ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿ ಶಾಸಕರಿಗೆ 35 ಕೋಟಿ ರುಪಾಯಿ ನೀಡುವ ಆಮಿಷ: ಡಿಎಂಕೆ ನಾಯಕನ ವಿರುದ್ಧ ಆಡಳಿತರೂಢ ಟಿವಿಕೆ ಆರೋಪ

ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂವರು ಶಾಸಕರು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಂಪರ್ಕದಲ್ಲಿದ್ದಾರೆ. ಅವರಿಗೆ ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರು 35 ಕೋಟಿ ರೂ. ನೀಡುತ್ತಿದ್ದಾರೆ ಎಂದು ರಾಜ್ಯ ಸಚಿವ ಆರ್. ನಿರ್ಮಲ್ ಕುಮಾರ್ ಆರೋಪಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಸಂಗ್ರಹ ಚಿತ್ರ

ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ (DMK) ನಾಯಕ ವಿ. ಸೆಂಥಿಲ್ ಬಾಲಾಜಿ ಅವರು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೂವರು ಶಾಸಕರಿಗೆ ತಲಾ 35 ಕೋಟಿ ರೂ. ನೀಡುವ ಆಮಿಷೆ ಒಡ್ಡಿದ್ದಾರೆ ಎಂದು ರಾಜ್ಯ ಸಚಿವ ಆರ್. ನಿರ್ಮಲ್ ಕುಮಾರ್ (State minister R Nirmal Kumar) ಆರೋಪಿಸಿದ್ದಾರೆ. ಇದು ಈಗ ಟಿವಿಕೆ ಮತ್ತು ಡಿಎಂಕೆ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ರಾಜ್ಯ ವಿಧಾನ ಸಭೆಯಲ್ಲಿ ಸ್ಪೀಕರ್ ವಿರುದ್ಧ ಮತ ಚಲಾಯಿಸಲು ಡಿಎಂಕೆ ನಾಯಕರು ಹಣದ ಆಮಿಷೆ ಒಡ್ಡಿದ್ದಾರೆ ಎಂದು ಟಿವಿಕೆ ಶಾಸಕ ಎನ್. ಇಳಯರಾಜ (N Elaiyaraja) ಅವರು ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಸಚಿವ ಆರ್. ನಿರ್ಮಲ್ ಕುಮಾರ್, ತಮಿಳಗ ವೆಟ್ರಿ ಕಳಗಂ ಪಕ್ಷದ ಮೂವರು ಶಾಸಕರು ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಪ್ರತಿ ಶಾಸಕರಿಗೆ ಸುಮಾರು 35 ಕೋಟಿ ರೂ. ನೀಡುವ ಆಮಿಷೆ ಒಡ್ಡಿದ್ದಾರೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಹೈಡ್ರಾಮ; ಎಐಎಡಿಎಂಕೆ ತೊರೆದು ಟಿವಿಕೆ ಸೇರಲು ಮುಂದಾದ ಮಾಜಿ ಸಚಿವರು, ಶಾಸಕರು, ನೂರಾರು ಕಾರ್ಯಕರ್ತರು

ಟಿವಿಕೆ ಶಾಸಕ ಎನ್. ಇಳಯರಾಜ ಅವರು ಈ ಕುರಿತು ಜೂನ್ 29 ರಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇದರಲ್ಲಿ ಅವರು ತಿರುನಾವುಕ್ಕರಸು ಎಂಬುವವರು ಇಂಡಿಯನ್ ಪೊಲಿಟಿಕಲ್ ಡೆಮಾಕ್ರಟಿಕ್ ಸ್ಟ್ರಾಟಜೀಸ್ (ಐಪಿಡಿಎಸ್) ಎಂಬ ಸಮಾಲೋಚನಾ ಸಂಸ್ಥೆಯನ್ನು ನಡೆಸುವುದಾಗಿ ಹೇಳಿಕೊಂಡು ಪ್ರಮುಖ ರಾಜಕೀಯ ಪಕ್ಷದವರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಸ್ಪೀಕರ್ ಜೆಸಿಡಿ ಪ್ರಭಾಕರ್ ವಿರುದ್ಧ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸುವಂತೆ ತಿರುನಾವುಕ್ಕರಸು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ 35 ಕೋಟಿ ರೂ. ನೀಡುವ ಆಮಿಷೆ ಒಡ್ಡಿದ್ದಾರೆ ಎಂದು ಶಾಸಕರು ಆರೋಪಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ತಿರುನಾವುಕ್ಕರಸು, ತಿರುಚಿರಾಪಳ್ಳಿಯ ನರೇಶ್ ಮತ್ತು ಚೆನ್ನೈನ ತ್ಯಾಗರಾಜನ್ ಎಂಬವರನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಮಾಜಿ ಡಿಎಂಕೆ ಸಚಿವ ಮತ್ತು ಕೊಯಮತ್ತೂರು ದಕ್ಷಿಣ ಶಾಸಕ ವಿ ಸೆಂಥಿಲ್ ಬಾಲಾಜಿ ಅವರ ಸಹೋದರ ವಿ. ಅಶೋಕ್ ಕುಮಾರ್ ಅವರನ್ನು ನರೇಶ್ ಭೇಟಿಯಾಗಿದ್ದರು ಐಪಿಡಿಎಸ್ ಅನ್ನು ಸೆಂಥಿಲ್ ಬಾಲಾಜಿ ನಡೆಸುತ್ತಿದ್ದಾರೆ. ಇದು ವಿಚಾರಣೆಯಲ್ಲೂ ತಿಳಿದು ಬಂದಿದೆ. ಸೆಂಥಿಲ್ ಬಾಲಾಜಿ ಮತ್ತು ಅಶೋಕ್ ಕುಮಾರ್ ಅವರ ಸೂಚನೆಯ ಮೇರೆಗೆ ನರೇಶ್ ಈ ಕೃತ್ಯ ಎಸಗಿದ್ದಾರೆ ಎಂದು ಟಿವಿಕೆ ಆರೋಪಿಸಿದೆ.

ಕಳೆದ 40 ದಿನಗಳಿಂದ ನಾವು ನಿರಂತರವಾಗಿ ಡಿಎಂಕೆ, ಸ್ಟಾಲಿನ್ ಮತ್ತು ಅವರ ತಂಡವು ನಮ್ಮ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಹೇಳುತ್ತಿದ್ದೇವೆ. ನಮ್ಮ ಶಾಸಕರಲ್ಲಿ ಒಬ್ಬರಿಗೆ ಡಿಎಂಕೆ ಸದಸ್ಯರು ಬೆದರಿಕೆ ಕೂಡ ಹಾಕಿದ್ದಾರೆ. ಇದನ್ನು ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ನಡೆಸುತ್ತಿದ್ದಾರೆ ಎಂದು ನಿರ್ಮಲ್ ಕುಮಾರ್ ಆರೋಪಿಸಿದ್ದಾರೆ.

ರಾಮ ಮಂದಿರ ದೇಣಿಗೆ ಕಳವು: ಟಿನ್ನು ಯಾದವ್ ಪ್ರಮುಖ ಸೂತ್ರಧಾರ ಎಂದ ಚಂಪತ್ ರಾಯ್‌

ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಎಂಡಿಎಂಕೆ ಹೊರಬಂದು ಆಡಳಿತಾರೂಢ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿದ ಬಳಿಕ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಅವರು ಪ್ರತಿಕ್ರಿಯಿಸಿದ್ದು, ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಸಿಎಂ ಸಿ. ಜೋಸೆಫ್ ವಿಜಯ್ ಇಬ್ಬರು ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಇದರ ವಿರುದ್ಧ ರಾಜ್ಯಪಾಲ ಆರ್.ವಿ. ಅರ್ಲೇಕರ್ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ನ್ಯಾಯ ಖಚಿತಪಡಿಸಿಕೊಳ್ಳಲು ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author