DK Shivakumar: ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ: ಡಿ.ಕೆ. ಶಿವಕುಮಾರ್ ಲೇವಡಿ
ವಿಧಾನಸೌಧದ ಆವರಣದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನ ಬಳಿ ಇರುವ ದುಬಾರಿ ವಾಚ್‌ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು? ಎಂದು ತಿರುಗೇಟು ನೀಡಿದ್ದಾರೆ
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಡಿ. 04: ನನ್ನ ಬಳಿ ಇರುವ ದುಬಾರಿ ವಾಚ್‌ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ನಿಮ್ಮ ಅಫಿಡವಿಟ್‌ನಲ್ಲಿ ದುಬಾರಿ ವಾಚ್ ಬಗ್ಗೆ ತಿಳಿಸಿಲ್ಲ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆ ವಿಧಾನಸೌಧದ ಆವರಣದಲ್ಲಿ ಗುರುವಾರ ಡಿಸಿಎಂ ಅವರು ಪ್ರತಿಕ್ರಿಯೆ ನೀಡಿದರು.
ʼಅವರಿಗೇನು ಗೊತ್ತು? ನನ್ನ ಅಫಿಡವಿಟ್ ನನಗೆ ಗೊತ್ತು, ಕಾಸು ಕೊಟ್ಟಿರುವುದು ನಾನು, ಕ್ರೆಡಿಟ್ ಕಾರ್ಡ್ ಬಳಸಿರೋದು ನಾನು. ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ನನ್ನ ಬಳಿ ರೋಲೆಕ್ಸ್ ವಾಚ್ ಇರುವುದನ್ನೂ ಹೇಳಿದ್ದೇನೆ. ನಾರಾಯಣಸ್ವಾಮಿಯಿಂದ ಕಲಿಯುವುದೇನಿಲ್ಲʼ ಎಂದು ಹೇಳಿದರು.
ಇದು ಕದ್ದಿರುವ ವಾಚಾ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿರುವ ಬಗ್ಗೆ ಹೇಳಿದಾಗ, ʼಹೌದು, ನಾನು ಅವರ ಮನೆಯಿಂದಲೇ ಕದ್ದಿದ್ದೇನೆʼ ಎಂದು ಅವರು ಛೇಡಿಸಿದರು.
ಸೆ.13 ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ
ಮಹಿಳೆಯರು ಪುರುಷರಿಗಿಂತ ಹೆಚ್ಚು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ
ಮಹಿಳಾ ನೌಕರರ ಸಮಾವೇಶದ ಬಗ್ಗೆ ಕೇಳಿದಾಗ, ʼಮಹಿಳೆಯರಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾನು ನೀರಾವರಿ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದಾಗ, ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದೆ. ಆಗ ಅಲ್ಲಿ ಒಬ್ಬ ವ್ಯಕ್ತಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ಯೋಜನೆಗೆ ಅಡ್ಡಿಪಡಿಸುತ್ತಿದ್ದ. ಆಗ ಅಲ್ಲಿದ್ದ ಮೂವರು ಮಹಿಳಾ ಐಎಎಸ್ ಅಧಿಕಾರಿಗಳಿಗೆ ನಾನು ಕೆಲವು ಮಾರ್ಗದರ್ಶನ ನೀಡಿದೆ. ಅವರು ಕೇವಲ ಒಂದೇ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಿದರು. ಹೀಗೆ ಮಹಿಳೆಯರು ಎಲ್ಲಾ ವಿಚಾರದಲ್ಲೂ ಸಮರ್ಥರಿದ್ದಾರೆ. ಅವರು ಪುರುಷರಿಗಿಂತ ಹೆಚ್ಚು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ನಾವು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಇಂದು ಮಹಿಳಾ ನೌಕರರ ಸಂಘದವರ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದೇವೆ. ಎಲ್ಲರೂ ಸಮಾನರು, ಪುರುಷ ಹಾಗೂ ಮಹಿಳೆಯರು ಎಂದು ತಾರತಮ್ಯ ಮಾಡಬಾರದುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.