ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cabinet Meeting: ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಸೇರಿ 8 ಮಹತ್ವದ ಮಸೂದೆಗಳಿಗೆ ಸಚಿವ ಸಂಪುಟ ಒಪ್ಪಿಗೆ

ದ್ವೇಷ ಭಾಷಣಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆಯುಂಟಾಗುತ್ತಿದೆ. ಇಂತಹವುಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದೊಂದಿಗೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಮುಂದಿನ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಸೇರಿ 8 ಮಸೂದೆಗೆ ಸಂಪುಟ ಒಪ್ಪಿಗೆ

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ (ಸಂಗ್ರಹ ಚಿತ್ರ) -

Prabhakara R
Prabhakara R Dec 4, 2025 9:54 PM

ಬೆಂಗಳೂರು, ಡಿ.4: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025, ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ - 2025 ಸೇರಿ ಮಹತ್ವದ ಎಂಟು ಮಸೂದೆಗಳನ್ನು ವಿಧಾನಮಂಡಲ ಅಧಿವೇಶನದ ಉಭಯ ಸದನಗಳಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ನಿರ್ಧರಿಸಲಾಗಿದೆ.

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ಆ ಮೂಲಕ‌ ಅಮಾಯಕ‌ ಜನರ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದೊಂದಿಗೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಮುಂದಿನ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದ ನಂತರದಿಂದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಕೃತ್ಯ ಎಸಗುವ ವ್ಯಕ್ತಿ ಅಥವಾ ಸಂಘಟನೆಗಳಿಗೆ ಶಿಕ್ಷೆ ವಿಧಿಸಲು ಕಾನೂನಾತ್ಮಕ ಅವಕಾಶ ಲಭ್ಯವಾಗಲಿದೆ. ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ ಎಂದು ತಿಳಿಸಿದ್ದಾರೆ.

ಯಾವ ಮಸೂದೆಗಳಿಗೆ ಅನುಮೋದನೆ?

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮ೦ಡಳಿ (ತಿದ್ದುಪಡಿ) ವಿಧೇಯಕ - 2025, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ - 2025, ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ - 2025, ಶ್ರೀ ಚಾಮು೦ಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ - 2025, ಕರ್ನಾಟಕ ಒಳನಾಡು ನೌಕೆ ನಿಯಮಗಳು - 2025, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬ೦ಧಕ ಮತ್ತು ಸ೦ರಕ್ಷಣಾ (ತಿದ್ದುಪಡಿ) ವಿಧೇಯಕ - 2025, ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ - 2025 ಸೇರಿ ಎಂಟು ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ.

ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ: ಡಿ.ಕೆ. ಶಿವಕುಮಾರ್‌ ಲೇವಡಿ

ದೇವನಹಳ್ಳಿಯಲ್ಲಿ ಭೂಸ್ವಾಧೀನ ಕೈಬಿಡಲು ತೀರ್ಮಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1777 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು / ಹೊರತುಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ಕಲಂ 4ರಡಿಯಲ್ಲಿ ಅಧಿಸೂಚನೆ ಹೊರಡಿಸಿರುವುದನ್ನು ಕೈಬಿಡಲು ಸಚಿವ ಸಂಪುಟ ನಿರ್ಧರಿಸಿದೆ.

ಅವಳಿ ಸುರಂಗ ಮಾರ್ಗ, ಎಲಿವೇಟೆಡ್ ಕಾರಿಡಾರ್‌ಗೆ ಅನುಮೋದನೆ

ಹೆಬ್ಬಾಳ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೂ ಸ್ಥಳೀಯ ವಾಹನ ದಟ್ಟಣೆಯನ್ನು ನಿರ್ವಹಿಸಲು ನಿರ್ಮಾಣ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಸುರಂಗ ಮಾರ್ಗವನ್ನು ಕಟ್ & ಕವರ್ ಮಾದರಿಯಲ್ಲಿ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ವಿಥ್ ಅಪ್ ಅಂಡ್ ಡೌನ್ ರಾಂಪ್ ಅನ್ನು ರೂ.2215.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೆಕ್ಕೆ ಜೋಳ ಖರೀದಿಗೆ ಕ್ರಮ

ಮೆಕ್ಕೆಜೋಳದ ಬಗ್ಗೆ ರೈತರಿಗೆ ತೊಂದರೆಯಾಗುತ್ತಿದ್ದು, ಮೆಕ್ಕೆ ಜೋಳವನ್ನು ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. 17,500 ಲಕ್ಷ ಎಕರೆ ಭೂಮಿಯಲ್ಲಿ 55 ಲಕ್ಷ ಟನ್ ಮೆಕ್ಕೆ ಜೋಳ ಬೆಳೆದಿದೆ. ಎಥನಾಲ್ ಕಾರ್ಖಾನೆಗಳು 7.50 ಲಕ್ಷ ಟನ್ ನ್ನು ಖರೀದಿಸಬೇಕಾಗಿದೆ. ಎಂ.ಎಸ್.ಪಿ ದರ 2400 ರೂ.ಗಳಿಗೆ ಖರೀದಿಸಬೇಕು. 2639 ರೂ.ಗಳನ್ನು ನೀಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆಯಲ್ಲಿ ಎಥನಾಲ್ ಫ್ಯಾಕ್ಟರಿಯವರು ಸರ್ಕಾರದ ಜೊತೆ ಚರ್ಚಿಸಿ 239 ರೂ.ಗಳನ್ನು ರಾಜ್ಯ ಸರ್ಕಾರ ನೀಡಿದರೆ, ರೈತರಿಗೆ 2400 ನೀಡಬೇಕೆಂದು ಸೂಚಿಸಲಾಗಿತ್ತು. ಕೆಲವರು ಇಂಡೆಂಟ್ ಕೊಟ್ಟಿದ್ದಾರೆ, ಕೆಲವರು ಕೊಟ್ಟಿಲ್ಲ. ಇಂಡೆಂಟ್ ಕೊಟ್ಟಿಲ್ಲದವರಿಗೆ ಸೂಕ್ತ ಸೂಚನೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಇದರ ಜೊತೆಗೆ ಕೆಎಂಎಫ್ ಅವರು 50,000 ಮೆ.ಟನ್ ಖರೀದಿಸಬೇಕು ಆದಷ್ಟು ಬೇಗ ಖರೀದಿಸಲು ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧ್ಯವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸಚಿವ ಸಂಪುಟ ಸಭೆಯದ ಇತರ ಪ್ರಮುಖ ನಿರ್ಣಯಗಳು

  • ಅಧ್ಯಕ್ಷರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘ (ರಿ), ಹಾಸನ ಜಿಲ್ಲೆ, ಹಾಸನ ಇವರಿಗೆ ಎಸ್.ಎಂ.ಕೆ ನಗರ ವಸತಿ ಬಡಾವಣೆಯ ಸಿ.ಎ ನಿವೇಶನ ಸಂ: 4/7 ಮತ್ತು 4/9 ರಲ್ಲಿನ ನಾಗರೀಕ ಸೌಲಭ್ಯ ನಿವೇಶನದ 3964 ಚ.ಮೀವುಳ್ಳ (42652 ಚ.ಅಡಿ) ನಾಗರಿಕ ನಿವೇಶನವನ್ನು ಗ್ರಾಮೀಣ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ರೂ.3,76,61,716/- ಗಳನ್ನು ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ. ಸದರಿ ಸಂಸ್ಥೆಯವರು ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ರೂ.37,66,236/- ಗಳನ್ನು ಪಾವತಿಸಿರುತ್ತಾರೆ. ಬಾಕಿ ಮೊತ್ತ ರೂ.3,38,95,480/- ಗಳನ್ನು ಪಾವತಿಸಬೇಕಾಗಿರುತ್ತದೆ. ಸದರಿ ಬಾಕಿ ಮೊತ್ತಕ್ಕೆ ವಿನಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
  • ವಿವಿಧ ನಗರ ಯೋಜನಾ ಪ್ರಾಧಿಕಾರಗಳು / ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಛೇರಿ ನಿರ್ಮಾಣ ಮಾಡುವ ಸಲುವಾಗಿ ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಾರುಕಟ್ಟೆ ಮೌಲ್ಯದ ಶೇ.5% ರಷ್ಟಕ್ಕೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
  • ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ಬಗ್ಗೆ ಸೂಕ್ತ ತಯಾರಿ, ಸಂಬಂಧಿಸಿದವರಿಗೆ ಉತ್ತರ ಒದಗಿಸುವುದನ್ನು ಗಂಭೀರವಾಗಿ ಪರಿಗಣಿಸುವುದು ಚರ್ಚೆಗಳ ಕುರಿತು ಮಾಡಿಕೊಳ್ಳಬೇಕಾಗಿರುವ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿದ್ದಾರೆ.
  • ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ – “ಇನ್ವೆಸ್ಟ್ ಕರ್ನಾಟಕ 2025”ದ ಪರಿಷ್ಕೃತ ವೆಚ್ಚ ರೂ.100.70 ಕೋಟಿಗಳಿಗೆ ಘಟನೋತ್ತರ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
  • ಸಹಕಾರ ಇಲಾಖೆಯಡಿ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5491 ಪ್ಯಾಕ್ಸ್‌ಗಳ ಗಣಕೀಕರಣವನ್ನು ಪೂರ್ಣಗೊಳಿಸಲು ಮೆ. Satra Service and Solutions Pvt Ltd (L1) ಗೆ ರೂ.7138.30 ಲಕ್ಷಗಳಿಗೆ ನೀಡಿದ ಆಡಳಿತಾತ್ಮಕ ಅನುಮೋದನೆಯನ್ನು ಪರಿಷ್ಕರಿಸಿ, ಈ ಸಂಸ್ಥೆಗೆ 4453 ಪ್ಯಾಕ್ಸ್‌ಗಳನ್ನು ಮಾತ್ರ ರೂ.5788.90 ಲಕ್ಷಗಳ ವೆಚ್ಚದಲ್ಲಿ ಗಣಕೀಕರಣ ಪೂರ್ಣಗೊಳಿಸಲು ಹಾಗೂ ಉಳಿದ 1038 ಪ್ಯಾಕ್ಸ್‌ಗಳನ್ನು ಮೆ. Satra Service and Solutions Pvt Ltd (L1) ಯಿಂದ ಹಿಂಪಡೆದು Choice Consultancy Services Pvt Ltd ದರದಲ್ಲಿಯೇ ಅಂದರೆ ರೂ.1349.40 ಲಕ್ಷ ವೆಚ್ಚದಲ್ಲಿ ಹಂಚಿಕೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು” ಸಚಿವ ಸಂಪುಟ ನಿರ್ಣಯಿಸಿದೆ.
  • ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿ “ಕರ್ನಾಟಕ ಒಳನಾಡು ನೌಕೆ ನಿಯಮಗಳು, 2025”ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ, ಗದಗ, ದಾವಣಗೆರೆ, ಮಂಗಳೂರು, ಭೀಮನಕುಪ್ಪೆ (ಬೆಂಗಳೂರಿನ ಕೆಂಗೇರಿ ಹತ್ತಿರ) ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳನ್ನು ರೂ.452.89 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನ PM-ABHIM ಯೋಜನೆಯಡಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ Critical Care Block ನಿರ್ಮಾಣ ಕಾಮಗಾರಿಗಳನ್ನು ರೂ.28.69 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವನ್ನು ರೂ.304.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
  • ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಡಿ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
  • ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಸಜ್ಜೇಪಾಳ್ಯ ಗ್ರಾಮದ ಸ.ನಂ.4 ರಲ್ಲಿ ಲಭ್ಯವಿರುವ 03 ಎಕರೆ ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ “ನೆಫ್ರೋ-ಯುರಾಲಜಿ ಸಂಸ್ಥೆ”ಗೆ (Institute of Nephro-Urology) ಆಸ್ಪತ್ರೆ ನಿರ್ಮಾಣಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲ್ಲೂಕು, ಯಡ್ಡೋಣಿ ಇಲ್ಲಿನ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಶಾಲಾ ಸಂಕೀರ್ಣವನ್ನು ರೂ.30.00 ಕೋಟಿಗಳ ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • PM-ABHIM ಯೋಜನೆಯಡಿ ರಾಜ್ಯದಾದ್ಯಂತ 334 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ರೂ.217.10 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
  • 22 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (UHPC) ನಿರ್ಮಿಸುವ ಕಾಮಗಾರಿಗಳನ್ನು ರೂ.22.00 ಕೋಟಿಗಳ ಅಂದಾಜು ಮೊತ್ತದಲ್ಲಿ 15ನೇ ಹಣಕಾಸು ಆಯೋಗದಡಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಣಯಿಸಲಾಗಿದೆ.
  • ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣವಾರ ಹಾಗೂ ಗಂಡಸಿ ಬ್ಲಾಕ್‌ನ 530 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಮುಂದಿನ 5 ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ (O&Mಯನ್ನು ರೂ.73.22 ಕೋಟಿಗಳಲ್ಲಿ ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಭಕ್ತರಹಳ್ಳಿ ಮತ್ತು ಕುಣಿಗಲ್ ತಾಲ್ಲೂಕಿನ ಇತರ 21 ಟ್ಯಾಂಕ್‌ಗಳನ್ನು ತುಂಬಲು ಕೊತ್ತಗೆರೆ ಗ್ರಾಮದ ಸಮೀಪವಿರುವ ಕೊತ್ತಗೆರೆ ಟ್ಯಾಂಕ್ ನಿಂದ ನೀರು ಎತ್ತುವ ಯೋಜನೆಯನ್ನು ರೂ.34.00 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಗೂಡೇಹೊಸಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಮತ್ತು ನಾಗಮಂಗಲ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕುಗಳ ಕೆರೆ ತುಂಬಿಸುವ (ಹಂತ-2) ರೂ.67.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 9.215 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂಪಿಸಲಾದ ಚಡಚಣ ಏತ ನೀರಾವರಿ ಯೋಜನೆಯ ರೂ. 485.00 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
  • 800 ಸರ್ಕಾರಿ (Magnet) ಗಳನ್ನು ADB, KKRDB ನಿಧಿ ಹಾಗೂ CEPMIZ ತಾಲ್ಲೂಕುಗಳಲ್ಲಿನ KMERC ನಿಧಿಗಳ ಸಹಾಯದಿಂದ ಕೆ.ಪಿ.ಎಸ್ ಮಾನದಂಡಗಳ ಕೈಪಿಡಿಯಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನಾಗಿ (KPS) ಉನ್ನತೀಕರಿಸಲು DPR ತಯಾರಿಸಲು ಸಂಸ್ಥೆಯನ್ನು ಆಯ್ಕೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅಧಿಕಾರ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.