BJP-AIADMK alliance: ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಘೋಷಣೆ
BJP-AIADMK alliance ತಮಿಳುನಾಡಿನ ಮುಂಬರುವ ಧಾನಸಭಾ ಚುನಾವಣೆ ಗೆಲುವಿಗೆ ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದರು. ಅಲ್ಲದೇ ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.


ಚೆನ್ನೈ: ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ(BJP-AIADMK alliance)ಮೈತ್ರಿ ಘೋಷಿಸಿವೆ. ವಿಧಾನಸಭಾ ಚುನಾವಣೆ ಗೆಲುವಿಗೆ ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ (BJP) ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಜೊತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದರು. ಅಲ್ಲದೇ ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
2026 ರಲ್ಲಿ ತಮಿಳುನಾಡಿನಲ್ಲಿ ಎನ್‌ಡಿ ಸರ್ಕಾರ ರಚನೆಯಾಗಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದು, ಅದು ಒಕ್ಕೂಟವಾಗಲಿದೆ. ಈ ಒಕ್ಕೂಟವನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಉಚ್ಚಾಟಿತ ಎಐಎಡಿಎಂಕೆ ನಾಯಕರಾದ ಓ ಪನ್ನೀರ್‌ಸೆಲ್ವಂ ಮತ್ತು ಎಎಂಎಂಕೆ ನಾಯಕ ಟಿಟಿವಿ ದಿನಕರನ್ ಅವರನ್ನು ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ, ಬಿಜೆಪಿ ಎಐಎಡಿಎಂಕೆಯ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾ ಸ್ಪಷ್ಟಪಡಿಸಿದರು.
ಪರಸ್ಪರ ಹಿತಾಸಕ್ತಿಯಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು ಮತ್ತು ಹಿಂದೆ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದ್ದವು. ಈ ಬಾರಿಯೂ ಅದೇ ರೀತಿ ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ. ಇನ್ನು ಇದೇ ವೇಳೆ ಶಾ ಜೊತೆಗೆ, ಪಳನಿಸ್ವಾಮಿ, ಹಿರಿಯ ಎಐಎಡಿಎಂಕೆ ನಾಯಕರಾದ ಕೆಪಿ ಮುನುಸಾಮಿ ಮತ್ತು ಎಸ್‌ಪಿ ವೇಲುಮಣಿ, ಬಿಜೆಪಿ ನಿರ್ಗಮಿತ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಉಪಸ್ಥಿತರಿದ್ದರು.
ನೂತನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ
ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಸಲ್ಲಿಸಿದ ನಂತರ ಇದೀಗ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಬಿಜೆಪಿ ನೇಮಕ ಮಾಡಿದೆ. ಇಂದು ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇನ್ನು ನಾಗೇಂದ್ರನ್ ಅವರ ಹೆಸರನ್ನು ಅಣ್ಣಾಮಲೈ ಅವರೇ ಪ್ರಸ್ತಾಪಿಸಿದ್ದರು.