ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Tickets: ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್ ಅಸಮಾಧಾನ

DK Suresh: ಶಾಸಕರಿಗೆ ಉಚಿತವಾಗಿ ಐಪಿಎಲ್ (IPL) ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದು, ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು ಎಂದ ಡಿ.ಕೆ. ಸುರೇಶ್

ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್‌ (ಸಂಗ್ರಹ ಚಿತ್ರ) -

Profile
Siddalinga Swamy Mar 30, 2026 3:56 PM

ಬೆಂಗಳೂರು, ಮಾ.30: ಉಚಿತವಾಗಿ ಟಿಕೆಟ್ ಕೇಳಿರುವುದು ತಪ್ಪು. ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ. ಇದು ಉತ್ತಮವಾದುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಹೇಳಿದರು. ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ (IPL 2026 Tickets) ನೀಡಬೇಕು ಎಂಬ ಬೇಡಿಕೆ ಬಗ್ಗೆ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಐಪಿಎಲ್‌ ಟಿಕೆಟ್‌ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಅದು ಮಹಾಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ. ಮೊದಲಿನಿಂದಲೂ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲʼ ಎಂದು ತಿಳಿಸಿದರು.

ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು

ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, ʼಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರ್ಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು. ಕಂಠೀರವ ಕ್ರೀಡಾಂಗಣ, ಕೆಎಸ್‌ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೇ ಕ್ರೀಡಾಂಗಣವಿಲ್ಲ. ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ.

ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು. ಈ ಬಗ್ಗೆ ನಾನು ಸಚಿವರಾದ ಜಮೀರ್ ಅಹ್ಮದ್, ಅಧ್ಯಕ್ಷರಾದ ಶಿವಲಿಂಗೇಗೌಡರನ್ನು ಭೇಟಿ ಮಾಡಿ ನಾನು ಹಾಗೂ ಶಾಸಕರಾದ ಶಿವಣ್ಣ ಅವರು ಚರ್ಚೆ ಮಾಡಿದ್ದೆವು. ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆʼ ಎಂದು ತಿಳಿಸಿದರು.

Assam Elections 2026: ಅಸ್ಸಾಂನಲ್ಲಿ ಹಿಟ್ಲರ್ ಆಡಳಿತಕ್ಕೆ ಕೊನೆ ಹಾಡಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು‌

ತ್ರಿಭಾಷಾ ನೀತಿ ಜಾರಿಗೆ ತಂದಿದ್ದು ಕಾಂಗ್ರೆಸ್, ಈ ನಿರ್ಧಾರ ರಾಜಕೀಯವೇ ಎಂದು ಕೇಳಿದಾಗ, ʼಅವತ್ತಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಇಂದು ಗುಣಮಟ್ಟದ ಅಗತ್ಯವಿದ್ದು, ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು. ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಉಳಿದ ಮತ್ತೊಂದು ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಇದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರʼ ಎಂದರು.

ವರ್ಷಪೂರ್ತಿ ಓದಿದ ಬಳಿಕ ಈಗ ಈ ನಿರ್ಧಾರ ಗೊಂದಲ ಮೂಡಿಸುವುದಿಲ್ಲವೇ ಎಂದು ಕೇಳಿದಾಗ, ʼಬಹುತೇಕರು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಿದೆʼ ಎಂದು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಅಭಾವ, ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು

ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ ವಿರುದ್ಧ ಕೋವಿಡ್ ಸಮಯದಲ್ಲಿ ಹೋರಾಡಿದಂತೆ ಹೋರಾಡಬೇಕು ಎಂಬ ಪ್ರಧಾನಮಂತ್ರಿಗಳ ಸಂದೇಶದ ಬಗ್ಗೆ ಕೇಳಿದಾಗ, ʼಯಾವ ಸಮಸ್ಯೆ ಆಗುತ್ತಿದೆ, ಯಾವ ಸಮಸ್ಯೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಒಟ್ಟಾರೆಯಾಗಿ ಇದೇ ಪರಿಸ್ಥಿತಿ ಮುಂದುವರಿದರೆ, ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಬೆಲೆ ಏರಿಕೆ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದ್ದು, ಇನ್ನಷ್ಟು ತಟ್ಟಲಿದೆ. ಕೆಲವು ಉತ್ಪನ್ನಗಳ ಅಭಾವದಿಂದ ದರ ಏರಿಕೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆಯನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಏರಿಕೆ ಮಾಡಲಾಗಿದೆ. ಹೊಟೇಲ್‌ಗಳು ಮಾತ್ರವಲ್ಲ. ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ವಸ್ತುಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ವಸ್ತುಗಳ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುತ್ತದೆ. ಮುಂಗಾರು ಆರಂಭವಾಗಿ ಮಳೆ ಬೀಳಲು ಆರಂಭಿಸಿದರೆ ರಸಗೊಬ್ಬರದ ಮೇಲೂ ಇದು ಪರಿಣಾಮ ಬೀರಲಿದೆ. ಇದಕ್ಕೆ ಸರ್ಕಾರ ಸಜ್ಜಾಗಬೇಕು. 3 ತಿಂಗಳಿಗೆ ಆಗುವಷ್ಟು ದಾಸ್ತಾನು ಇರಬಹುದು. ಆದರೆ ಇಡೀ ಋತುವಿಗೆ ಸಾಲುವಷ್ಟು ದಾಸ್ತಾನು ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ಅಗತ್ಯ ತಯಾರಿ ಮಾಡಬೇಕಾಗಿದೆʼ ಎಂದರು.

ಹಾಲು ಒಕ್ಕೂಟದಲ್ಲಿ ಗ್ಯಾಸ್ ಬದಲು ಸೌದೆ ಒಲೆ ಅಥವಾ ಸೋಲಾರ್ ಬಳಕೆ ಬಗ್ಗೆ ಕೇಳಿದಾಗ, ʼಸೋಲಾರ್ ಬಳಸಲು ಸಾಧ್ಯವಿಲ್ಲ. ನಾವು ಬಾಯ್ಲರ್‌ಗಳ ಮೂಲಕ ಹಬೆ ಸೃಷ್ಟಿಸುತ್ತೇವೆ. ನಮ್ಮಲ್ಲಿ ಯಾರೂ ಎಲೆಕ್ಟ್ರಿಕ್ ಬಾಯ್ಲರ್ ಬಳಸುತ್ತಿಲ್ಲ. ಫರ್ನೆಸ್ ಆಯಿಲ್, ಸೌದೆ ಒಲೆ ಅಥವಾ ಗ್ಯಾಸ್ ಬಳಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಡೈರಿಯ ಒಂದು ಭಾಗದಲ್ಲಿ ಸೌದೆ ಒಲೆ ಬಳಸುವ ಅವಕಾಶವಿದ್ದು, ಬಾಯ್ಲರ್‌ಗಳನ್ನು ಅದಕ್ಕೆ ಪರಿವರ್ತಿಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ. ಇದನ್ನು ಟೆಂಡರ್ ಕರೆದು ಮಾಡಬೇಕು. ಈ ಮುನ್ನ ಫರ್ನೆಸ್ ಆಯಿಲ್, ಗ್ಯಾಸ್ ಬೆಲೆ ಕಡಿಮೆ ಇತ್ತು, ಈಗ ಬೆಲೆ ಹೆಚ್ಚಾಗಿರುವುದರಿಂದ ಸ್ಥಳೀಯವಾಗಿ ಸೌದೆ ಒಲೆಯನ್ನು ಒಂದು ಪ್ಲಾಂಟ್‌ನಲ್ಲಿ ಅಳವಡಿಸಿಕೊಂಡಿದ್ದೇವೆ. ಉಳಿದ ಎರಡು ಮೂರು ಪ್ಲಾಂಟ್‌ಗಳಲ್ಲಿ ಮಾಡಬೇಕು. ಬೆಂಗಳೂರಿನಲ್ಲಿ ಸೌದೆ ಒಲೆ ಬಳಸಲು ಆಗುವುದಿಲ್ಲ. ಮಾಲಿನ್ಯ ಸಮಸ್ಯೆ ಬರುತ್ತದೆ ಎಂದರು.

ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದಾಗ, ʼನನಗೆ ಈ ಬಾಗ್ಗೆ ಮಾಹಿತಿ ಇಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದು ಯಾವಾಗ ಹೇಳಿದ್ದೇನೆ? ನಾನು ಕೆಎಂಎಫ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿಲ್ಲವಲ್ಲ. ನನ್ನ ಪರವಾಗಿ ಬೇಡಿಕೆ ಇಡುತ್ತಿರುವವರು ನನಗೆ ಕಾಣಿಸುತ್ತಿಲ್ಲʼ ಎಂದರು.

ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದಾಗ, ʼನನಗೂ ಹೇಳಿದ್ದಾರೆ. ಸಮಯಾವಕಾಶ ಸಿಕ್ಕರೆ ಹೋಗಿ ಪ್ರಚಾರದಲ್ಲಿ ಭಾಗಿಯಾಗುವೆ. ನಮ್ಮ ನಾಯಕರುಗಳು ಪ್ರಚಾರ ಮಾಡುತ್ತಿದ್ದಾರೆʼ ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿ.ಕೆ. ಶಿವಕುಮಾರ್‌ರ ಕನಸು: ಡಿ.ಕೆ. ಸುರೇಶ್

ಜಮೀರ್ ಅವರು ಪ್ರಚಾರಕ್ಕೆ ಹೋಗದಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ ಎಂದು ಕೇಳಿದಾಗ, ʼಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಭರವಸೆ ಇದೆ. ಯಾರ ಉಪಸ್ಥಿತಿ ಪರಿಣಾಮ ಬೀರುತ್ತದೆ, ಯಾರ ಉಪಸ್ಥಿತಿ ಪರಿಣಾಮ ಬೀರುವುದಿಲ್ಲ ಎಂಬುದಕ್ಕಿಂತ ಉತ್ತಮ ಯುವ ನಾಯಕತ್ವವನ್ನು ಆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ನೀಡಿದೆ. ಹಿರಿಯ ನಾಯಕರು ಕಾಲವಾದ ಕಾರಣದಿಂದ ಅವರ ಕುಟುಂಬಕ್ಕೆ ಈ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಅವಕಾಶ ನೀಡಲಾಗುವುದುʼ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು. ತಿಳಿಸಿದರು.