ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ, ದಯವಿಟ್ಟು ವಾಪಸ್‌ ಕೆಲ್ಸಕ್ಕೆ ಹೋಗಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ

Asha workers Protest: ನಾವು ಲಿಖಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಕೆಲ್ಸಕ್ಕೆ ವಾಪಸ್‌ ಹೋಗಿ, ನಾನು ನಿಮ್ಮನ್ನು ಕರೆಸಿಕೊಂಡು ಮಾತನಾಡುತ್ತೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ದಯವಿಟ್ಟು ವಾಪಸ್‌ ಕೆಲ್ಸಕ್ಕೆ ಹೋಗಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ

-

Prabhakara R
Prabhakara R Nov 26, 2026 3:40 PM

ಬೆಂಗಳೂರು: ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಸಿಎಂ ಡಿ.ಕೆ.ಶಿವಕುಮಾರ್‌ ಅಸಮಾಧಾನ ಹೊರಹಾಕಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾತಿನ ಮೇಲೆ ನಂಬಿಕೆ ಇಲ್ಲದ ಮೇಲೆ ನಾನೇ ಏನೂ ಮಾಡಲು ಸಾಧ್ಯವಿಲ್ಲ. ಯಾರಿಗೆ ಲಿಖಿತ ಭರವಸೆ ನೀಡಬೇಕು. ಈ ರೀತಿ ರಾಜ್ಯಾದ್ಯಂತ ಪ್ರತಿಭಟನೆಗಳು ಶುರುವಾಗುತ್ತದೆ. ಅವರು ಕೇಂದ್ರ ಸರ್ಕಾರವನ್ನು ಯಾಕೆ ಕೇಳುತ್ತಿಲ್ಲ. ಹಾಗೆಲ್ಲಾ ಲಿಖಿತವಾಗಿ ಭರವಸೆ ಕೊಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಅವರು, ವಿಡಿಯೊ ಕಾಲ್‌ ಮೂಲಕ ನಾನು ಮನವಿ ಮಾಡಿದ್ದೇನೆ. ಸರ್ಕಾರವನ್ನು ಬ್ಲ್ಯಾಕ್‌ಮೇಲ್‌ ಮಾಡಲು ಸಾಧ್ಯವಿಲ್ಲ. ಇಡೀ ದೇಶ ನಂಬಿಕೆ ಮೇಲೆ ನಡೆಯುತ್ತಿದೆ. ನಾವು ಲಿಖಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ. ಆಶಾ ಕಾರ್ಯಕರ್ತೆಯರು ಹಠ ಹಾಗೂ ಪ್ರತಿಷ್ಠೆಯನ್ನು ಬಿಟ್ಟು ಹೋರಾಟವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.



ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಇಂದು ಸಂಜೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ನಾಳೆ ಮತ್ತೆ ಈ ಬಗ್ಗೆ ಮಾತನಾಡುತ್ತೇನೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಕೆಲ್ಸಕ್ಕೆ ವಾಪಸ್‌ ಹೋಗಿ, ನಾನು ನಿಮ್ಮನ್ನು ಕರೆಸಿಕೊಂಡು ಮಾತನಾಡುತ್ತೇನೆ. ಬೇರೆಯವರು ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆಯೇ ಹೊರತು, ಯಾರಿಂದಲೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಹೆದರಿಸುವ ಕೆಲಸ ಮಾಡಬಾರದು ಎಂದಿರುವ ಸಿಎಂ, ಪ್ರತಿಯೊಬ್ಬರ ಬದುಕು ನಮಗೆ ಮುಖ್ಯ. ಹೆಣ್ಣು ಎಂದರೆ ಕುಟುಂಬದ ಕಣ್ಣು ಎಂಬ ಅರಿವು ನಮಗಿದೆ. ಇದೇ ಕಾರಣಕ್ಕೆ ಗೃಹಲಕ್ಷ್ಮಿ, ಅಕ್ಕಿ, ಉಚಿತ ವಿದ್ಯುತ್‌ನಂತಹ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಹಣಕಾಸು ಇಲಾಖೆಯೊಂದಿಗೆ ಈಗಾಗಲೇ ಐದಾರು ಸುತ್ತಿನ ಮಾತುಕತೆ ನಡೆಸಿದ್ದೇನೆ. ಇದೊಂದೇ ಇಲಾಖೆಯಾಗಿದ್ದರೆ ತಕ್ಷಣವೇ ಮಾಡಬಹುದಿತ್ತು, ಆದರೆ ಎಲ್ಲರೂ ಬೀದಿಗೆ ಬಂದು ಕುಳಿತರೆ ಹೇಗೆ? ಪ್ರಣಾಳಿಕೆಯಲ್ಲಿ ಹೇಳಿದಂತೆ ಖಂಡಿತ ಪರಿಹಾರ ಕೊಡುತ್ತೇವೆ, ನಮ್ಮ ಮೇಲೆ ವಿಶ್ವಾಸವಿಡಿ ಎಂದು ಭರವಸೆ ನೀಡಿದ್ದಾರೆ.

ಕ್ಲಸ್ಟರ್ ಕಿಚನ್‌ಗೆ ವಿರೋಧ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ಇದೇ ವೇಳೆ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆಯೂ ಉಲ್ಲೇಖಿಸಿದ ಸಿಎಂ, ಯುಪಿಎ ಸರ್ಕಾರದ ಬಳಿಕ ಈ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿಲ್ಲ. ನಾವೇ ಹಂತ ಹಂತವಾಗಿ ಜಾಸ್ತಿ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿ ನಾಯಕರು ಯಾಕೆ ಕೇಂದ್ರದ ಬಳಿ ಹೋಗಿ ಹಣ ಕೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಬೇಡ ಎಂಬ ಆರೋಗ್ಯ ಸಚಿವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಸಿಎಂ, ಅದೆಲ್ಲ ಸುಳ್ಳು, ನಮಗೆ ಎಲ್ಲರೂ ಬೇಕು ಎಂದು ತಿಳಿಸಿದ್ದಾರೆ.