DK Shivakumar: ಭ್ರಷ್ಟಾಚಾರ ನಡೆದಿದ್ದರೆ ಲೋಕಾಯುಕ್ತ, ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ: ಡಿ.ಕೆ. ಶಿವಕುಮಾರ್
DK Shivakumar latest statement: ಕಸ ಗುಡಿಸುವ ಯಂತ್ರ ಬಾಡಿಗೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ ಎಂದು ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು: ಜೆಡಿಎಸ್ (JDS) ಅವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಜೆಡಿಎಸ್ ಅವರಿಗೆ ಏನೂ ಮಾಡಲು ಆಗಿಲ್ಲ. ಈಗ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹರಿಹಾಯ್ದರು. 'ನೀಲಿ ದಳ' (ಬ್ಲೂ ಪೋರ್ಸ್) ಹಾಗೂ ರೋಬೋಟಿಕ್ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.
ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ವಿಚಾರವಾಗಿ ರೈತರ ಜತೆ ಸೇರಿ ಜೆಡಿಎಸ್ ಹೋರಾಟದ ಬಗ್ಗೆ ಕೇಳಿದಾಗ, ʼಅವರು ಪ್ರತಿಭಟನೆ ಮಾಡಿದಾಗಲೇ ನಾವು ಏನು ಕೆಲಸ ಮಾಡಿದ್ದೇವೆ ಎಂಬುದು ಜನರಿಗೆ ತಿಳಿಯಲಿದೆ. ಈಗ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಬಳಿ ತೆರಳಿ ನಾನು ಒಂದಷ್ಟು ಯೋಜನೆಗಳ ಬಗ್ಗೆ ಅರ್ಜಿ ಹಾಕಿದ್ದು ಅವುಗಳ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲಿ. ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸಿ, ಅಗತ್ಯ ಅನುದಾನ ತೆಗೆದುಕೊಂಡು ಬರಲಿ. ನಮ್ಮ ಪಾಲಿನ 28-30 ಟಿಎಂಸಿ ತುಂಗಭದ್ರಾ ನೀರು ಆಂಧ್ರಕ್ಕೆ ಸೇರುತ್ತಿದೆ. ಚಂದ್ರಬಾಬು ನಾಯ್ಡು ಅವರು ಇದರ ಸಭೆಗೆ ಬರುತ್ತಿಲ್ಲ. ಮೊದಲು ಅವರಿಂದ ಒಪ್ಪಿಗೆ ಕೊಡಿಸಲಿʼ ಎಂದು ತಿವಿದರು.
ಕುಮಾರಸ್ವಾಮಿ ಅವರನ್ನು ಜತೆಯಲ್ಲಿ ಕರೆದುಕೊಂಡು ಹೋದರೆ ಭೇಟಿಯಾಗಬಹುದು ಎನ್ನುವ ಬಗ್ಗೆ ಕೇಳಿದಾಗ, ʼನಾನು ಇದಕ್ಕೆ ತಯಾರಿದ್ದೇನೆ. ಅವರೇ ಸಮಯ ನಿಗದಿ ಮಾಡಲಿ ನಾನು ಹೋಗಲು ತಯಾರಿದ್ದೇನೆʼ ಎಂದರು.
Mekedatu Project: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ: ಡಿ.ಕೆ. ಶಿವಕುಮಾರ್
ಭ್ರಷ್ಟಾಚಾರ ನಡೆದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ
ಕಸ ಗುಡಿಸುವ ಯಂತ್ರ ಬಾಡಿಗೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ʼಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶೋಭಾ ಕರಂದ್ಲಾಜೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ. ನಾನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಉತ್ತರಿಸುತ್ತೇನೆಯೇ ಹೊರತು ಆತನಿಗಲ್ಲ. ಕಸ ಗುಡಿಸುವ ಯಂತ್ರಗಳ ಬಗ್ಗೆ ಅಧ್ಯಯನ ನಡೆಸಿಯೇ ಮುಂದುವರೆದಿರುವುದು. ಇದು ಕೇವಲ ಒಂದು ವರ್ಷದ ಯೋಜನೆಯಲ್ಲ. ಏಳು ವರ್ಷಗಳ ಯೋಜನೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ. ಶೋಭಾ ಕರಂದ್ಲಾಜೆ ಅವರ ಟೀಕೆಗಳನ್ನು ನಾನು ಸ್ವಾಗತ ಮಾಡುತ್ತೇನೆ. ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ. ಈ ಮೊತ್ತ ದೊಡ್ಡದಾಗಿ ಕಾಣುತ್ತಿರಬಹುದು. ಇದು ಕೇವಲ ವಾಹನದ ವಿಚಾರವೊಂದೇ ಇಲ್ಲ. ಚಾಲಕ, ಸಹಾಯಕ, ಸ್ವಚ್ಛ ಮಾಡುವವರು ಸೇರಿದಂತೆ ಅನೇಕ ವಿಚಾರಗಳಿವೆ. ಎಲ್ಲಾ ಆಯಾಮಗಳಿಂದ ಆಲೋಚಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.