ರಾಹುಲ್ ಗಾಂಧಿಗೆ ಒಂದು ಮದುವೆ ಮಾಡಿಬಿಡಿ: ಸೋನಿಯಾ ಗಾಂಧಿಗೆ ಛಲವಾದಿ ನಾರಾಯಣಸ್ವಾಮಿ ಮನವಿ
ಎಸ್‍ಐಆರ್ ಬಗ್ಗೆ ರಾಹುಲ್ ಗಾಂಧಿ ಅವರಷ್ಟು ತಲೆಕೆಡಿಸಿಕೊಂಡಷ್ಟು ಯಾರೂ ತಲೆ ಕೆಡಿಸಿಕೊಂಡಿಲ್ಲ. ಎಸ್‍ಐಆರ್ ಬಂದ ಮೇಲೆ ಗೆಲುವು ಸುಲಭವಾಗಿದೆ ಎಂದು ಕೇರಳಂನಲ್ಲಿ ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅವರ ಉತ್ತರವೇನು ಎಂದು ಚಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
-
ಬೆಂಗಳೂರು: ಸತತ ಸೋಲು ಅನುಭವಿಸುತ್ತಿರುವ ರಾಹುಲ್ ಗಾಂಧಿ ಅವರ ಮೀಟರ್ ಮೇಲಕ್ಕೆ ಹೋಗುತ್ತಿಲ್ಲ. ದೇಶದಲ್ಲೇ ದೊಡ್ಡ ಪಕ್ಷದ ನಾಯಕರಾದ ಅವರು, ಹತಾಶೆಯಿಂದ ಎಸ್‍ಐಆರ್ ವಿರುದ್ಧ ಮಾತನಾಡುತ್ತಾರೆ. ಅವರು ತಮ್ಮ ಯೋಗ್ಯತೆಗೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‍ಐಆರ್ ಬಗ್ಗೆ ರಾಹುಲ್ ಗಾಂಧಿ ಅವರಷ್ಟು ತಲೆಕೆಡಿಸಿಕೊಂಡಷ್ಟು ಯಾರೂ ತಲೆ ಕೆಡಿಸಿಕೊಂಡಿಲ್ಲ. ಎಸ್‍ಐಆರ್ ಬಂದ ಮೇಲೆ ಗೆಲುವು ಸುಲಭವಾಗಿದೆ ಎಂದು ಕೇರಳಂನಲ್ಲಿ ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅವರ ಉತ್ತರವೇನು ಎಂದು ಪ್ರಶ್ನಿಸಿದರು.
ಎಸ್‍ಐಆರ್‌ನಿಂದ ಹದಿಮೂರು ಕೋಟಿ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಅದಕ್ಕೆ ಕಾರಣ ಇದೆ. ಎರಡು ಮೂರು ಕಡೆ ಮತ ಇದ್ದವರು, ವರ್ಗಾವಣೆ ಆದವರು, ದಾಖಲೆ ಇಲ್ಲದವರ ಹೆಸರನ್ನು ತೆಗೆದುಹಾಕಲಾಗಿದೆ. ಇವರು ಯಾವ ಪಕ್ಷದವರೇ ಆಗಿರಲಿ. ಮತಪಟ್ಟಿಯಿಂದ ಹೆಸರು ತೆಗೆದಿದ್ದರೆ ಸೇರಿಸಲು ಅವಕಾಶ. ಆದರೂ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಎಸ್‍ಐಆರ್ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡ್ತಾ ಇದ್ದಾರೆ ಎಂದು ದೂರಿದರು. ರಾಹುಲ್ ಗಾಂಧಿ ಅವರು ತಮ್ಮ ಮತಬ್ಯಾಂಕ್ ಕಡಿಮೆ ಆಗ್ತಾ ಇದೆ ಎಂಬ ಹತಾಶೆಯಿಂದ ಎಸ್‍ಐಆರ್ ವಿರೋಧ ಮಾಡುತ್ತಿದ್ದಾರೆ ಎಂದರು.
ಆಯೋಗ ಯಾರದೇ ಗುಲಾಮ ಅಲ್ಲ
ಚುನಾವಣಾ ಆಯೋಗದ ಹೆಸರು ಬಳಸಿಕೊಂಡು ಕೋವಿಯನ್ನು ಅವರ ಹೆಗಲ ಮೇಲೆ ಇಟ್ಟು ಬಿಜೆಪಿಗೆ ಗುಂಡು ಹಾರಿಸುತ್ತಿದ್ದೀರಿ. ಆದ್ದರಿಂದ ನಾವು ಸುಮ್ಮನೆ ಕೂರಲು ಆಗಲ್ಲ. ಆಗ ನಾವು ಆಯೋಗವನ್ನು ಸಮರ್ಥನೆ ಮಾಡಲೇಬೇಕು. ಚುನಾವಣಾ ಆಯುಕ್ತರು ಮೋದಿ ಜೀ ಮತ್ತು ಅಮಿತ್ ಶಾ ಜೀ ಅವರ ಗುಲಾಮರು ಎಂದು ಕಾಂಗ್ರೆಸ್‍ನವರು ಟೀಕೆ ಮಾಡುತ್ತಿದ್ದಾರೆ. ಹಾಗಾಗಿ ಸತ್ಯ ಹೇಳಲೇ ಬೇಕು. ಆಯೋಗವು ಯಾರ ಗುಲಾಮ ಅಲ್ಲ ಎಂದು ನುಡಿದರು.
ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ನಮ್ಮ ದೇಶದ ಪ್ರಜೆ ಆಗುವ ಮೊದಲು ಮತದಾರರಾಗಿದ್ದರು. ಇದಕ್ಕೆ ರಾಹುಲ್ ಗಾಂಧಿ ಉತ್ತರ ಕೊಡಬೇಕು. ಇಲ್ಲಿ ಮತಗಳ್ಳತನ ಆಗ್ತ ಇಲ್ಲ. ಯಾರು ಚೋರರು ಇದ್ದಾರೋ ಅವರಿಗೆ ಜನ ಓಟ್ ಹಾಕುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಜನ ಓಟ್ ಹಾಕಿದರೆ ಪಕ್ಷ ಗೆಲ್ಲುತ್ತೆ. ಬಿಜೆಪಿ ವರ್ಷವರ್ಷ ಹೆಚ್ಚು ಓಟ್ ಪಡೆದು ಗೆಲುವು ಸಾಧಿಸುತ್ತಾ ಇದ್ದರೆ ಕಾಂಗ್ರೆಸ್ ಗೆಲುವಿನ ಪ್ರಮಾಣ ಕಡಿಮೆ ಆಗುತ್ತಿದೆ. ಇನ್ನೂ ಮೂವತ್ತು ವರ್ಷವಾದರೂ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಯಂಗ್ ಮ್ಯಾನ್. ಯೂಥ್ ಐಕಾನ್. ಇನ್ನುಳಿವರು ಮುದುಕರು. ಅವರು ಪ್ರಧಾನಿಯಾಗಬೇಕು ಎಂದುಕೊಂಡಿದ್ದಾರೆ. ಆದರೆ ಪ್ರಧಾನಿ ಸುಮ್ಮನೆ ಆಗಲ್ಲ. ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಹೇಳಿದಂತೆ ನಾಯಕ ಮತಪಟ್ಟಿಗೆಯಿಂದ ಹುಟ್ಟುತ್ತಾನೆ ಎಂದು ವಿವರಿಸಿದರು.
ರಾಹುಲ್ ಗೆ ಮದುವೆ ಮಾಡಿ
ಮದುವೆ ಆಗೋವರೆಗೆ ಹುಚ್ಚು ಬಿಡಲ್ಲ, ಹುಚ್ಚು ಬಿಡೋವರೆಗೆ ಮದುವೆ ಮಾಡಕ್ಕಾಗಲ್ಲ ಎಂದು ಹಳ್ಳಿಯಲ್ಲಿ ಹೇಳುತ್ತಾರೆ. ಆದರೆ ಈ ರಾಹುಲ್ ಗಾಂಧಿ ಅವರಿಗೆ ಹುಚ್ಚು ಹಿಡಿದಿದೆಯೇ, ಬಿಟ್ಟಿದೆಯೇ ಎಂದು ಹೇಳಲಾಗಲ್ಲ. ಆದ್ದರಿಂದ ಗಾಂಧಿ ಅವರು ರಾಹುಲ್‌ಗೆ ಮದುವೆ ಮಾಡಿ ಬಿಡಿ ಎಂದು ಸೋನಿಯಾ ಗಾಂಧಿ ಅವರಲ್ಲಿ ಮನವಿ ಮಾಡಿದರು.
ಸೋತಾಗ ಮಾತ್ರ ಟೀಕೆ ಏಕೆ?
ಕಾಂಗ್ರೆಸ್‍ನವರು ಸೋತಾಗ ಇವಿಎಂ ಮೇಲೆ, ಮುಖ್ಯ ಚುನಾವಣಾ ಆಯುಕ್ತರ ಮೇಲೆ ಹೊಣೆ ಹೊರಿಸುತ್ತಾರೆ. ಆದ್ದರಿಂದಲೇ ಕೇರಳ ಮತ್ತು ಕರ್ನಾಟಕದಲ್ಲಿ ಚುನಾವಣೆ ನಂತರ ಇವಿಎಂ ಬಗ್ಗೆ ಮಾತನಾಡಿಲ್ಲ. ಆಗ ಇವಿಎಂ ಸರಿ ಇತ್ತು. ದೇಶ ಒಡೆಯುವ ಕೆಲಸ ಮಾಡಲು ರಾಹುಲ್‍ಗೆ ಅವಕಾಶ ಸಿಗುತ್ತಿಲ್ಲ. ದೇಶದಲ್ಲಿ ಯಾವುದೇ ವಿಚ್ಛಿದ್ರಕಾರಿ ಚಟುವಟಿಕೆ ನಡೆಯಲು ಬಿಡದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ವಿರುದ್ಧವೂ ರಾಹುಲ್ ಟೀಕೆ ಮಾಡ್ತಾ ಇದ್ದಾರೆ. ದೇಶ ರಕ್ಷಣೆಗೆ ನಿಂತವರ ವಿರುದ್ಧ ಮಾತನಾಡುತ್ತಾರೆ ಎಂದರು.
ದೇಶದ ಜನ ಬುದ್ಧಿ ಕಲಿಸುತ್ತಾರೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದೇಶಕ್ಕೆ ಬೇಕಾದ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಒಳ್ಳೆ ರೀತಿ ದೇಶವನ್ನು ಕೊಂಡೊಯ್ಯಲು ನೆರವಾದವರು. ತಮಗೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ರಾಹುಲ್ ಗಾಂಧಿ ಗುರಿ ಮಾಡಿಕೊಂಡಿದ್ದಾರೆ. ಇದನ್ನು ದೇಶದ ಜನ ತಿಳಿಯುತ್ತಾರೆ ಮತ್ತು ಕಾಂಗ್ರೆಸ್ ಕುತಂತ್ರಗಳಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.