GBA parking fee: ಬೆಂಗಳೂರಿನ ಜನತೆಗೆ ರಿಲೀಫ್; ಮನೆ ಮುಂದೆ ನಿಲ್ಲಿಸುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಪ್ರಸ್ತಾವಕ್ಕೆ ತಡೆ
Bengaluru new parking rules: ರಾಜಧಾನಿಯ ನಾಗರಿಕರು ತಮ್ಮ ಮನೆ ಮುಂದೆ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೂ ಶುಲ್ಕ ವಿಧಿಸುವುದಾಗಿ ಜಿಬಿಎ ಇತ್ತೀಚೆಗೆ ಪ್ರಕಟಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನೂತನ ಪಾರ್ಕಿಂಗ್ ನೀತಿಯನ್ನು ಸದ್ಯಕ್ಕೆ ಅನುಷ್ಠಾನ ಮಾಡದಿರಲು ನಿರ್ಧರಿಸಿದೆ.
-
ಬೆಂಗಳೂರು: ನಗರದಲ್ಲಿ ಮನೆ ಮುಂದೆ ನಿಲ್ಲಿಸುವ ವಾಹನಗಳು ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪ್ರಸ್ತಾವನೆಗೆ (GBA parking fee) ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಆದೇಶವನ್ನು ತಡೆಹಿಡಿಯಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಜನವಿರೋಧಿ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ನಗರದ ನಾಗರಿಕರು ತಮ್ಮ ಮನೆ ಮುಂದೆ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೂ ಶುಲ್ಕ ವಿಧಿಸುವುದಾಗಿ ಜಿಬಿಎ ಪ್ರಕಟಿಸಿತ್ತು. ಇದಕ್ಕೆ ಸಾರ್ವಜನಿಕರಷ್ಟೇ ಅಲ್ಲದೆ, ಸ್ವತಃ ನಗರದ ಶಾಸಕರು ಮತ್ತು ಸಚಿವರಿಂದಲೂ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಎಚ್ಚೆತ್ತ ಪ್ರಾಧಿಕಾರವು ನಂತರ ಪ್ರಸ್ತಾವನೆಯನ್ನು ಪರಿಷ್ಕರಿಸಿ, ಎಲ್ಲೆಂದರಲ್ಲಿ ಅಲ್ಲದೆ ಆಯ್ದ ರಸ್ತೆಗಳಲ್ಲಿ ಮಾತ್ರ ಪಾರ್ಕಿಂಗ್ ಶುಲ್ಕ ವಿಧಿಸುವುದಾಗಿ ತಿಳಿಸಿ ಆಗಸ್ಟ್ 13 ರಂದು ಮತ್ತೆ ಸಾರ್ವಜನಿಕರ ಅಭಿಪ್ರಾಯ ಕೋರಿತ್ತು.
ಆದರೆ, ಪರಿಷ್ಕೃತ ಪ್ರಸ್ತಾವನೆಗೂ ಸಾವಿರಾರು ಸಂಖ್ಯೆಯಲ್ಲಿ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರಾಭಿವೃದ್ಧಿ ಇಲಾಖೆ, ಸದ್ಯದಲ್ಲೇ ಚುನಾವಣೆಗಳು ಸಮೀಪಿಸುತ್ತಿರುವಾಗ ಈ ಪ್ರಸ್ತಾವನೆ ಜಾರಿಗೆ ತಂದರೆ ಆಡಳಿತ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅಂದಾಜಿಸಿದೆ. ಪರಿಣಾಮವಾಗಿ, ಸಾರ್ವಜನಿಕರ ವಿರೋಧಕ್ಕೆ ಮಣಿದು ಈ ವಿವಾದಾತ್ಮಕ ಪಾರ್ಕಿಂಗ್ ಶುಲ್ಕದ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಟ್ಟಿದೆ.