸಿಪಿ ನಾಯಕ, ಚಿಕ್ಕಪ್ಪ ಶರದ್ ಪವಾರ್ ಬಳಿ ಮರಳಿದ ಅಜಿತ್ ಪವಾರ್ ಅವರಿಗೆ ಮತ್ತೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದಾಗ ಉಪಮುಖ್ಯಮಂತ್ರಿ ಸ್ಥಾನ ಒಲಿಯಿತು. ಮತ್ತೊಮ್ಮೆ 2023ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾದ ಬಳಿಕ ಅಜಿತ್ ಪವಾರ್ ಚಿಕ್ಕಪ್ಪನ ವಿರುದ್ಧ ಹೋಗಿ ಬಿಜೆಪಿಯ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡರು. ಹೀಗಾಗಿ ಇಲ್ಲೂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಿತು.

ಅವರ ಈ ಆಸೆ ಈಡೇರಲಿಲ್ಲ

ತಮ್ಮ ಪಕ್ಷವು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಜಿತ್ ಪವಾರ್ ಹಿಂದೊಮ್ಮೆ ಘೋಷಿಸಿದ್ದರು. ಅಲ್ಲದೇ ಇದಕ್ಕಾಗಿ ಪವಾರ್ ನಗರದಲ್ಲಿ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಯೋಜನೆಗಳ ಬಗ್ಗೆಯೂ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನ

ವೈಯಕ್ತಿಕ ಜೀವನ

ಮಹಾರಾಷ್ಟ್ರದ ಮಾಜಿ ಸಚಿವ ಪದಮ್‌ಸಿನ್ಹ್ ಬಾಜಿರಾವ್ ಪಾಟೀಲ್ ಅವರ ಪುತ್ರಿ ಸುನೇತ್ರಾ ಪವಾರ್ ಅವರನ್ನು ವಿವಾಹವಾಗಿದ್ದ ಅಜಿತ್ ಪವಾರ್ ದಂಪತಿಗೆ ಜೇ ಪವಾರ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಜೇ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಪಾರ್ಥ್ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author