ನವದೆಹಲಿ: ಬಿಹಾರದ (Bihar) ಗಯಾಜಿಯಲ್ಲಿ ಶುಕ್ರವಾರ ನಡೆದ ಬೃಹತ್ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಭಾಗಿಯದ್ದರು. ಮೋದಿ ಜೊತೆ ಲಾಲು ಯಾದವ್ (Lalu Yadav) ಅವರ ರಾಷ್ಟ್ರೀಯ ಜನತಾ ದಳದ (Rashtriya Janata Dal) ಇಬ್ಬರು ಶಾಸಕರಾದ ವಿಭಾ ದೇವಿ ಮತ್ತು ಪ್ರಕಾಶ್ ವೀರ್ ಉಪಸ್ಥಿತರಾಗಿದ್ದು ಚುನಾವಣೆಗೆ ಸಿದ್ಧವಾಗಿರುವ ಬಿಹಾರದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಮೋದಿಯವರು ಆರ್‌ಜೆಡಿಯನ್ನು ಭ್ರಷ್ಟಾಚಾರದ ಆರೋಪದಲ್ಲಿ ಟೀಕಿಸಿದ ವೇದಿಕೆಯ ಹಿಂಭಾಗದಲ್ಲಿ ಈ ಶಾಸಕರು ಕುಳಿತಿದ್ದರು.
ವಿಭಾ ದೇವಿಯವರು 2020ರಲ್ಲಿ ನವಾಡಾ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ಆರ್‌ಜೆಡಿಯ ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್‌ರ ಪತ್ನಿಯಾಗಿದ್ದು, ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ರಾಜ್ ಬಲ್ಲಭ್ ಖುಲಾಸೆಗೊಂಡಿದ್ದಾರೆ. ಪ್ರಕಾಶ್ ವೀರ್ ರಾಜೌಲಿ ಕ್ಷೇತ್ರದ ಆರ್‌ಜೆಡಿ ಶಾಸಕರಾಗಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ವಿವೇಕ್ ಠಾಕೂರ್ ಈ ವಿಷಯದ ಬಗ್ಗೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. “ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಲಾಗಿತ್ತು. ಕೆಲವರು ಬಂದರು, ಕೆಲವರು ಬರಲಿಲ್ಲ. ವಿರೋಧ ಪಕ್ಷದವರಿಂದ ಹೆಚ್ಚಿನವರು ಗೈರುಹಾಜರಾದರು. ಜೆಹಾನಾಬಾದ್‌ನ ಆರ್‌ಜೆಡಿ ಸಂಸದ, ಗವರ್ನರ್, ಸಿಪಿಎಂ ಸದಸ್ಯರೂ ಆಹ್ವಾನಿಸಲಾಗಿತ್ತು. ಯಾರು ಬಂದರು, ಯಾರು ಬರಲಿಲ್ಲ ಎಂಬುದಷ್ಟೇ ವಿಷಯ” ಎಂದು ತಿಳಿಸಿದರು.
ಈ ಸುದ್ದಿಯನ್ನು ಓದಿ: Viral Video: ದೆಹಲಿ ರಸ್ತೆಯಲ್ಲಿ ಹೃದಯ ಬಿದ್ದಿದೆ, ವೈರಲ್ ಆಯ್ತು ಪೋಸ್ಟ್; ಏನಿದರ ಅಸಲಿಯತ್ತು?
ಮೋದಿಯವರು ಬಿಹಾರದಲ್ಲಿ 13,000 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಗಯಾಜಿ-ದೆಹಲಿಯ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ವೈಶಾಲಿ-ಕೊಡೆರ್ಮಾದ ಬೌದ್ಧ ಸರ್ಕ್ಯೂಟ್ ರೈಲುಗಳನ್ನು ಪ್ರಾರಂಭಿಸಿದರು. ಮುಜಾಫರ್‌ಪುರದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಮಾಮಿ ಗಂಗೆ ಯೋಜನೆಯಡಿ ಮುಂಗೇರ್‌ನಲ್ಲಿ 520 ಕೋಟಿ ರೂ. ವೆಚ್ಚದ ಒಳಚರಂಡಿ ಸಂಸ್ಕರಣ ಘಟಕ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಯೋಜನೆಯಡಿ 12,000 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕೀಗಳನ್ನು ಹಸ್ತಾಂತರಿಸಿದರು.
ರ‍್ಯಾಲಿಯಲ್ಲಿ, ಮೋದಿಯವರು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಟೀಕಿಸಿದರು. 30 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರುವ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನು ಕಡ್ಡಾಯವಾಗಿ ತೆಗೆದುಹಾಕುವ ಮೂರು ಮಸೂದೆಗಳನ್ನು ಇವರು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. “ಸರ್ಕಾರಿ ಉದ್ಯೋಗಿಯು 50 ಗಂಟೆಗಳ ಕಾಲ ಜೈಲಿನಲ್ಲಿದ್ದರೆ ಉದ್ಯೋಗ ಕಳೆದುಕೊಳ್ಳುತ್ತಾನೆ. ಆದರೆ ಆರ್‌ಜೆಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಬಿಹಾರದ ಜನರಿಗೆ ಗೊತ್ತಿದೆ” ಎಂದು ಹೇಳಿದರು.