DK Suresh: ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ತಪ್ಪುವವರಲ್ಲ: ಡಿ.ಕೆ. ಸುರೇಶ್ ಹೀಗೆ ಹೇಳಿದ್ಯಾಕೆ?
CM Siddaramaiah: ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಮಾಜಿ ಸಂಸದ ಡಿ.ಕೆ. ಸುರೇಶ್ (ಸಂಗ್ರಹ ಚಿತ್ರ) -
ಬೆಂಗಳೂರು, ನ. 20: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಕೇಳಿಬಂದಿರುವ ನಡುವೆ "ಸಿಎಂ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತನ್ನು ತಪ್ಪುವವರಲ್ಲ. ಅವರು ಯಾರಿಗೆ ಮಾತು ಕೊಟ್ಟರೂ ತಪ್ಪುವುದಿಲ್ಲ ಎಂದು ಡಿ.ಕೆ.ಸುರೇಶ್ ಹೇಳಿರುವುದು ಕಂಡುಬಂದಿದೆ. ಅವರು ಹೀಗ್ಯಾಕೆ ಹೇಳಿದರು ಎಂಬುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಡಿ.ಕೆ.ಸುರೇಶ್ ಗುರುವಾರ ಅವರು ಮಾತನಾಡಿದರು. ನೀವು ಸಿಎಂ ಅವರನ್ನು ಭೇಟಿ ಮಾಡಿದಾಗ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿದಿರಾ ಎಂದು ಕೇಳಿದಾಗ, ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆʼ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿರುವ ಬಗ್ಗೆ ಕೇಳಿದಾಗ, ʼಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿಗೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆʼ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಪವರ್ ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂದು ಕೇಳಿದಾಗ, ʼಅದು ನನಗೆ ಗೊತ್ತಿಲ್ಲದ ವಿಚಾರ. ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಧ್ಯಮಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆʼ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ನಾನು ಜೆಡಿಎಸ್‌ನಲ್ಲೇ ಇದ್ದಿದ್ರೆ ಸಿಎಂ ಆಗುತ್ತಿರಲಿಲ್ಲ: ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಸಿದ್ದರಾಮಯ್ಯ ಕಿಡಿ
ಶಿವಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂಬ ಚರ್ಚೆ ಅಭಿಮಾನಿ, ಕಾರ್ಯಕರ್ತರಲ್ಲಿದೆ ಎಂದು ಕೇಳಿದಾಗ, ʼಎಲ್ಲರಿಗೂ ಆ ಆಸೆ ಇದೆ. ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ, ಪೂಜೆ ಮಾಡುತ್ತಿರುತ್ತಾರೆ, ಅವರಿಗೆ ಏನು ಬೇಕೋ ಮಾಡುತ್ತಿರುತ್ತಾರೆ. ನಾವುಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ನಾಯಕರು ಪಾಲನೆ ಮಾಡುತ್ತಾರೆ. ಇದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಇದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಏನೇ ತೀರ್ಮಾನ ಮಾಡುವುದಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲಿ ವೈಯಕ್ತಿಕ ವಿಚಾರ ಇಲ್ಲ.ʼ ಎಂದು ತಿಳಿಸಿದರು.
ನಿನ್ನೆ ಶಿವಕುಮಾರ್ ಅವರು ತ್ಯಾಗದ ಮಾತುಗಳನ್ನು ಆಡಿದ್ದಾರೆ ಎಂದು ಕೇಳಿದಾಗ, ʼಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೇ ಕೇಳಿʼ ಎಂದರು.
ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಕೇಳಿದಾಗ, ʼಅವರು ಪಕ್ಷದ ಕೆಲಸ ಮಾಡುತ್ತಿದ್ದು, ನಾಳೆ ಬೇರೆಯವರು ಅಧ್ಯಕ್ಷರಾದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಅವರು ಸಿದ್ಧರಿದ್ದಾರೆʼ ಎಂದು ತಿಳಿಸಿದರು.
ಅವರೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, ʼಅವರು ರಾಜೀನಾಮೆ ನೀಡುವುದಿಲ್ಲ ಎಂದು ನಿಮ್ಮ ಬಳಿ ಹೇಳಿಲ್ಲವಲ್ಲ. ನೀವು ಆ ರೀತಿ ಹೇಳುತ್ತಿದ್ದೀರಾ. ಅವಕಾಶ ಸಿಕ್ಕಾಗ ಏನೆಲ್ಲಾ ಮಾಡಬೇಕೋ ಅದನ್ನು ಶಿವಕುಮಾರ್ ಅವರು ಮಾಡಿದ್ದಾರೆʼ ಎಂದರು.
ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೂ ಮುಂದಾಳತ್ವ ವಹಿಸುವೆ, ಧೈರ್ಯವಾಗಿರಿ ಎಂದು ಕಾರ್ಯಕರ್ತರಿಗೆ ಹೇಳಿರುವ ಬಗ್ಗೆ ಕೇಳಿದಾಗ, ʼಒಬ್ಬೊಬ್ಬರೂ ಒಂದೊಂದು ರೀತಿ ವ್ಯಾಖ್ಯಾನ ಮಾಡಿ ಕಾರ್ಯಕರ್ತರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗಾಗಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷ ಹಾಗೂ ಅಧ್ಯಕ್ಷರ ಜವಾಬ್ದಾರಿ. ಹೀಗಾಗಿ ಈ ಮಾತುಗಳನ್ನು ಆಡಿರುತ್ತಾರೆʼ ಎಂದು ತಿಳಿಸಿದರು.
ಅಧಿಕಾರದ ದಾಖಲೆ ಬರೆಯುವ ಕನಸು ಶಿವಕುಮಾರ್ ಅವರಿಗಿಲ್ಲ
ಡಿ.ಕೆ. ಶಿವಕುಮಾರ್ ಅವರಿಗೆ 8 ವರ್ಷಕ್ಕಿಂತ ಹೆಚ್ಚು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆಯುವ ಇಚ್ಛೆ ಇದೆಯೇ ಎಂದು ಕೇಳಿದಾಗ, ʼಆ ರೀತಿ ಏನೂ ಇಲ್ಲ. ಅಧಿಕಾರದ ದಾಖಲೆ ಮಾಡುವ ಕನಸು ಅವರದ್ದಲ್ಲ. ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ, ಜನರಿಗೆ ಆಗಲಿ, ಬೇರೆಯವರಿಗೆ ಆಗಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಆಗ ಶಾಶ್ವತವಾಗಿ ನಾಯಕರಾಗಿ ಉಳಿಯಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ದೇವರಾಜ ಅರಸು, ನಿಜಲಿಂಗಪ್ಪ, ಎಸ್.ಎಂ. ಕೃಷ್ಣ ಸೇರಿದಂತೆ ಎಲ್ಲರೂ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಿದ್ದಾರೆʼ ಎಂದರು.
ಕಾಂಗ್ರೆಸ್ ನೂರು ಕಚೇರಿಗಳ ಶಂಕುಸ್ಥಾಪನೆಗೆ ಹೈಕಮಾಂಡ್ ಸಹಕರಿಸುವಂತೆ ಕಾಣಿಸುತ್ತಿಲ್ಲವಲ್ಲಾ ಎಂದು ಕೇಳಿದಾಗ, ʼಬಿಹಾರ ಚುನಾವಣೆ ಹಾಗೂ ಇತರೆ ವಿಚಾರವಾಗಿ ಅವರು ಕಾರ್ಯನಿರತರಾಗಿದ್ದ ಕಾರಣ ದಿನಾಂಕ ನೀಡಿರಲಿಲ್ಲ. ಅತೀ ಶೀಘ್ರದಲ್ಲಿ ಅದಕ್ಕೂ ಅವಕಾಶ ನೀಡುತ್ತಾರೆʼ ಎಂದರು.
ಕೆಲವರಿಗೆ ಕೇವಲ ಅಧಿಕಾರ ಮಾತ್ರ ಮುಖ್ಯವಾಗಿದೆ ಎಂದು ಶಿವಕುಮಾರ್ ಅವರು ಹೇಳಿರುವುದನ್ನು ನೀವು ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ, ʼಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾರೇ ಆಗಿರಲಿ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಆಡಳಿತ ನಡೆಸುವವರ ಕರ್ತವ್ಯ ಎಂದು ತಿಳಿಸಿದರು.
ಶಿವಕುಮಾರ್ ಅವರ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಗುತ್ತದೆ
ಸಾಮಾಜಿಕ ನ್ಯಾಯ ನಂಬುವ ಕಾಂಗ್ರೆಸ್ ಪಕ್ಷದಲ್ಲಿ ಶ್ರಮಕ್ಕೆ ತಕ್ಕ ಫಲ ಇದೆಯೇ? ಶಿವಕುಮಾರ್ ಅವರ ಶ್ರಮಕ್ಕೆ ಪ್ರತಿಫಲ ಯಾವಾಗ? ಈ ಅವಧಿಯಲ್ಲೇ? ಎಂದು ಕೇಳಿದಾಗ, ʼಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಶಿವಕುಮಾರ್ ಅವರ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇ ಸಿಗುತ್ತೆ. ಕಾದು ನೋಡಬೇಕು. ಈ ಅವಧಿಯಲ್ಲಿ ಸಿಗುವುದೇ ಎಂಬುದು ನನಗೆ ಗೊತ್ತಿಲ್ಲʼ ಎಂದರು.
ಶಿವಕುಮಾರ್ ಅವರು ಸಿಎಂ ಆಗುವ ಘಳಿಗೆ ಕೂಡಿ ಬಂದಿಲ್ಲವೇ, ಶಿವಕುಮಾರ್ ಅವರು ಶ್ರಮದ ಫಲ ಕೇಳುತ್ತಿದ್ದಾರೆಯೇ ಎಂದು ಕೇಳಿದಾಗ, ʼಅದೃಷ್ಟ ಇದ್ದರೆ ನಮ್ಮಣ್ಣ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೇನೆ. ಎಲ್ಲರೂ ಶ್ರಮ ಹಾಕಿದ್ದಾರೆ. ಶಿವಕುಮಾರ್ ಹಾಗೂ ಬೇರೆಯವರು ಶ್ರಮ ಹಾಕಿದ್ದಾರೆ. ಒಬ್ಬರು ಮಂತ್ರಿಯಾಗಬೇಕು, ಮತ್ತೊಬ್ಬರು ಉಪ ಮುಖ್ಯಮಂತ್ರಿಯಾಗಬೇಕು, ಸಂಸದರು, ಶಾಸಕರು ಆಗಬೇಕು ಎನ್ನುತ್ತಾರೆ. ರಾಜಕಾರಣದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಸೆ, ಆಕಾಂಕ್ಷೆ ಇರುತ್ತದೆ. ಹೀಗಾಗಿ ಇದು ಸ್ವಾಭಾವಿಕ. ಇದಕ್ಕಿಂತ ಹೆಚ್ಚು ಮುಖ್ಯವಾದದ್ದು ಉತ್ತಮ ಆಡಳಿತ ನೀಡುವುದಾಗಿದೆʼ ಎಂದು ತಿಳಿಸಿದರು.
ಸಂಪುಟ ಪುನಾರಚನೆ ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟರೆ ಶಿವಕುಮಾರ್ ಅವರು ಮೂಲೆ ಗುಂಪಾಗುತ್ತಾರೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, ʼಯಾರ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗಲಿದೆ. ಬೇರೆ ಏನೂ ಮಾಡಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರು ಬೇರೆ ಪಕ್ಷದಿಂದ ಬಂದು ಸಿಎಂ ಆದರು. ಅವರ ಹಣೆಯಲ್ಲಿ ಬರೆದಿತ್ತು, ಹೀಗಾಗಿ ಪಕ್ಷಕ್ಕೆ ಬಂದ ಮೂರು ವರ್ಷಕ್ಕೆ ಸಿಎಂ ಆಗಿದ್ದಾರೆ. ಗುಜರಾತಿನಲ್ಲಿ ಮೊದಲ ಬಾರಿ ಶಾಸಕರಾದವರು ಸಿಎಂ ಆಗಿದ್ದಾರೆ. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಾದುದಲ್ಲ. ಎಲ್ಲವೂ ಭರವಸೆ ಮೇಲೆ ನಡೆಯಲಿದೆʼ ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್‌ಗೆ ಏನು ಹೇಳಬೇಕೋ ಹೇಳಿದ್ದಾರೆ
ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆ ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರಲ್ಲಾ ಎಂದು ಕೇಳಿದಾಗ, ʼಶಿವಕುಮಾರ್ ಅವರು ಪಕ್ಷದ ವರಿಷ್ಠರಿಗೆ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದಾರೆ. ಅದು ಪಕ್ಷಕ್ಕೆ ಹಾಗೂ ಪಕ್ಷದ ನಾಯಕತ್ವಕ್ಕೆ ಬಿಟ್ಟ ವಿಚಾರ. ಸಂಘಟನೆ ವಿಚಾರದಿಂದ ಅವರು ತೀರ್ಮಾನ ಮಾಡುತ್ತಾರೆʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಭ್ರಷ್ಟಾಚಾರ ನಡೆದಿದ್ದರೆ ಲೋಕಾಯುಕ್ತ, ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ: ಡಿ.ಕೆ. ಶಿವಕುಮಾರ್
ನಿಮ್ಮ ಮನವಿ, ಬೇಡಿಕೆಗಳಿಗೆ ಹೈಕಮಾಂಡ್ ಮಟ್ಟದಲ್ಲಿ ಮನ್ನಣೆ ಸಿಗುತ್ತದೆಯೇ ಎಂದು ಕೇಳಿದಾಗ, ʼನನ್ನ ಯಾವುದೇ ಬೇಡಿಕೆ, ಮನವಿ ಇಲ್ಲ. ನನ್ನ ಆಸೆ ಇದೆ. ಆ ಆಸೆ ಈಡೇರುವ ಬಗ್ಗೆ ಗೊತ್ತಿಲ್ಲ. ಎಲ್ಲವೂ ಭಗವಂತನ ಆಶೀರ್ವಾದʼ ಎಂದು ತಿಳಿಸಿದರು.