ಇನ್‌ಸ್ಟಾಗ್ರಾಂ ಬಳಿಕ ಯೂಟ್ಯೂಬ್‌ನಲ್ಲೂ ದಾಖಲೆ ಬರೆದ ಪ್ರಧಾನಿ ಮೋದಿ; ಬರೋಬ್ಬರಿ 3 ಕೋಟಿ ಸಬ್ಸ್ಕ್ರೈಬರ್ಸ್
ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಲ್ಲಿ 3 ಕೋಟಿ (30 ಮಿಲಿಯನ್) ಚಂದಾದಾರರನ್ನು ಹೊಂದುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿದ ವಿಶ್ವದ ಏಕೈಕ ರಾಜಕೀಯ ನಾಯಕನಾಗಿ ಅವರು ಹೊರಹೊಮ್ಮಿದ್ದಾರೆ. ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ ಹಲವು ಪಟ್ಟು ಹೆಚ್ಚು ಚಂದಾದಾರರನ್ನು ಮೋದಿ ಹೊಂದಿದ್ದಾರೆ. ದೇಶೀಯ ರಾಜಕೀಯದಲ್ಲಿಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ ಮೂರು ಪಟ್ಟು ಹೆಚ್ಚು ಯೂಟ್ಯೂಬ್ ಬೆಂಬಲಿಗರನ್ನು ಮೋದಿ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ 100 ಮಿಲಿಯನ್ ಫಾಲೋವರ್‌ಗಳನ್ನು ಪಡೆದು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ -
ನವದೆಹಲಿ, ಮಾ. 3: ಪ್ರಧಾನಿ ನರೇಂದ್ರ ಮೋದಿ (Narendra Modi) ಯೂಟ್ಯೂಬ್‌ನಲ್ಲಿ (YouTube) ವಿಶ್ವದಾಖಲೆ (World Record) ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ 3 ಕೋಟಿ ಚಂದದಾರರನ್ನು (ಸಬ್ಸ್ಕ್ರೈಬರ್) ಹೊಂದಿದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನಲ್ 30 ಮಿಲಿಯನ್ (3 ಕೋಟಿ) ಸಬ್ಸ್ಕ್ರೈಬರ್ ಗಡಿಯನ್ನು ದಾಟಿದ್ದು, ಇತರ ಜಾಗತಿಕ ನಾಯಕರಿಗಿಂತ ಗಮನಾರ್ಹ ಮುನ್ನಡೆಯನ್ನು ತೋರಿಸಿದೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ (Jair Bolsonaro) ಎರಡನೇ ಸ್ಥಾನದಲ್ಲಿದ್ದರೂ, ಅವರ ಚಂದಾದಾರರ ಸಂಖ್ಯೆ ಮೋದಿ ಅವರಿಗಿಂತ ಬಹಳ ಕಡಿಮೆಯಾಗಿದೆ.
ಪ್ರಧಾನಿ ಮೋದಿ ಯೂಟ್ಯೂಬ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಹೋಲಿಸಿದರೆ ಏಳು ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇದು ಮೋದಿ ಅವರ ಡಿಜಿಟಲ್ ಪ್ರಭಾವ ಮತ್ತು ಜಾಗತಿಕ ತೊಡಗಿಸುವಿಕೆ ಹೇಗಿದೆ ಎಂಬುದಕ್ಕೆ ನಿರ್ದಶನ ಎನ್ನುತ್ತಾರೆ ತಜ್ಞರು.
ದೇಶೀಯ ರಾಜಕೀಯದಲ್ಲೂ ಡಿಜಿಟಲ್ ಪ್ರಭಾವ
ಭಾರತೀಯ ರಾಜಕೀಯ ನಾಯಕರ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗಿಂತ ಮೂರು ಪಟ್ಟು ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಮೋದಿ ಹೊಂದಿದ್ದಾರೆ. ಇದೇ ವೇಳೆ ಆಮ್ ಆದ್ಮಿ ಪಕ್ಷ (AAP) ಹಾಗೂ ಕಾಂಗ್ರೆಸ್‌ನ ಅಧಿಕೃತ ಚಾನೆಲ್‌ಗಳಿಗಿಂತಲೂ ಮೋದಿ ಅವರ ಚಾನೆಲ್ ಹೆಚ್ಚು ಜನಪ್ರಿಯವಾಗಿದೆ.
ಇರಾನ್ ಯುದ್ಧದ ನಡುವೆಯೂ ಜೊತೆ ಇರುವುದಕ್ಕೆ ಪ್ರಧಾನಿ ಮೋದಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ
ಇನ್‌ಸ್ಟಾಗ್ರಾಮ್‌ನಲ್ಲೂ ದಾಖಲೆ ಸಾಧನೆ
ಇನ್ನು ಕೆಲ ದಿನಗಳ ಹಿಂದೆಯಷ್ಟಯೇ ಇನ್‌ಸ್ಟಾಗ್ರಾಮ್‌ನಲ್ಲಿಯೂ 100 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದರು. 2014ರಲ್ಲಿ ಈ ಇನ್‌ಸ್ಟಾಗ್ರಾಮ್ ಪೇಜ್ ತೆರೆದ ಅವರು, ಜಾಗತಿಕ ರಾಜಕೀಯ ನಾಯಕರಲ್ಲಿ ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಡೊನಾಲ್ಡ್ ಟ್ರಂಪ್ 43.2 ಮಿಲಿಯನ್ ಫಾಲೋವರ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ (15 ಮಿಲಿಯನ್), ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (14.4 ಮಿಲಿಯನ್), ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ (11.6 ಮಿಲಿಯನ್) ಹಾಗೂ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ (6.4 ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದಾರೆ.
ಭಾರತೀಯ ನಾಯಕರ ಪೈಕಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 16.1 ಮಿಲಿಯನ್ ಫಾಲೋವರ್‌ಗಳೊಂದಿಗೆ ಮುಂದಿನ ಸ್ಥಾನದಲ್ಲಿದ್ದು, ರಾಹುಲ್ ಗಾಂಧಿ ಸುಮಾರು 12.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.
ಡಿಜಿಟಲ್ ರಾಜಕೀಯದ ಹೊಸ ಮಾನದಂಡ
ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ ಮೂಲಕ ಜನರೊಂದಿಗೆ ನೇರ ಸಂಪರ್ಕ ಸಾಧಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಧಿಸಿರುವ ಈ ದಾಖಲೆಗಳು, ಜಾಗತಿಕ ರಾಜಕೀಯದಲ್ಲಿ ಡಿಜಿಟಲ್ ಪ್ರಭಾವದ ಹೊಸ ಮಾನದಂಡವನ್ನು ನಿರ್ಮಿಸಿದೆ.