ಬರ ಪರಿಹಾರ ಎರಡು ಕಂತಿನಲ್ಲಿ 5000 ರೂ. ಖಚಿತ; ಈಗಾಗಲೇ ಮೊದಲ ಕಂತು 2500 ರೂ. ಬಿಡುಗಡೆ ಆಗಿದೆ ಎಂದ ಸಿಎಂ
CM DK Shivakumar: ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು/ಮೈಸೂರು, ನ.11: ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು ಕಂತಿನಲ್ಲಿ 5,000 ರೂ. ಬಿಡುಗಡೆ ಮಾಡುತ್ತದೆ. ಮೊದಲನೆ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ. ಪ್ರತಿ ರೈತರಿಗೆ ಹಣ ತಲುಪಿಸಲು ಸೂತ್ರ ರಚಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಹೇಳಿದರು. ಸದಾಶಿವನಗರದ ನಿವಾಸದ ಬಳಿ ಹಾಗೂ ಮೈಸೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.
ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಆದರೆ ಹಣ ತಲುಪದ ರೈತರ ಖಾತೆಯಲ್ಲಿ ಇರುವ ಅಡತಡೆ ನಿವಾರಿಸಿ ಪಾವತಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರ ಕೊಡದೆ ಇದ್ದರೂ ನುಡಿದಂತೆ ನಾವು ಕೊಡುತ್ತೇವೆ
ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿಯಾಗಿದ್ದರೆ ಅದನ್ನು ಸರಿಪಡಿಸಲಾಗುವುದು. ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ರೈತರಿಗೆ ನುಡಿದಂತೆ ಎರಡು ಕಂತುಗಳಲ್ಲಿ 5 ಸಾವಿರ ರೂ. ಪರಿಹಾರ ಪಾವತಿ ಮಾಡುತ್ತದೆ ಎಂದು ಭರವಸೆ ನೀಡಿದರು.
ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ
ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು ಎಂದರು.
ನಿಗಮ ಮಂಡಳಿಗೆ ಶೀಘ್ರ ನೇಮಕ, ಇಂದು ನಿರ್ದೇಶಕ ಪಟ್ಟಿ ಬಿಡುಗಡೆ
ನಿಗಮ ಮಂಡಳಿಯ ನೇಮಕ 3 ಹಂತದಲ್ಲಿ ನಡೆಯಲಿದ್ದು, ಮೊದಲನೇ ಹಂತದಲ್ಲಿ 500 ಮಂದಿಯ ನಿರ್ದೇಶಕರ ಪಟ್ಟಿ ಸಿದ್ದವಿದ್ದು, ಅದಕ್ಕೆ ಸಹಿ ಹಾಕಿ ಬಂದಿದ್ದೇನೆ. ಆ ಪಟ್ಟಿ ಇಂದು ಬಿಡುಗಡೆ ಆಗಲಿದೆ. ಪಕ್ಷದ ಹಿರಿಯ ಶಾಸಕರಿಗೂ ನಿಗಮ ಮಂಡಳಿಯಲ್ಲಿ ಸೂಕ್ತ ಅವಕಾಶ ಕೊಡಬೇಕು. ಅದು ನಮ್ಮ ಕರ್ತವ್ಯ. ಆ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಎಥೆನಾಲ್ ಕಲಬೆರಕೆ ಬಗ್ಗೆ ಉತ್ತರಿಸಿ, ಬಿಜೆಪಿ ನಾಯಕರು ಪ್ರತಿಭಟನೆ ಮಾಡಲಿ
ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ಬೆಂಗಳೂರಲ್ಲಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, 'ಮಾಡಲಿ, ಅವರು ಮಾಡುತ್ತಿರುವುದು ಪ್ರತಿಭಟನೆಯಲ್ಲ ರಾಜಕಾರಣ. ಕೇಂದ್ರ ಸರ್ಕಾರ ತೈಲಬೆಲೆ ಏರಿಸಿದಾಗ ಏಕೆ ಪ್ರತಿಭಟನೆ ಮಾಡಲಿಲ್ಲ? ಎಥೆನಾಲ್ ಅನ್ನು ಶೇ.20ರಷ್ಟು ಬೆರೆಸುವ ಬದಲು ಶೇ.30ರಷ್ಟು ಬೆರೆಸಿದ್ದಾರೆ. ಇದರಿಂದ ರಾಜ್ಯದ ಕೋಟ್ಯಂತರ ವಾಹನಗಳಿಗೆ ತೊಂದರೆಯಾಗಿದೆ. ಎಂಜಿನ್ಗಳು ಕೆಟ್ಟು ಹೋಗಿ ನಷ್ಟವಾಗಿದೆ. ಇವೆಲ್ಲಾ ಬಿಜೆಪಿ ಅವರಿಗೆ ಕಾಣುವುದಿಲ್ಲವೇ? ಈ ಅವಾಂತರ ಅವರಿಗೆ ತಿಳಿದಿಲ್ಲವೇ?' ಎಂದು ಅವರು ಪ್ರಶ್ನಿಸಿದರು.
'ಎಥೆನಾಲ್ ಅವೈಜ್ಞಾನಿಕ ಬೆರೆಕೆಗೆ ಸಂಬಂಧಿಸಿದಂತೆ ನಮ್ಮ ಆಹಾರ ಮಂತ್ರಿಗಳು ರಾಜ್ಯದ 67ಕಡೆ ಪರೀಕ್ಷೆ ನಡೆಸಿ ಸತ್ಯಾಸತ್ಯತೆ ಅರಿತಿದ್ದಾರೆ. ಈ ಕೃತ್ಯದ ಬಗ್ಗೆ ಸಾಕ್ಷಿ ಸಮೇತ ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಕಲಬೆರೆಕೆ ತೈಲ ಸರಬರಾಜು ಮಾಡಿ ರಾಜ್ಯದ ಜನರಿಗೆ ಹೊಡೆತ ನೀಡಿರುವುದಕ್ಕೆ ಯಾರು ಜವಾಬ್ದಾರಿ? ಕೇಂದ್ರದ ಸಚಿವರು ಇಲ್ಲ, ಇಲ್ಲ ಎನ್ನುತ್ತಿದ್ದಾರೆ. ಆದರೆ, ನಮ್ಮ ಸ್ಯಾಂಪಲ್ಗಳು ಸಾಕ್ಷಿಗೆ ಇವೆ. ಮೊದಲು ಇದಕ್ಕೆ ಬಿಜೆಪಿಯವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
2027ರಲ್ಲಿ ಮೂರು ದಿನಗಳ 'ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ' ಆಯೋಜನೆ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ಬಗ್ಗೆ ಕೇಳಿದಾಗ, ‘ಅವರ ಖುಷಿಗೆ ಮಾತನಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಹಾಕುತ್ತೇನೆ ಅಂದರು, ಇನ್ನೊಬ್ಬರು ಪಕ್ಷ ಅಧ್ಯಕ್ಷರು ‘ನನ್ಮಕ್ಕಳುʼ ಅಂತ ಜರಿದರು. ಹಾಗಾದರೆ, ನಾವೆಲ್ಲಾ ವಿಜಯೇಂದ್ರರ ಮಕ್ಕಳಾ? ಬಿಜೆಪಿ ಅವರು ಆತ್ಮಸಂತೋಷಕ್ಕೆ ಬೇರೆಯವರನ್ನು ಬೈಯುತ್ತಿದ್ದಾರೆʼ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.