ಕ್ಷೇತ್ರ ಮರುವಿಂಗಡಣೆ ಮಸೂದೆಗೆ 371 ಸಂಸದರ ಬೆಂಬಲದ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ; ಬಿಜೆಪಿ ಲೆಕ್ಕಾಚಾರ ಹೇಗಿದೆ?
Delimitation Bill 2026: ಸೋಮವಾರದಿಂದ (ನವೆಂಬರ್ 30) ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಈ ಮಸೂದೆಗೆ 371 ಸಂಸದರ ಬೆಂಬಲ ದೊರೆಯುವ ವಿಶ್ವಾಸದಲ್ಲಿದೆ ಬಿಜೆಪಿ. ಹೇಗಿದೆ ಲೆಕ್ಕಾಚಾರ ಎನ್ನುವ ವಿವರ ಇಲ್ಲಿದೆ.
ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ನರೇಂದ್ರ ಮೋದಿ -
ದೆಹಲಿ, ನ. 29: ಸೋಮವಾರದಿಂದ (ನವೆಂಬರ್ 30) ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ (Delimitation Bill 2026). ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಅಗತ್ಯವಾದ 3ನೇ 2ರಷ್ಟು ಬೆಂಬಲ ದೊರೆಯುವುದು ಬಹುತೇಕ ಖಾತ್ರಿಯಾಗಿದೆ. ಮಸೂದೆ ಪಾಸ್ ಆಗಲು 360 ಸಂಸದರ ಬೆಂಬಲ ಅಗತ್ಯವಾಗಿದ್ದು, 371 ಮತ ದೊರೆಯಲಿದೆ ಎಂದು ಕೇಂದ್ರ ವಿಶ್ವಾಸ ವ್ಯಕ್ತಪಡಿಸಿದೆ. ಹಾಗಾದರೆ ಕೇಂದ್ರದ ಲೆಕ್ಕಾಚಾರವೇನು? ಯಾವೆಲ್ಲ ಸಂಸದರ ಬೆಂಬಲ ದೊರೆಯಲಿದೆ ಎನ್ನುವ ವಿವರ ಇಲ್ಲಿದೆ.
ಮೊದಲೇ ಹೇಳಿದಂತೆ ಲೋಕಸಭೆಯಲ್ಲಿ ಮಸೂದೆ ಪಾಸ್ ಆಗಲು 2/3ರಷ್ಟು ಬಹುಮತದ ಅಗತ್ಯವಿದೆ. ಪ್ರಸ್ತುತ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ ಇದ್ದು, ಸಂಖ್ಯಾ ಬಲ 540ಕ್ಕೆ ಕುಸಿದಿದೆ. ಹೀಗಾಗಿ 3ನೇ 2ರಷ್ಟು ಬಹುಮತಕ್ಕೆ 360 ಸ್ಥಾನ ಬೇಕು. ಸದ್ಯ ಎನ್‌ಡಿಎ ಬಳಿ 320 ಸ್ಥಾನಗಳಿವೆ. ವಿವಿಧ ಪಕ್ಷಗಳು ಮಸೂದೆ ಬೆಂಬಲಿಸುವ ಭರವಸೆ ನೀಡಿದ್ದು, ಒಟ್ಟು ಸಂಖ್ಯಾ ಬಲ 371ಕ್ಕೆ ಏರಲಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ನಾಯಕರೊಂದಿಗೆ ಮೋದಿ ಸಭೆ:
Excellent meeting with the BJP Parliamentary Party Executive Committee at 7, LKM. Had productive conversations on various subjects. https://t.co/N5zyLT7u0r
— Narendra Modi (@narendramodi) November 29, 2026
ಈಗಾಗಲೇ ಡಿಎಂಕೆ ಮತ್ತು ಎನ್‌ಸಿಪಿ (ಶರದ್ ಪವಾರ್) ಮಸೂದೆಗೆ ಬೆಂಬಲ ಸೂಚಿಸಿವೆ. ಡಿಎಂಕೆಯಲ್ಲಿ 22 ಸಂಸದರಿದ್ದರೆ, 8 ಎನ್‌ಸಿಪಿ (ಎಸ್‌ಪಿ) ಸಂಸದರಿದ್ದಾರೆ. ಅಲ್ಲದೆ ಟಿಎಂಸಿ ಬಂಡಾಯ ಪಕ್ಷ, ಶಿರೋಮಣಿ ಅಕಾಲಿ ದಳ ಮೊದಲಾದ ಪಕ್ಷಗಳು ಈ ಬಾರಿ ಬಿಜೆಪಿಯ ಪಾಳಯದಲ್ಲಿವೆ. ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಕೇಂದ್ರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಅದಾಗ್ಯೂ ಇನ್ನುಳಿದಂತೆ ಯಾವೆಲ್ಲ ಪಕ್ಷ ಬೆಂಬಲ ಸೂಚಿಸಿದೆ ಎನ್ನುವ ಗುಟ್ಟನ್ನು ಕೇಂದ್ರ ಸರ್ಕಾರ ಬಿಟ್ಟು ಕೊಟ್ಟಿಲ್ಲ. ಇನ್ನು ರಾಜ್ಯಸಭೆಯಲ್ಲೂ ಅಗತ್ಯ ಬಹುಮತ ಸಿಗಬಹುದು ಎನ್ನುವ ಆತ್ಮವಿಶ್ವಾಸದಲ್ಲಿದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ.
ಡಿಎಂಕೆ ನಾಯಕ ಸ್ಟಾಲಿನ್ ಮನವೊಲಿಸಲು ಕಾಂಗ್ರೆಸ್ ನಾಯಕರು ವಿಫಲ
ಮೋದಿ ಸಮಾಲೋಚನೆ
ಸರ್ಕಾರವು ಲೋಕಸಭೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಣತಂತ್ರ ರೂಪಿಸಲು ಭಾನುವಾರ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ, ಬಿಜೆಪಿ ಮುಖಂಡ ನಿತಿನ್ ನಬಿನ್ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಯ ಪಕ್ಷದ ಸಂಸದರೊಂದಿಗೆ ಸಭೆ ನಡೆಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸೇರಿ 30ಕ್ಕೂ ಹೆಚ್ಚು ಸಂಸದರು ಮತ್ತು ಸಚಿವರು, ಪ್ರಧಾನಿ ಅಧಿಕೃತ ನಿವಾಸವಾದ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸಮಾಲೋಚನೆ ನಡೆಸಿದರು.
ಹಿಂದಿನ ಲೆಕ್ಕಾಚಾರದಲ್ಲೇ ಕ್ಷೇತ್ರ ವಿಸ್ತರಣೆ; ಎಲ್ಲ ರಾಜ್ಯಗಳಲ್ಲೂ ಶೇಕಡಾ 50ರಷ್ಟು ಹೆಚ್ಚಳ: ಪ್ರಲ್ಹಾದ್ ಜೋಶಿ ಭರವಸೆ
ಕಾಂಗ್ರೆಸ್‌ಗೆ ಮುಖಭಂಗ
ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸದಂತೆ ಡಿಎಂಕೆಯನ್ನು ತಡೆಯಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಭಾನುವಾರ ನಡೆಸಿದ ಕೊನೆಯ ಹಂತದ ಪ್ರಯತ್ನ ಮುರಿದು ಬಿದ್ದಿದೆ. ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಅವರಂತಹ ಘಟಾನುಘಟಿ ನಾಯಕರೇ ಸ್ಟಾಲಿನ್ ಅವರನ್ನು ಭೇಟಿಯಾಗಿ ಮಸೂದೆ ಬೆಂಬಲಿಸದಂತೆ ಮಾಡಿದ ಮನವಿ ಫಲ ಕೊಟ್ಟಿಲ್ಲ. ಮಸೂದೆ ಪರ ಮತ ಚಲಾಯಿಸುವುದಾಗಿ ಸ್ಟಾಲಿನ್ ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.