ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಹೈಡ್ರಾಮ; ಎಐಎಡಿಎಂಕೆ ತೊರೆದು ಟಿವಿಕೆ ಸೇರಲು ಮುಂದಾದ ಮಾಜಿ ಸಚಿವರು, ಶಾಸಕರು, ನೂರಾರು ಕಾರ್ಯಕರ್ತರು

AIADMK Workers Set to Join TVK: ನಟ-ತಮಿಳುನಾಡು ಸಿಎಂ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಅತಿದೊಡ್ಡ ರಾಜಕೀಯ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲು ಸಜ್ಜಾಗಿದೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನಡೆಯ ನಂತರ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳು ಸೇರಿ ಹಲವು ಸವಾಲುಗಳನ್ನು ಎದುರಿಸುತ್ತಿದೆ.

ಟಿವಿಕೆ ಸೇರಲು ಮುಂದಾದ ಎಐಎಡಿಎಂಕೆ ನಾಯಕರು

ಸಾಂದರ್ಭಿಕ ಚಿತ್ರ -

Priyanka P
Priyanka P Jul 2, 2026 12:57 PM

ಚೆನ್ನೈ, ಜು. 2: ನಟ-ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅತಿದೊಡ್ಡ ರಾಜಕೀಯ ಸೇರ್ಪಡೆ ಕಾರ್ಯಕ್ರಮವೊಂದನ್ನು ಆಯೋಜಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಎಐಎಡಿಎಂಕೆಯ(AIADMK) ಕನಿಷ್ಠ ಐವರು ಮಾಜಿ ಸಚಿವರು, ಸುಮಾರು 15 ಮಾಜಿ ಶಾಸಕರು ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಗುರುವಾರ (ಜುಲೈ 2) ನಡೆಯುವ ಕಾರ್ಯಕ್ರಮದಲ್ಲಿ ಆಡಳಿತಾರೂಢ ಟಿವಿಕೆ ಪಕ್ಷವನ್ನು ಸೇರುವ ನಿರೀಕ್ಷೆಯಿದೆ. ಈ ಬೆಳವಣಿಗೆಯನ್ನು ತಮಿಳುನಾಡಿನ ರಾಜಕೀಯದಲ್ಲಿ ಟಿವಿಕೆಗಯ ಮಹತ್ವದ ಸಂಘಟನಾ ಬಲವರ್ಧನೆ ಎಂದು ಪರಿಗಣಿಸಲಾಗುತ್ತಿದೆ.

ಈ ಕಾರ್ಯಕ್ರಮವು ಮಾಮಲ್ಲಪುರಂನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಇತ್ತೀಚೆಗೆ ಟಿವಿಕೆ ಶಾಸಕನನ್ನು ಸೆಳೆಯುವ ಯತ್ನ ಹಾಗೂ ಕುದುರೆ ವ್ಯಾಪಾರ ಆರೋಪ ಕೇಳಿಬಂದಿರುವ ನಡುವೆ ಪಕ್ಷದ ಸಂಘಟನಾ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗುತ್ತಿದೆ.

ಸೇರ್ಪಡೆಯಾಗಲಿರುವ ಹಿರಿಯ ನಾಯಕರಲ್ಲಿ ಎಐಎಡಿಎಂಕೆ ಮಾಜಿ ಸಚಿವರಾದ ಸಿ. ವಿಜಯಭಾಸ್ಕರ್, ಎಂ.ಆರ್. ವಿಜಯಭಾಸ್ಕರ್, ಎಂ.ಎಸ್.ಎಂ. ಆನಂದನ್ ಮತ್ತು ಎಸ್. ವಲರ್ಮತಿ ಪ್ರಮುಖರು. ಕರೂರ್ ಮತ್ತು ಪುದುಕ್ಕೊಟ್ಟೈನ ಹಲವು ಮಾಜಿ ಶಾಸಕರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಸ್ಥಳೀಯ ಕಾರ್ಯಕರ್ತರು ಕೂಡ ಟಿವಿಕೆಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಾಯಲ್ವಿಳಿ ಕೂಡ ಸೇರ್ಪಡೆ ಕಾರ್ಯಕ್ರಮದ ಸಮಯದಲ್ಲಿ ಔಪಚಾರಿಕವಾಗಿ ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ.

ತರಾತುರಿಯಲ್ಲಿ ಮೇಕೆದಾಟು ನಿರ್ಣಯ ಅಂಗೀಕಾರ: ವಿಜಯ್ ಸರ್ಕಾರದ ವಿರುದ್ಧ ಎಐಎಡಿಎಂಕೆ ವಾಗ್ದಾಳಿ

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನಡೆಯ ನಂತರ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಎಐಎಡಿಎಂಕೆ ಆಂತರಿಕ ಭಿನ್ನಾಭಿಪ್ರಾಯಗಳು ಸೇರಿ ಇನ್ನಿತರ ಸವಾಲುಗಳನ್ನು ಎದುರಿಸುತ್ತಿದೆ. ಈ ನಡುವೆಯೇ ಬೃಹತ್‌ ಪ್ರಮಾಣದಲ್ಲಿ ಪಕ್ಷಾಂತರಕ್ಕೆ ವೇದಿಕೆ ಸಜ್ಜುಗೊಂಡಿದೆ.

ವಿಜಯ ಭಾಸ್ಕರ್ ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನವೇ ಎಐಎಡಿಎಂಕೆಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಸದ್ಯದ ಬೆಳವಣಿಗೆಯು ವೈಯಕ್ತಿಕ ಪಕ್ಷಾಂತರವಲ್ಲ. ಬದಲಿಗೆ ಪಕ್ಷದ ಒಟ್ಟಾರೆ ಸಾಂಸ್ಥಿಕ ಬದಲಾವಣೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಕರೂರ್ ಮತ್ತು ಪುದುಕ್ಕೊಟ್ಟೈನ ಎಐಎಡಿಎಂಕೆ ಪದಾಧಿಕಾರಿಗಳು, ಮಾಜಿ ಶಾಸಕರು ಹಾಗೂ ತಳಮಟ್ಟದ ಕಾರ್ಯಕರ್ತರು ಸೇರಿ ಹಲವರು ಒಂದೇ ಕಾರ್ಯಕ್ರಮದಲ್ಲಿ ಟಿವಿಕೆ ಪಕ್ಷವನ್ನು ಸೇರಲಿದ್ದಾರೆ.

ಈ ಸೇರ್ಪಡೆ ಕಾರ್ಯಕ್ರಮವನ್ನು ಟಿವಿಕೆ ಪಕ್ಷದ ವಿಸ್ತರಣಾ ಪ್ರಯತ್ನಗಳ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ. ಮುಂಬರುವ ಚುನಾವಣಾ ಕಣಗಳಿಗೆ ಸಜ್ಜಾಗುತ್ತಿರುವ ಪಕ್ಷವು ತನ್ನ ಸಂಘಟನಾ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಅನುಭವಿ ರಾಜಕೀಯ ನಾಯಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಈ ಬೃಹತ್ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ, ನಾಲ್ವರು ಎಐಎಡಿಎಂಕೆ ಮಾಜಿ ಸಚಿವರಾದ ಎಂ.ಸಿ. ಸಂಪತ್, ಎ.ನ್ಆರ್. ಶಿವಪತಿ, ಕಡಂಬೂರ್ ಸಿ.ರಾಜು ಮತ್ತು ಉದುಮಲೈ ಕೆ. ರಾಧಾಕೃಷ್ಣನ್ ಟಿವಿಕೆಗೆ ಸೇರಿದ್ದರು. ಇವರೆಲ್ಲರೂ ಜೆ. ಜಯಲಲಿತಾ ಮತ್ತು ಪಳನಿಸ್ವಾಮಿ ಅವರ ಆಡಳಿತದಲ್ಲಿ ವಿವಿಧ ಹಂತಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಟಿವಿಕೆ ಅಥವಾ ಎಐಎಡಿಎಂಕೆ ಪಕ್ಷಗಳು ಸೇರ್ಪಡೆಯಾಗಲಿರುವ ನಾಯಕರ ಪಟ್ಟಿಯನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ.