Karnataka Budget 2026: ʼಅರ್ಥʼ ವಿಲ್ಲದ ಬಜೆಟ್; ರಾಜ್ಯವನ್ನು ದಾಖಲೆ ಸಾಲದ ಶೂಲಕ್ಕೆ ತಳ್ಳಿದ ಸಿಎಂ: ಪ್ರಹ್ಲಾದ್ ಜೋಶಿ ಟೀಕೆ
Pralhad joshi : ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ಅಲ್ಲಿ ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ ಬಜೆಟ್ ಮೀಸಲಿಟ್ಟಂತೆ ಕಾಣುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಮಾ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ಬಜೆಟ್ (Karnataka Budget 2026) ₹4.48 ಲಕ್ಷ ಕೋಟಿ ಬೃಹತ್ ಗಾತ್ರದ ಹೆಗ್ಗಳಿಕೆಗಷ್ಟೇ ಸೀಮಿತ. ಅಂತೆಯೇ ರಾಜ್ಯದ ಸಾಲ ಹೆಚ್ಚಳ ಮತ್ತು ವಿತ್ತೀಯ ಕೊರತೆಯಲ್ಲಿ ಸಹ ದಾಖಲೆ ನಿರ್ಮಿಸಿದ್ದಲ್ಲದೆ, "ವೋಟ್ ಬ್ಯಾಂಕ್" ಪ್ರೇರಿತ ಎಂಬಂತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದ್ದಾರೆ.
ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ಅಲ್ಲಿ ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ ಬಜೆಟ್ ಮೀಸಲಿಟ್ಟಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ₹4.48 ಲಕ್ಷ ಕೋಟಿ ದೊಡ್ಡ ಗಾತ್ರದ ಬಜೆಟ್ ಆಗಿದ್ದರೂ ಇದೊಂದು ಸ್ಪಷ್ಟ ಅರ್ಥ ನೀತಿ ಬಿಂಬಿಸದ, 'ಅರ್ಥ' ವಿಲ್ಲದ ಈ ಆಯವ್ಯಯ ಥೇಟ್ ರಾಜಕೀಯ ಭಾಷಣದಂತಿದೆಯೇ ಹೊರತು ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಟ್ಟಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ
ರಾಜ್ಯ ಸರ್ಕಾರದ ಪ್ರಸಕ್ತ ಬಜೆಟ್‌ಅಲ್ಲಿ ₹97,449 ಕೋಟಿ ವಿತ್ತೀಯ ಕೊರತೆ ಮತ್ತು ₹29,957 ಕೋಟಿ ರಾಜಸ್ವ ಸಂಗ್ರಹ ಕೊರತೆ ತೋರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕರಾಮಯ್ಯ ಅಲ್ಲ, ಸಂಪದ್ಭರಿತವಾಗಿದ್ದ ಕರುನಾಡಿನ ಪಾಲಿಗೆ ₹1.32 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ "ಸಾಲರಾಮಯ್ಯ" ಆಗಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.
2030ಕ್ಕೆ 5 ಟ್ರಿಲಿಯನ್ ಮೀರಲಿದೆ ಭಾರತದ ಆರ್ಥಿಕತೆ: ಪ್ರಹ್ಲಾದ್ ಜೋಶಿ
ರಾಜ್ಯದ ಆರ್ಥಿಕಾಭಿವೃದ್ಧಿ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಇದು ರಾಜ್ಯದ ಪಾಲಿಗೆ "ಗ್ಯಾರೆಂಟಿ ಸಾಲ ಶೂಲ" ದ ಬಜೆಟ್ ಆಗಿದೆ. 'ವೋಟ್ ಬ್ಯಾಂಕ್' ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ನಾಮಕರಣ ಘೋಷಿಸಿದ 'ಕಾಂಗ್ರೆಸ್ ಹೈ ಕಮಾಂಡ್ ಓಲೈಕೆ' ಯ ಆಯವ್ಯಯ ಎಂದು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಿಸಿದ ಸಿಎಂ, ರಾಜ್ಯ ಜಿಡಿಪಿಯ 2.95ಕ್ಕೆ ಮಿತಿಗೊಳಿಸಿದ್ದರೂ ಒಟ್ಟು ಸಾಲದ ಗಾತ್ರವನ್ನು ₹ 8.24 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ರಾಜ್ಯದ ಆರ್ಥಿಕ ಇತಿಹಾಸದಲ್ಲೇ ಇದು ದಾಖಲೆ. ಇದೇ ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ಆದರೆ, ತಮ್ಮ ವಿತ್ತೀಯ ಅಶಿಸ್ತಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಭ್ಯಾಸಬಲ ಎನ್ನುವಂತೆ ಮತ್ತೆ ಕೇಂದ್ರ ಸರ್ಕಾರದತ್ತ ಬೆರಳು ತೋರಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ಬಜೆಟ್ ಅನ್ನು ಸಮಗ್ರವಾಗಿ ಅವಲೋಕಿಸಿದರೆ ಸಿಎಂ ಅವರ ಸರ್ವ ಸಮಾನತೆ ಸ್ಲೋಗನ್‌ಗೆ ತಕ್ಕಂತೆ ಯಾವುದೇ ಅಂತಃಸತ್ವ ಇಲ್ಲವೆಂದೇ ಹೇಳಬೇಕು. ಎಂದಿನಂತೆ ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಮುಂದುವರೆದಿದೆ ಅಷ್ಟೇ. ಅಲ್ಪಸಂಖ್ಯಾತ ಕಾಲೋನಿಗಳಿಗೆ ಬರೋಬ್ಬರಿ ₹1635 ಕೋಟಿ ಅನುದಾನ ನೀಡಿದ್ದಲ್ಲದೆ, ಅಲ್ಪಸಂಖ್ಯಾತ ನಿಗಮ ಮಂಡಳಿಗಳಲ್ಲಿ ಸಾಲ ಪಡೆದವರ ಸಂಪೂರ್ಣ ಬಡ್ಡಿ ಮನ್ನಾ ಮಾಡಿದೆ. 5000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌ಗೆ ₹ 50000 ಘೋಷಿಸಿದೆ. ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಘೋಷಿಸಿದೆ. ಆದರೆ ಬಹುತೇಕ ಸಮಾಜಗಳನ್ನು ಕಡೆಗಣಿಸಿದೆ ಎಂದು ದೂರಿದ್ದಾರೆ.
ಪ್ರಸಕ್ತ ಬಜೆಟ್ ಅಲ್ಲಿ ವಿಶೇಷವಾಗಿ ಮುಸ್ಲಿಂ ಮತದಾರರೇ ಹೆಚ್ಚಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ದೃಷ್ಟಿಯಿಂದ ₹ 100 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಆರೋಪಿಸಿರುವ ಪ್ರಹ್ಲಾದ್ ಜೋಶಿ ಉಳಿದ ಕ್ಷೇತ್ರಗಳಿಗೆ ಏಕಿಲ್ಲ? ಇದು ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ಬಜೆಟ್ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
ʼಯುವ ನಿಧಿʼಗೆ ಈ ಬಾರಿ ಅನುದಾನವನ್ನೇ ಮೀಸಲಿಟ್ಟಿಲ್ಲ
ಗ್ಯಾರೆಂಟಿ ಕೈ ಬಿಡುವ ಸೂಚನೆಯೇ? ಪ್ರಸಕ್ತ ಬಜೆಟ್ ಅಲ್ಲಿ ತಾವೇ ಘೋಷಿಸಿದ್ದ ಗ್ಯಾರೆಂಟಿ ಯೋಜನೆ "ಯುವ ನಿಧಿ" ಗೆ ಈ ಬಾರಿ ಅನುದಾನವನ್ನೇ ಮೀಸಲಿಟ್ಟಿಲ್ಲ. ಇದು ಕ್ರಮೇಣ ಒಂದೊಂದೇ ಗ್ಯಾರೆಂಟಿಗಳನ್ನು ಕೈ ಬಿಡುವ ಮುನ್ಸೂಚನೆ ನೀಡಿದಂತಿದೆ. ಯುವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕಾರಣ "ಪ್ರಜ್ಞಾವಂತ ಯುವ ಸಮುದಾಯ ತಮ್ಮ ವೋಟ್ ಬ್ಯಾಂಕ್ ಅಲ್ಲ" ಎಂಬ ಸ್ಪಷ್ಟ ಭಾವನೆ ಮೂಡಿದಂತಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಈ ಬಜೆಟ್ ಅಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳನ್ನು ಬಿಟ್ಟರೆ ಬೇರೆ ಯಾವುದೇ ವಲಯಕ್ಕೆ ಅಂಥಾ ದೊಡ್ಡ ಕೊಡುಗೆ ಏನಿಲ್ಲ. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಕ್ಷೇತ್ರ ಮತ್ತು ಕೃಷಿ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸಮಾಜ ಕಲ್ಯಾಣ, ಮೂಲಸೌಕರ್ಯ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.
ಸಿಎಂ ದೂರದೃಷ್ಟಿಯ ಈ ಬಜೆಟ್ ಅಲ್ಲಿ ಒಟ್ಟಾರೆ ಇಂದಿರಾ ಕ್ಯಾಂಟೀನ್, ಬೆಂಗಳೂರು, ಮೈಸೂರು, ದಾವಣಗೆರೆ, ಮತ್ತು ಕಲ್ಬರ್ಗಿ ಅಷ್ಟೇ ಗೋಚರಿಸಿದಂತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಬೇರೆ ಬೇರೆ ಪ್ರಾಂತ್ಯಗಳು, ಜಿಲ್ಲೆಗಳು ಹಿಂದುಳಿದಿವೆ. ಅಭಿವೃದ್ಧಿ ಶೂನ್ಯವಾಗಿದೆ ಎಂದಿದ್ದಾರೆ ಜೋಶಿ.
ಎಸ್‍ಸಿಪಿ, ಟಿಎಸ್‍ಪಿ ಹಣ ಗ್ಯಾರಂಟಿಗಳಿಗೆ ಬಳಸಿ ರಾಜ್ಯ ಸರ್ಕಾರದಿಂದ ದಲಿತರಿಗೆ ಮೋಸ: ಅರವಿಂದ ಬೆಲ್ಲದ್
ದಿಕ್ಕು ದೆಸೆ ಇಲ್ಲದ ಮುಂಗಡ ಪತ್ರ
ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪ ಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೇ ಇವರ ಕಸರತ್ತಾಗಿದೆ. ಯಾವುದೇ ದಿಕ್ಕು ದೆಸೆ ಇಲ್ಲದ ಈ ಒಂದು ದಾಖಲೆಯ ಮುಂಗಡ ಪತ್ರದಿಂದ ಜನಕಲ್ಯಾಣವೂ ಇಲ್ಲ ಆರ್ಥಿಕ ಪ್ರಗತಿಯೂ ಇಲ್ಲ. ಒಟ್ಟಾರೆ ಇದೊಂದು ಕೇವಲ ಸಾಲದ ಹೊರೆ ಮತ್ತು ವೋಟ್ ಬ್ಯಾಂಕ್ ಪ್ರೇರಿತ ಬಜೆಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.