Karnataka Budget 2026: ಕರ್ನಾಟಕದ ಪಾಲಿಗೆ ಮತ್ತೊಂದು ಪೊಳ್ಳು ಭರವಸೆಯ ಬಜೆಟ್: ವಿಜಯೇಂದ್ರ ಕಿಡಿ
BY Vijayendra: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 17ನೇ ಬಜೆಟ್ ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಿಂದ ಮತ್ತಷ್ಟು ದೂರಕ್ಕೆ ತಳ್ಳಿ, 'ಸಾಲದ ಸುಳಿ' ಗೆ ಸಿಲುಕಿಸುತ್ತಿರುವ ಕರಾಳ ಅಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ) -
ಬೆಂಗಳೂರು, ಮಾ.6: ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ದಿನಗಳವರೆಗೆ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವನ್ನು ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದ್ದಾರೆ. ಅವರು ಮಂಡಿಸಿರುವ 17ನೇ ಬಜೆಟ್ (Karnataka Budget 2026) ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಿಂದ ಮತ್ತಷ್ಟು ದೂರಕ್ಕೆ ತಳ್ಳಿ, 'ಸಾಲದ ಸುಳಿ' ಗೆ ಸಿಲುಕಿಸುತ್ತಿರುವ ಕರಾಳ ಅಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ.
ರಾಜ್ಯ ಬಜೆಟ್ 2026ರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಜೆಟ್‌ನಲ್ಲಿ ಪಂಚ ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ನಿಗದಿ ಮಾಡದೆ ಆಯಾ ಇಲಾಖೆಗಳ ಅನುದಾನವನ್ನೇ ಕಡಿತ ಮಾಡಿ ಪಂಚ ಗ್ಯಾರಂಟಿಗೆ ಜೋಡಿಸಲಾಗಿದೆ. ಪರಿಣಾಮವಾಗಿ ಒಂದೆಡೆ ಆಯಾ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ. ಮತ್ತೊಂದೆಡೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿರುವ ವಿಶೇಷ ಕಾಯ್ದೆಯ ಅನುದಾನವನ್ನು ಯಥೇಚ್ಛವಾಗಿ ಗ್ಯಾರಂಟಿಗೆ ಡೈವರ್ಟ್ ಮಾಡಲು ಸರ್ಕಾರ ತನ್ನ ಹುನ್ನಾರವನ್ನು ಮುಂದುವರಿಸಿದೆ. ಬಂಡವಾಳ ವೆಚ್ಚದಲ್ಲಿ ಅಲ್ಪ ಏರಿಕೆ ಮಾಡಿ, ಅಭಿವೃದ್ಧಿಗೆ ಬ್ರೇಕ್ ಹಾಕಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಭವಿಷ್ಯವನ್ನು ಅಡವಿಟ್ಟಿದೆ. ಸಾರ್ವಜನಿಕ ಸಾಲ ಒಟ್ಟು 8.24 ಲಕ್ಷ ಕೋಟಿ ರೂ.ಗೆ ಏರಿಸಿರುವುದು ಪ್ರತಿ ಕನ್ನಡಿಗನಿಗೆ ಈ ಕಾಂಗ್ರೆಸ್ ಸರ್ಕಾರ ನೀಡಿರುವ 'ಉಡುಗೊರೆ' ಎಂದು ಕಿಡಿಕಾರಿದ್ದಾರೆ.
Karnataka Budget 2026: ಕನ್ನಡಿಗರಿಗೆ ಖಾಲಿ ಚೊಂಬು; ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ
ಸತತ ಮೂರನೇ ವರ್ಷವೂ ಈ ರಾಜ್ಯ ಕಾಂಗ್ರೆಸ್ ಸರ್ಕಾರವು 'ರಾಜಸ್ವ ಕೊರತೆಯ' ಬಜೆಟ್ ಮಂಡಿಸಿರುವುದು ಆರ್ಥಿಕ ದಿವಾಳಿತನದ ಸಂಕೇತ. 22,957 ಕೋಟಿ ರೂ. ಕೊರತೆಯನ್ನು ನೀಗಿಸಲು ಮತ್ತು ದೈನಂದಿನ ತುಪ್ಪ ತಿನ್ನಲು ಸಾಲ ಮಾಡುತ್ತಿರುವ ಈ ನಡೆ ಅಪಾಯಕಾರಿ. ಸಂಪತ್ತು ಸೃಜಿಸದ, ಕೇವಲ ಅನುಭೋಗಿ ವೆಚ್ಚಕ್ಕೆ 1.32 ಲಕ್ಷ ಕೋಟಿ ರೂ. ಹೊಸ ಸಾಲ ಮಾಡುವುದು ಮುಂದಿನ ಪೀಳಿಗೆಗೆ ಮಾಡುವ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ 44,632 ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಈ ಸರ್ಕಾರ, ದಲಿತರ ಕಾಲೋನಿಗಳ ಅಭಿವೃದ್ಧಿಗೆ ಮತ್ತು ಮೂಲಸೌಕರ್ಯಕ್ಕೆ ನೀಡಿರುವುದು ಕೇವಲ 1,332 ಕೋಟಿ ರೂ. ಮಾತ್ರ. ಅಂದರೆ ಒಟ್ಟು ನಿಧಿಯ ಶೇ. 97ರಷ್ಟು ಹಣ ಬಡಾವಣೆಗಳ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಸ್ತವದಲ್ಲಿ ಆ ಹಣವನ್ನು ತಮ್ಮ ಗ್ಯಾರಂಟಿ ಸಾಲ ತೀರಿಸಲು ಬಳಸುತ್ತಿದ್ದಾರೆ. ಇದು ದಲಿತರಿಗೆ ನೀಡಿದ 'ಭಾಗ್ಯ'ವಲ್ಲ, ಇದು ಅವರ ಭವಿಷ್ಯಕ್ಕೆ ಮಾಡಿರುವ 'ದ್ರೋಹ' ವಲ್ಲವೇ ಮುಖ್ಯಮಂತ್ರಿಗಳೇ? ಎಂದು ಕಿಡಿಕಾರಿದ್ದಾರೆ.
ಅಬಕಾರಿ ನೀತಿಯಲ್ಲಿ ಮದ್ಯದ ಕಂಪನಿಗಳಿಗೆ ಬೆಲೆ ನಿರ್ಧರಿಸುವ ಅಧಿಕಾರ ನೀಡಿರುವುದು 'ಲಿಕ್ಕರ್ ಲಾಬಿ'ಗೆ ಈ ಕಾಂಗ್ರೆಸ್ ಸರ್ಕಾರ ಶರಣಾಗಿರುವುದಕ್ಕೆ ಸಾಕ್ಷಿ. ಇನ್ನೊಂದೆಡೆ ಶಾಲೆಗಳ ಪೀಠೋಪಕರಣಕ್ಕೆ ಕೇವಲ 25 ಕೋಟಿ ರೂ. ನೀಡಿ, ಸೋಶಿಯಲ್ ಮೀಡಿಯಾ ನಿಷೇಧದಂತಹ 'ಗಿಮಿಕ್' ಘೋಷಣೆ ಮಾಡುತ್ತಿರುವುದು ಹಾಸ್ಯಾಸ್ಪದ. ನಿಷೇಧವನ್ನು ಹೇಗೆ ಮಾಡುತ್ತದೆ ಎಂದು ಹೇಳದೆ, ತನ್ನ ಕಾರ್ಯವ್ಯಾಪ್ತಿಯ ಹೊರಗಿರುವುದನ್ನು ಹೇಳದೆ, ತಾಂತ್ರಿಕವಾಗಿ ಜಾರಿಗೊಳಿಸಲು ಅಸಾಧ್ಯವಾದ ಇಂತಹ ಹಗಲುಗನಸಿನ ಘೋಷಣೆಗಳು ಕೇವಲ ಜನರ ಗಮನವನ್ನು ಈ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಬೇರೆಡೆಗೆ ಸೆಳೆಯುವ ತಂತ್ರವಷ್ಟೇ. ಮೂಲಸೌಕರ್ಯ ನೀಡಲು ಯೋಗ್ಯತೆ ಇಲ್ಲದ ಸರ್ಕಾರ, ಮಕ್ಕಳ ಮೇಲಿನ ಕಾಳಜಿಯ ನಾಟಕವಾಡುತ್ತಾ 'ಬುರುಡೆ' ಘೋಷಣೆಗಳ ಮೂಲಕ ಪೋಷಕರ ಹಾದಿ ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ಅನ್ನದಾತ ರೈತರಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇವಲ 100 ಕೋಟಿ ರೂ ನೀಡಿರುವುದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ. ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿ ಬಾರಿಯಂತೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಇದು ಪ್ರಗತಿಪರ ಬಜೆಟ್ ಅಲ್ಲ, ಇದು ಕರ್ನಾಟಕದ ಪಾಲಿಗೆ ಮತ್ತೊಂದು ಪೊಳ್ಳು ಭರವಸೆಯ ಬಜೆಟ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ 3 ವರ್ಷದಿಂದ ರಾಜ್ಯದ ಪ್ರಗತಿ ರಥಕ್ಕೆ ಹಾಕಿರುವ ಬ್ರೇಕ್ ಅನ್ನು ಈ ಬಾರಿಯೂ ತೆಗೆದಿಲ್ಲ ಅನ್ನುವುದೇ ವಾಸ್ತವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.