ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vote Theft Case: ಮತಗಳ್ಳತನ ವಿರುದ್ಧ ರಾಜ್ಯದಲ್ಲಿ 1,12,40,000 ಸಹಿ ಸಂಗ್ರಹ; ನ.10ರಂದು ದೆಹಲಿಗೆ ರವಾನೆ ಎಂದ ಡಿಕೆಶಿ

DK Shivakumar Statement: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮ ಪಕ್ಷ ರಾಜಕೀಯವಾಗಿ ವಿಭಾಗಿಸಿಕೊಂಡಿರುವ 40 ಜಿಲ್ಲೆಗಳಿಂದ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಕೆಲಸ ಮಾಡಿದ್ದಾರೆ. 8-10 ಕಡೆ ಹೊರತು ಪಡಿಸಿ, ಉಳಿದ ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಸಹಿ ಸಂಗ್ರಹಿಸಲಾಗಿದೆ. ಬೂತ್ ವಾರು ಸಹಿ ಸಂಗ್ರಹಿಸಲಾಗಿದ್ದು, ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಈ ಸಹಿ ಸಂಗ್ರಹದ ಅರ್ಜಿಗಳನ್ನು ಇದೇ ತಿಂಗಳು 10ರಂದು ದೆಹಲಿಗೆ ರವಾನಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಮತಗಳ್ಳತನ ವಿರುದ್ಧ ರಾಜ್ಯದಲ್ಲಿ 1,12,40,000 ಸಹಿ ಸಂಗ್ರಹ: ಡಿಕೆಶಿ

-

Profile
Siddalinga Swamy Nov 8, 2025 6:14 PM

ಬೆಂಗಳೂರು, ನ.8: ರಾಜ್ಯ ಹಾಗೂ ದೇಶದಲ್ಲಿ ನಡೆದಿರುವ ಮತಗಳ್ಳತನ (Vote Theft Case) ವಿರುದ್ಧ ಎಐಸಿಸಿ ನಾಯಕರು ಹಮ್ಮಿಕೊಂಡಿರುವ ಸಹಿಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಿಂದ 1,12,40,000 ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮ ಪಕ್ಷ ರಾಜಕೀಯವಾಗಿ ವಿಭಾಗಿಸಿಕೊಂಡಿರುವ 40 ಜಿಲ್ಲೆಗಳಿಂದ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

8-10 ಕಡೆ ಹೊರತು ಪಡಿಸಿ, ಉಳಿದ ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಸಹಿ ಸಂಗ್ರಹಿಸಲಾಗಿದೆ. ಬೂತ್ ವಾರು ಸಹಿ ಸಂಗ್ರಹಿಸಲಾಗಿದ್ದು, ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಸಹಿ ಸಂಗ್ರಹದ ಅರ್ಜಿಗಳನ್ನು ಇದೇ ತಿಂಗಳು 10ರಂದು ದೆಹಲಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿರುವ ಜಿಲ್ಲಾಧ್ಯಕ್ಷರ ಜತೆ ವಿಮಾನದಲ್ಲಿ ಈ ಸಹಿ ಸಂಗ್ರಹಿಸಿರುವ ಅರ್ಜಿಗಳನ್ನು ದೆಹಲಿಗೆ ತಲುಪಿಸಲಾಗುವುದು.

ನವೆಂಬರ್ ಮೂರನೇ ವಾರದಲ್ಲಿ (ನ.25) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಚಿಂತನೆ ನಡೆಸಲಾಗಿದೆ. ಈ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಎಲ್ಲಿ ಅಭಿಯಾನ ಆಗಿಲ್ಲ, ಆ ಪ್ರದೇಶಗಳಲ್ಲಿ ಇನ್ನು ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ ಮುಂದುವರೆಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಮತಪತ್ರದ ಮೂಲಕ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಚಿಂತನೆ

ಚುನಾವಣಾ ಅಕ್ರಮದ ತನಿಖೆಗೆ ಪೂರಕ ದಾಖಲೆ ನೀಡಿ ಎಂದು ಮಾಹಿತಿ ಕೇಳಿದರೆ, ಆಯೋಗವೇ ನಮ್ಮ ಬಳಿ ಸಾಕ್ಷಿ ಕೇಳುತ್ತಿದೆ. ಹೀಗಾಗಿ ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಚಿಂತನೆ ನಡೆಸಿದ್ದೇವೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಎಐಸಿಸಿ ಅವರು ತಿಳಿಸಿದ್ದು, ಇದರ ಯಶಸ್ಸು ಬಿಎಲ್ಎಗಳು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳದ್ದಾಗಿದೆ. ಈ ಹೋರಾಟ ಹಮ್ಮಿಕೊಂಡಿರುವ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು; ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಆಂದೋಲನ

ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿ, ಮತದಾನದ ಹಕ್ಕು ಕಾಪಾಡಲು ಸಹಿ ಸಂಗ್ರಹದ ಮೂಲಕ ಬೃಹತ್ ಆಂದೋಲನ ನಡೆಸಲಾಗುತ್ತಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದ ಮತದಾನದ ಅಧ್ಯಯನ ಮಾಡಿ ಅಲ್ಲಿ ನಡೆದಿರುವ 1 ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ಮತಗಳನ್ನು ಸೇರಿಸಲಾಗಿತ್ತು. ಒಂದು ಬಾರ್‌ನಲ್ಲಿ 70-80 ಮತದಾರರಿರುವುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿ ರಾಹುಲ್ ಗಾಂಧಿ ಅವರು ದೇಶದ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಈ ಅಕ್ರಮದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು ಈ ಅಕ್ರಮದ ಬಗ್ಗೆ ಬೆಳಕು ಚೆಲ್ಲಿ ಇಲ್ಲಿಂದ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದರು. ಈ ಅಕ್ರಮ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಗಾಂಧಿ ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಿವೆ. ಒಂದು ಕ್ಷೇತ್ರದಲ್ಲಿ ಇರುವ ಮತದಾರರ ಸಂಖ್ಯೆ ಅಷ್ಟೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದ ವರ್ಗದ ಕುಟುಂಬಗಳ ಸದಸ್ಯರ ಮತವನ್ನು ಬೇರೆ ಬೇರೆ ಬೂತ್‌ಗಳಿಗೆ ಹಾಕಿ ವರ್ಗಾವಣೆ ಮಾಡಿರುವ ಷಡ್ಯಂತ್ರ ಬಯಲಾಗಿದೆ ಎಂದು ಹೇಳಿದರು.

ಆಳಂದ ಕ್ಷೇತ್ರದ ಅಕ್ರಮದ ತನಿಖೆಯ ವರದಿ ಶೀಘ್ರ

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಗೂ ಮುನ್ನವೇ ಅಕ್ರಮದ ಬಗ್ಗೆ ದೂರು ನೀಡಿ ಆಯೋಗದ ಗಮನ ಸೆಳೆಯುತ್ತಾರೆ. ನಂತರ ಈ ಅಕ್ರಮದ ಬಗ್ಗೆ ತನಿಖೆ ಆರಂಭವಾಗುತ್ತದೆ. ಚುನಾವಣಾ ಆಯೋಗವು ಅಧಿಕೃತ ದೂರು ದಾಖಲಿಸಿಕೊಳ್ಳುತ್ತದೆ. ಆಳಂದದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮತದಾರಪಟ್ಟಿಯಿಂದ ಹೆಸರು ಕೈ ಬಿಡುವಂತೆ ನಕಲಿ ಅರ್ಜಿ ಸಲ್ಲಿಸಲಾಗಿತ್ತು. ಕೇವಲ 17 ನಿಮಿಷಗಳಲ್ಲಿ 14 ಮತಗಳನ್ನು ಬೆಳಗಿನ ಜಾವದಲ್ಲಿ ತೆಗೆದುಹಾಕಲಾಗಿರುತ್ತದೆ. ಈ ರೀತಿ 6 ಸಾವಿರ ಮತ ತೆಗೆಯಲು ಪ್ರಯತ್ನಿಸುತ್ತಾರೆ. ಈ ವಿಚಾರವಾಗಿ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಈ ತನಿಖೆ ಮೂಲಕ ಹೊರ ರಾಜ್ಯದವರು ಹಾಗೂ ಅವರ ದೂರವಾಣಿ ಸಂಖ್ಯೆ ಮೂಲಕ ಮತಗಳನ್ನು ತೆಗೆಸಲು ಷಡ್ಯಂತ್ರ ಮಾಡಲಾಗಿತ್ತು ಎಂದು ಆರೋಪಿಸಿದರು.

ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗ ಕೆಲಸ ಮಾಡಬೇಕಾಗುತ್ತದೆ. 256 ಬೂತ್‌ಗಳಲ್ಲಿ 7250 ಮತಗಳನ್ನು ಫಾರಂ 7 ದುರುಪಯೋಗದ ಮೂಲಕ ಡಿಲೀಟ್ ಮಾಡಿಸಿದ್ದರು. ಉತ್ತರ ಪ್ರದೇಶ, ಬಿಹಾರ, ದೆಹಲಿ, ಜಾರ್ಖಂಡ್ ರಾಜ್ಯಗಳ ಜನರ ಮೊಬೈಲ್‌ನಿಂದ ಈ ಅರ್ಜಿ ಸಲ್ಲಿಕೆಯಾಗುತ್ತವೆ. ಈ ಮತದಾರ ಪಟ್ಟಿಯಿಂದ ಹೆಸರು ರದ್ದಾದ 151 ಮತದಾರರು ಫೆ.23ರಂದು ದೂರು ನೀಡುತ್ತಾರೆ. ಅಂದೇ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುತ್ತದೆ. ಈ ಪ್ರಕರಣದ ತನಿಖೆ ವೇಳೆ ತನಿಖಾಧಿಕಾರಿಗಳು ತಮಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ 12 ಬಾರಿ ಪತ್ರ ಬರೆದಿದ್ದರೂ ಆಯೋಗವು ಯಾವುದೇ ಮಾಹಿತಿ ನೀಡಿಲ್ಲ. ತನಿಖಾಧಿಕಾರಿಗಳು ಹೊರ ರಾಜ್ಯದ 9 ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರು ಮತದಾರ ಪಟ್ಟಿ ಸೇರಿದಂತೆ ಅನೇಕ ದಾಖಲೆಗಳನ್ನು ಸುಟ್ಟು ಹಾಕಿರುವ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣದಲ್ಲಿ ಒಂದು ಮತ ಡಿಲೀಟ್ ಆದರೆ ಅದಕ್ಕೆ 80 ರೂಪಾಯಿ ಹಣ ನೀಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಚಿಲುಮೆ ಸಂಸ್ಥೆಯನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನು ನಾವು ಬೆಳಕಿಗೆ ತಂದಿದ್ದೆವು. ಈ ಪ್ರಕರಣದ ತನಿಖಾ ವರದಿ ಶೀಘ್ರದಲ್ಲೇ ಬರಲಿದೆ ಎಂದರು.

ಈಗ ಹರಿಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರು ಬೆಳಕು ಚೆಲ್ಲಿದ್ದಾರೆ. ಆ ರಾಜ್ಯದ ಚುನಾವಣೆಯಲ್ಲಿ ಒಟ್ಟು 25 ಲಕ್ಷದಷ್ಟು ಮತಗಳು ಅಕ್ರಮವಾಗಿವೆ ಎಂದು ತಿಳಿಸಿದ್ದಾರೆ. ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ರಾಹುಲ್ ಗಾಂಧಿ ಅವರ ಹೋರಾಟದ ಚಿಂತನೆ. ಕರ್ನಾಟಕ ರಾಜ್ಯದಿಂದಲೇ ಈ ಹೋರಾಟ ಆರಂಭವಾಗಿದ್ದು, ದೇಶದಾದ್ಯಂತ ಜನರಿಂದ ಸಹಿ ಸಂಗ್ರಹ ಮಾಡಿ ಈ ವಿಚಾರದಲ್ಲಿ ರಾಷ್ಟ್ರಪತಿಗಳು ಹಾಗೂ ಚುನಾವಣಾ ಆಯೋಗಕ್ಕೆ ಜನರ ಅಭಿಪ್ರಾಯ ತಿಳಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟ ಮಾತ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಾನದ ಹಕ್ಕು ಉಳಿಸುವ ಹೋರಾಟ. ಈ ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಪಕ್ಷಬೇಧ ಮರೆತು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, ʼನಮ್ಮ ನಾಯಕರು ಅತ್ಯುತ್ತಮವಾಗಿ ಶ್ರಮಿಸಿದ್ದಾರೆ. ನಮಗೆ ಬಿಹಾರ ಜನತೆ ಮೇಲೆ ನಂಬಿಕೆ ಇದೆ. ಬದಲಾವಣೆ ಬಯಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಹಾರದ ಜನ ನಮಗೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Kanakadasa Jayanthi 2025: ಕನಕದಾಸರು ಕೇವಲ ದಾಸಶ್ರೇಷ್ಠ ವ್ಯಕ್ತಿಯಲ್ಲ; ಒಂದು ಮಹೋನ್ನತ ಪರಂಪರೆ: ಕೆ.ವಿ. ಪ್ರಭಾಕರ್

ಒಂದು ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕ

ಕಾರ್ಯಕರ್ತರಿಗೆ ನಿಗಮ ಮಂಡಳಿ ಸದಸ್ಯತ್ವ ನೀಡಿಲ್ಲ ಯಾಕೆ ಎಂದು ಕೇಳಿದಾಗ, ʼಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಜನರಿಗೆ ಗ್ಯಾರಂಟಿ ಸಮಿತಿ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಕ್ಷೇತ್ರಗಳಲ್ಲಿ 60 ಜನರನ್ನು ನಾಮನಿರ್ದೇಶನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ 600 ಸ್ಥಾನಗಳಿವೆ. ಇವುಗಳನ್ನು ಇನ್ನೊಂದು ವಾರದಲ್ಲಿ ಪ್ರಕಟಿಸುತ್ತೇವೆʼ ಎಂದು ತಿಳಿಸಿದರು.