PM Narendra Modi: ನ.28ರಂದು ಉಡುಪಿಗೆ ಪ್ರಧಾನಿ ಮೋದಿ ಬರ್ತಾರಾ?; ಬಿ.ವೈ. ವಿಜಯೇಂದ್ರ ಹೇಳಿದ್ದೇನು?
BY Vijayendra: ಬಿಹಾರ ಫಲಿತಾಂಶದ ನಂತರದಲ್ಲಿ ರಾಹುಲ್ ಗಾಂಧಿ ಒಂದು ರೀತಿ ಕಾಣೆಯಾಗಿದ್ದಾರೆ. ಮತದಾರರು ಆಶೀರ್ವಾದ ಮಾಡುವ ಭ್ರಮೆಯಲ್ಲಿ ಅವರಿದ್ದರು. ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇನ್ನಾದರೂ ರಾಹುಲ್ ಗಾಂಧಿ ಅವರು ಎಚ್ಚೆತ್ತುಕೊಂಡು ವಿಪಕ್ಷದ ನೆಲೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಅವರ ದೃಷ್ಟಿಯಿಂದ ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ) -
ಬೆಂಗಳೂರು, ನ.20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ನ. 28ರಂದು ಉಡುಪಿ ಮಠಕ್ಕೆ ಭೇಟಿ ಕೊಡುತ್ತಾರೆಂಬ ಮಾಹಿತಿ ನಮಗೂ ಬಂದಿದೆ. ಬಹುತೇಕ ಬರುವ ಮಾಹಿತಿ ಇದ್ದು, ನಮ್ಮೆಲ್ಲ ಶಾಸಕರು, ಸಂಸದರ ನೇತೃತ್ವದಲ್ಲಿ ಪೂರ್ವತಯಾರಿ, ಚರ್ಚೆ ನಡೆಸಿದ್ದೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಪ್ರತಿಯಿಸಿದ್ದಾರೆ.
ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಕಾಣೆ
ಬಿಹಾರ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಬಿಹಾರ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಮತ ಪಡೆಯುವ ಪ್ರಯತ್ನ ಮಾಡಿದರು. ಬಿಹಾರ ಫಲಿತಾಂಶದ ನಂತರದಲ್ಲಿ ರಾಹುಲ್ ಗಾಂಧಿ ಒಂದು ರೀತಿ ಕಾಣೆಯಾಗಿದ್ದಾರೆ. ಮತದಾರರು ಆಶೀರ್ವಾದ ಮಾಡುವ ಭ್ರಮೆಯಲ್ಲಿ ಅವರಿದ್ದರು. ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇನ್ನಾದರೂ ರಾಹುಲ್ ಗಾಂಧಿ ಅವರು ಎಚ್ಚೆತ್ತುಕೊಂಡು ವಿಪಕ್ಷದ ನೆಲೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಅವರ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದರು.
ಕಾಂಗ್ರೆಸ್ಸಿಗರ ಮಾತನ್ನು ನಂಬಿ ಅವರನ್ನು ಅಧಿಕಾರಕ್ಕೆ ತಂದ ರಾಜ್ಯದ ಜನರಲ್ಲಿ ತಮಗೆ ಅನ್ಯಾಯವಾಗಿದೆ; ಮೋಸ ಆಗುತ್ತಿದೆ ಎಂಬ ಭಾವನೆ ಇದೆ ಎಂದು ಹೇಳಿದರು. ಆಡಳಿತ ಪಕ್ಷದ ಸಚಿವರ ಹೇಳಿಕೆ ಗಮನಿಸಿದರೆ ಅರ್ಧದಷ್ಟು ಸಚಿವರು, ಶಾಸಕರು ಮುಖ್ಯಮಂತ್ರಿ ಬದಲಾಗಲಿ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ವಿಪಕ್ಷವಾಗಿ ನಮ್ಮ ಅಭಿಪ್ರಾಯ ಕೇಳಿದರೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ಜನರು ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ಬೆಂಗಳೂರಿನಲ್ಲಿ 7 ಕೋಟಿ ಹಣ ದರೋಡೆ ಮಾತ್ರವಲ್ಲ; ಬೀದರ್‌ನಲ್ಲಿ ಎಟಿಎಂಗೆ ತುಂಬಿಸಲು ಒಯ್ಯುತ್ತಿದ್ದ ಹಣದ ದರೋಡೆ ನಡೆದಿತ್ತು. ಇದುವರೆಗೂ ಅದಕ್ಕೆ ಉತ್ತರ ಲಭಿಸಿಲ್ಲ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹಸಚಿವರಿಗೆ ಕೇಳಿದರೆ ಅವರಿಗೆ ಮಾಹಿತಿಯೇ ಇರುವುದಿಲ್ಲ. ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದ ಅವರು, ಇದಕ್ಕೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ | Bengaluru Robbery Case: ಸುಳಿವು ಸಿಕ್ಕಿದ್ದರೂ ದರೋಡೆಕೋರರನ್ನು ಯಾಕೆ ಬಂಧಿಸಿಲ್ಲ?: ಆರ್.ಅಶೋಕ್ ಪ್ರಶ್ನೆ
ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ದಿನೇ ದಿನೇ ಪೈಪೋಟಿ
ಡಿ.ಕೆ. ಶಿವಕುಮಾರ್ ಅವರು ಕಳೆದ 2-3 ತಿಂಗಳಿನಿಂದ ಬಹಳ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ. ಒಂದಂತೂ ಸತ್ಯ; ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸ ಕಾರ್ಯಗಳೇನೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಅಸಹಾಯಕರಾಗಿ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ದಿನೇ ದಿನೇ ಪೈಪೋಟಿ ಹೆಚ್ಚಾಗಿದೆ. ಬಡವರು, ರೈತರು, ಜನರಿಗೆ ಈ ರಾಜ್ಯದಲ್ಲಿ ಒಂದು ಚುನಾಯಿತ ಸರ್ಕಾರ ಇದೆ ಎಂಬುದೇ ಮರೆತುಹೋಗಿದೆ ಎಂದು ಆರೋಪಿಸಿದರು.