ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BJP Karnataka: ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ; ಎಚ್‌.ಡಿ.ದೇವೇಗೌಡರಿಗೆ ಇಲ್ಲ ಟಿಕೆಟ್‌!

Rajya Sabha and MLC Election: ರಾಜ್ಯಸಭೆಯ 4 ಮತ್ತು ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಪ್ರೊ. ಎಂ. ನಾಗರಾಜ್, ರಘು ಕೌಟಿಲ್ಯ, ಲಿಂಗರಾಜ್‌ ಪಾಟೀಲ್‌. -

Prabhakara R
Prabhakara R Jun 8, 2026 3:00 PM

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ದೆಹಲಿ ವರಿಷ್ಠರು ಸಾಕಷ್ಟು ಅಳೆದುತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ರಾಜ್ಯಸಭಾ ಕಣಕ್ಕೆ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಹಿರಿಯ ಮುಖಂಡ ಪ್ರೊ. ಎಂ. ನಾಗರಾಜು ಅವರನ್ನು ಇಳಿಸಲು ಹೈಕಮಾಂಡ್ ನಿರ್ಧರಿಸಿದೆ. ಇನ್ನು ವಿಧಾನ ಪರಿಷತ್ ಚುನಾವಣೆಗೆ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿದೆ.

ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮತ್ತೆ ರಾಜ್ಯಸಭೆ ಸ್ಥಾನ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ, ರಾಜ್ಯ ಬಿಜೆಪಿ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಶಾಸಕ ನಿರ್ಮಲ ಕುಮಾರ್ ಸುರಾನ ಹೆಸರುಗಳನ್ನು ಸಹ ಹೈಕಮಾಂಡ್​​ಗೆ ಕಳುಹಿಸಿದೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ಇವೆಲ್ಲರನ್ನೂ ಬಿಟ್ಟು ಪ್ರೊ ಎಂ.ನಾಗರಾಜ್ ಅವರಿಗೆ ಮಣೆ ಹಾಕಿದೆ.

ರಾಜ್ಯಸಭೆ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ ಮತ್ತು ನಾರಾಯಣ ಕೊರಗಪ್ಪ ಅವರ ಅವಧಿ ಜೂನ್ 25ಕ್ಕೆ ಮುಕ್ತಾಯವಾಗಲಿದೆ.

ಇನ್ನು ಜೂನ್ 30ಕ್ಕೆ ಏಳು ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ನಸೀರ್ ಅಹ್ಮದ್, ಎಂ.ಟಿ.ಬಿ. ನಾಗರಾಜ್, ಪ್ರತಾಪ್ ಸಿಂಹ ನಾಯಕ್, ತಿಪ್ಪಣ್ಣಪ್ಪ, ಸುನೀಲ್ ವಲ್ಯಾಪುರ, ಬಿ.ಕೆ. ಹರಿಪ್ರಸಾದ್ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಚುನಾವಣೆ ಎದುರಾಗಿದೆ.

ಈಗಾಗಲೇ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮೇಲ್ಮನೆಗೆ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ. ಮೋಹನ್ ಮತ್ತು ಬಿ.ಎಸ್. ಶಿವಣ್ಣ ಅವರನ್ನು ಕಣಕ್ಕಿಳಿಸಿದೆ. ಇದೀಗ ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಬಿಜೆಪಿ ಅಭ್ಯರ್ಥಿಗಳ ಹಿನ್ನೆಲೆ

ಪ್ರೊ. ಎಂ. ನಾಗರಾಜ್ ( ಬಿಜೆಪಿ ರಾಜ್ಯ ಸಭೆ ಅಭ್ಯರ್ಥಿ)

ಪ್ರೊ. ಎಂ. ನಾಗರಾಜ್ ಅವರು ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡರು. ಮೂಲತಃ ಹುಬ್ಬಳ್ಳಿ-ಧಾರವಾಡದವರಾದ ನಾಗರಾಜ್, ಶೈಕ್ಷಣಿಕ ವಲಯದಿಂದ ಬಂದವರಾಗಿದ್ದು, ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಇವರು, ನಂತರ ಭಾರತೀಯ ಜನತಾ ಪಕ್ಷದ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಇವರಿಗಿದೆ. ಜನಸಂಘದ ಸ್ಥಾಪಕ‌ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮನೋತ್ಸವ ವರ್ಷದ ನಿಮಿತ್ತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಸ್ವಂತ ಕಾರ್ಯಾಲಯ ನಿರ್ಮಿಸುವ ಅಮಿತ್ ಶಾ ಅವರ ಕನಸಿನ ಯೋಜನೆಯಲ್ಲಿ ಭವನ ನಿರ್ಮಾಣ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.

ಲಿಂಗರಾಜ ಪಾಟೀಲ (ವಿಧಾನ ಪರಿಷತ್)

ಮೂಲತಃ ಹುಬ್ಬಳ್ಳಿಯವರಾದ ಲಿಂಗರಾಜ್ ಪಾಟೀಲ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಕಳೆದ ಬಾರಿ ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆಯಬೇಕಿದ್ದ ಚುನಾವಣೆ ಸಂದರ್ಭದಲ್ಲಿ ಇವರಿಗೆ ಟಿಕೆಟ್ ಕೈತಪ್ಪಿತ್ತು. ಇದರಿಂದ ಬೇಸತ್ತು ಇವರು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪಂಚಮಸಾಲಿ ಸಮುದಾಯವನ್ನು ಬೆಂಬಲಿಸಲು ಇವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ.

ರಘು ಕೌಟಿಲ್ಯ (ವಿಧಾನ ಪರಿಷತ್)

ಇವರು ಮೈಸೂರು-ಚಾಮರಾಜನಗರ ಭಾಗದ ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದಾರೆ. ಒಬಿಸಿ ಸಮುದಾಯದ ಅತ್ಯಂತ ಸಣ್ಣ ಜನಾಂಗವಾದ ‘ಮಡಿವಾಳ’ ಸಮುದಾಯದವರಾದ ಇವರು, ಪ್ರಸ್ತುತ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿರುವ ಇವರು, ಈ ಹಿಂದೆ ಮೈಸೂರಿನಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

ರಾಜ್ಯಸಭೆ ಚುನಾವಣೆ; ಕಾಂಗ್ರೆಸ್‌ನ ಪವನ್ ಖೇರಾ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

ಜೂನ್ 18ಕ್ಕೆ ಚುನಾವಣೆ

ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಹಾಗೂ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಇಂದು (ಜೂನ್ 8) ಕಡೆಯ ದಿನವಾಗಿದೆ.