Bangalore Palace Land Bill: ಬೆಂಗಳೂರು ಅರಮನೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಗೆಜೆಟ್ ಅಧಿಸೂಚನೆ ಪ್ರಕಟ
Bangalore Palace Land Bill: ಬೆಂಗಳೂರು ಅರಮನೆ ಮೈದಾನದ ಟಿಡಿಆರ್‌ಗಾಗಿ ನಿಗದಿಯಾಗಿರುವ ಮೌಲ್ಯ ದುಬಾರಿ ಎಂಬ ಕಾರಣಕ್ಕೆ ರಾಜ್ಯಸರ್ಕಾರ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ವಿಧೇಯಕ 2025 ಅನ್ನು ಸದನದಲ್ಲಿ ಮಂಡಿಸಿ, ಅಂಗೀಕಾರ ಪಡೆದಿದೆ. ಈ ಕಾಯ್ದೆ ಪ್ರಕಾರ ಯಾವುದೇ ಮೂಲ ಸೌಕರ್ಯ ಯೋಜನೆಗೆ ಬೆಂಗಳೂರು ಅರಮನೆಯ ಭೂಮಿ ಬಳಸಲು ಸರ್ಕಾರ ಅಧಿಕಾರ ಹೊಂದಿರಲಿದೆ.


ಬೆಂಗಳೂರು: ಅರಮನೆ ಮೈದಾನದ ಭೂಭಾಗಕ್ಕೆ ಟಿಡಿಆರ್ ನೀಡಲು ನಿರಾಕರಿಸುವುದಕ್ಕೆ ಸಂಬಂಧಿಸಿ ರೂಪಿಸಲಾಗಿರುವ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025ಕ್ಕೆ (Bangalore Palace Land Bill) ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಹಿ ಹಾಕಿದ್ದು, ಈ ಕಾಯ್ದೆ ಜಾರಿಗೆ ರಾಜ್ಯದ ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿರುವ 472 ಎಕರೆ 16 ಗುಂಟೆ ಭೂ ಪ್ರದೇಶದ ಪೈಕಿ 15 ಎಕರೆ 29 ಗುಂಟೆಯನ್ನು ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ರಾಜ್ಯಸರ್ಕಾರ ಮುಂದಾಗಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜಮನೆತನದ ವಾರಸುದಾರರು ಪರಿಹಾರ ರೂಪದಲ್ಲಿ ಟಿಡಿಆರ್ ನೀಡುವಂತೆ ಆಗ್ರಹಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ರಸ್ತೆ ಅಭಿವೃದ್ಧಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ 3 ಸಾವಿರ ಕೋಟಿ ರೂ. ಮೌಲ್ಯದ ಟಿಡಿಆರ್ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.
ಕೋರ್ಟ್ ನಿರ್ದೇಶನದ ಪ್ರಕಾರ ರಾಜ್ಯಸರ್ಕಾರ ಈಗಾಗಲೇ ಟಿಡಿಆರ್ ಪತ್ರವನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ನಡುವೆ ಟಿಡಿಆರ್‌ಗಾಗಿ ನಿಗದಿಯಾಗಿರುವ ಮೌಲ್ಯ ದುಬಾರಿ ಎಂಬ ಕಾರಣಕ್ಕೆ ರಾಜ್ಯಸರ್ಕಾರ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ವಿಧೇಯಕ 2025ನ್ನು ರೂಪಿಸಿ ವಿಧಾನಮಂಡಲದ ಉಭಯಸದನದಲ್ಲಿ ಅಂಗೀಕಾರ ಪಡೆದುಕೊಂಡಿದೆ.
ಈ ಕಾಯ್ದೆ ಪ್ರಕಾರ ಯಾವುದೇ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 4ನೇ ಪ್ರಕರಣದಲ್ಲಿ ಬರುವ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸಲು ಅಧಿಕಾರವನ್ನು ಹೊಂದಿರಲಿದೆ.
1966 ರಲ್ಲೇ ಆಗಿನ ಸರ್ಕಾರ ಬೆಂಗಳೂರು ಅರಮನೆ ಅರ್ಜನೆ ಮತ್ತು ವರ್ಗಾವಣೆ ಅಧಿನಿಯಮವನ್ನು ರೂಪಿಸಿ ಸುಮಾರು 11 ಕೋಟಿ ರೂ. ಪರಿಹಾರ ಠೇವಣಿ ಮಾಡುವ ಮೂಲಕ ಅರಮನೆ ಮೈದಾನವನ್ನು ಸ್ವಾಧೀನಪಡಿಸಿಕೊಂಡಿದೆ. ಈ ವಿಧೇಯಕವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ ಕೂಡ ವಿಧೇಯಕಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ವಿವರಣೆ ನೀಡಿದ್ದರು.
ಇತ್ತೀಚೆಗೆ ರಸ್ತೆ ನಿರ್ಮಾಣಕ್ಕೆ 15.29 ಎಕರೆಯನ್ನು ಬಳಸಿಕೊಳ್ಳಲು ಮುಂದಾದಾಗ ರಾಜಮನೆತನದ ವಾರಸುದಾರರು ತಗಾದೆ ತೆಗೆದಿದ್ದರು. ನ್ಯಾಯಾಲಯ ಕೂಡ ಟಿಡಿಆರ್ ನೀಡಲು ನಿರ್ದೇಶಿಸಿದ್ದರಿಂದಾಗಿ ರಾಜ್ಯಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಕಂಟೋನ್ಮೆಂಟ್ ಸಮೀಪದ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ಬಳಕೆ ಮಾಡಿಕೊಂಡಿರುವ 12.17 ಚ.ಮೀ. ಜಾಗಕ್ಕೆ 49 ಕೋಟಿ ರೂ. ಮೌಲ್ಯದ ಟಿಡಿಆರ್ ಪಾವತಿಸಲಾಗಿದೆ. ಉಳಿದಂತೆ 15 ಎಕರೆಯಲ್ಲಿ ರಸ್ತೆ ನಿರ್ಮಿಸದೇ ಇರುವುದರಿಂದ ಈಗಾಗಲೇ ವಿತರಿಸಲಾಗಿರುವ ಟಿಡಿಆರ್ ಸರ್ಟಿಫಿಕೇಟ್‌ಗಳನ್ನು ರಾಜಮನೆತನಕ್ಕೆ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ರಾಜ್ಯಸರ್ಕಾರ ಮನವಿ ಮಾಡಿಕೊಳ್ಳಲಿದೆ.
ಈ ಸುದ್ದಿಯನ್ನೂ ಓದಿ | MLA Ravi Ganiga: ನಟಿ ರಶ್ಮಿಕಾ ಮಂದಣ್ಣಗೆ ಬೆದರಿಕೆ ಆರೋಪ; ಶಾಸಕ ರವಿ ಗಣಿಗ ವಿರುದ್ಧ ದೂರು
ಒಂದು ವೇಳೆ ಟಿಡಿಆರ್ ಸರ್ಟಿಫಿಕೇಟ್‌ಗಳನ್ನು ರಾಜಮನೆತನಕ್ಕೆ ಕೊಟ್ಟರೆ ಅವರು ಅದನ್ನು ಬೇರೆಯವರಿಗೆ ಪರಭಾರೆ ಮಾಡುತ್ತಾರೆ. ಈ ರೀತಿ ವಿಲೇವಾರಿಯಾದ ಟಿಡಿಆರ್‌ನ್ನು ಮತ್ತೆ ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯಸರ್ಕಾರ ಆತಂಕ ವ್ಯಕ್ತಪಡಿಸಿದೆ. ಇದೀಗ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ ಮಸೂದೆಗೆ ರಾಜ್ಯಪಾಲರ ಅಂಕಿತವೂ ದೊರೆತಿರುವುದರಿಂದ ಈ ಕಾಯ್ದೆಯನ್ನು ಮುಂದಿಟ್ಟು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ಮೂಲಕ ನ್ಯಾಯಾಂಗ ನಿಂದನೆಯ ಕತ್ತಿಯಿಂದ ರಾಜ್ಯಸರ್ಕಾರ ಪಾರಾಗುವ ಪ್ರಯತ್ನ ನಡೆಸಿದೆ.