ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಜೆಪಿಯ ʼಹಿಪೋಕ್ರಸಿ' ಗೋಸುಂಬೆಯನ್ನೇ ನಾಚಿಸುವಂತಿದೆ; ಉರ್ದು ಆಹ್ವಾನ ಪತ್ರಿಕೆ ವಿವಾದಕ್ಕೆ ಸಿದ್ದರಾಮಯ್ಯ ಕಿಡಿ

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ ಮುದ್ರಿಸಿರುವುದು ಭಾರಿ ವಿವಾದ ಹುಟ್ಟುಹಾಕಿದೆ. ಅದರಲ್ಲಿಯೂ ಬಿಜೆಪಿ ಇದೇ ವಿಷಯವನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಇದಕ್ಕೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು, ಫೆ. 26: ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ (Urdu invitation card) ಮುದ್ರಿಸಿರುವುದಕ್ಕೆ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ಹಾರಿಹಾಯ್ದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಉರ್ದುವಿನಲ್ಲಿ ಜಾಹೀರಾತು ಪ್ರಕಟಿಸಲಾಗಿತ್ತು ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇದಕ್ಕೆ ಸಾಕ್ಷಿಯಾಗಿ ಹಲವು ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಪ್ರಶ್ನಿಸಿದ್ದಾರೆ.

ʼʼಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು ಆಡಿರುವ ವೀರಾವೇಶದ ಮಾತುಗಳನ್ನು ಆಲಿಸಿದೆ. ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಉರ್ದು ಭಾಷೆಯ ಜಾಹೀರಾತು ನೀಡಿ, ಈಗ ನಮ್ಮ ವಿರುದ್ಧ ಮುಗಿಬೀಳುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿʼʼ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌:



ಮುಂದುವರಿದು, ʼʼಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಸರ್ಕಾರ ಜಾಹೀರಾತು ನೀಡುತ್ತದೆ. ಹೆಚ್ಚೆಚ್ಚು ಜನರನ್ನು ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯ ಜಾಹೀರಾತು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದರಿಂದ ಪತ್ರಿಕೆಯ ಓದುಗರಿಗೆ ಜಾಹೀರಾತಿನ ವಿಚಾರ ಅರ್ಥವಾಗಿ, ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆʼʼ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 16 ವರ್ಷದೊಳಗಿನವರಿಗೆ ಮೊಬೈಲ್‌ ನಿಷೇಧ: ಸಿಎಂ ಸಿದ್ದರಾಮಯ್ಯ ಪ್ರಸ್ತಾಪ

ʼʼಬಿಜೆಪಿ ನಾಯಕರು ಒಂದಲ್ಲ, ಎರಡಲ್ಲ ಹತ್ತಾರು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದಾರೆ. ಆಗ ಅವರಿಗೆ ಅದು ತುಷ್ಟೀಕರಣ ಅನ್ನಿಸಲಿಲ್ಲ. ಈಗ ನಮ್ಮ ಸರ್ಕಾರ ನೀಡಿರುವ ಉರ್ದು ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಇದ್ದಕ್ಕಿದ್ದಂತೆ ಎದ್ದುನಿಂತಿದೆ. ನಿಮ್ಮ ಈ 'ಹಿಪೋಕ್ರಸಿ' ಗೋಸುಂಬೆಯನ್ನೇ ನಾಚಿಸುವಂತಿದೆʼʼ ಎಂದು ಟೀಕಿಸಿದ್ದಾರೆ.

ʼʼನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು. ಇದಕ್ಕೆ ಇತಿಹಾಸ ಸಾಕ್ಷಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು ಹೌದುʼʼ ಎಂದಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಏನಿದು ವಿವಾದ?

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮದ (ಫೆಬ್ರವರಿ 25) ಆಹ್ವಾನ ಪತ್ರಿಕೆಯನ್ನು ಕನ್ನಡ ಮಾತ್ರವಲ್ಲದೇ ಪ್ರತ್ಯೇಕವಾಗಿ ಉರ್ದು ಭಾಷೆಯಲ್ಲೂ ಮುದ್ರಿಸಲಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವಾಗ ಉರ್ದು ಭಾಷೆಯ ತುಷ್ಟೀಕರಣದ ಅಗತ್ಯವೇನಿತ್ತು? ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author