ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Bill: ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಯಾವ ರೀತಿ ಇತ್ತು? ಇಲ್ಲಿದೆ ಸಂಪೂರ್ಣ ವರದಿ

Waqf Amendment Bill: ಭಾರೀ ವಿವಾದಕ್ಕೀಡಾಗಿರುವ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ, ಏ. 2ರಂದು ಲೋಕಸಭೆಯಲ್ಲಿ ಮಂಡಿಸಿತು. ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು. ಆದರೆ, ವಿಪಕ್ಷಗಳಿಂದ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಮಧ್ಯರಾತ್ರಿಯವರೆಗೆ ಈ ಕುರಿತಂತೆ ಪರ ವಿರೋಧ ಚರ್ಚೆಗಳು ನಡೆದವು. ಈ ಮಸೂದೆಯು ಕಾಯ್ದೆಯಾಗಿ ಬಂದಾಗ ಇದಕ್ಕೆ ಉಮೀದ್ ಎಂದು ಹೆಸರಿಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ತೀವ್ರ ವಿರೋಧ ನಡುವೆಯೂ ಜಾರಿಯಾಯ್ತು ವಕ್ಫ್ ತಿದ್ದುಪಡಿ ಮಸೂದೆ

ವಕ್ಫ್ ತಿದ್ದುಪಡಿ ಮಸೂದೆ 2025

Profile Sushmitha Jain Apr 4, 2025 11:33 AM

ನವದೆಹಲಿ: ಸತತ 12 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆ(Rajya Sabha)ಯಲ್ಲಿ ಶುಕ್ರವಾರ ಮುಂಜಾನೆ ಮತದಾನದ ಮೂಲಕ ವಕ್ಫ್ ತಿದ್ದುಪಡಿ ಮಸೂದೆ 2025(Waqf Amendment Bill 2025) ಅನ್ನು ಅಂಗೀಕರಿಸಲಾಗಿದೆ. ಮಸೂದೆಯ ಪರ 128 ಸದಸ್ಯರು ಮತ ಚಲಾಯಿಸಿದರೆ, 95 ಸದಸ್ಯರು ಈ ಮಸೂದೆಯನ್ನು ವಿರೋಧಿಸಿದರು. ಗುರುವಾರ ಈ ಮಸೂದೆಯು ಲೋಕಸಭೆಯಲ್ಲಿಯೂ ಅಂಗೀಕಾರವಾಗಿದ್ದು, ಎನ್‌ಡಿಎ ಮಿತ್ರಕೂಟ ಸೇರಿ 288 ಸಂಸದರು ಈ ಮಸೂದೆಯ ಪರವಾಗಿ ಮತ ಚಲಾಯಿಸಿದ್ದರು. ವಿಪಕ್ಷಗಳ 232 ಸದಸ್ಯರು ಈ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರು. ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನ್ಯಾಯಮಂಡಳಿಗಳ ಸ್ಥಾಪನೆ ಸೇರಿದಂತೆ ವಕ್ಫ್‌ ಮಂಡಳಿಯ ಕಾರ್ಯವಿಧಾನದಲ್ಲಿ ಪಾರದರ್ಶಕತೆಯನ್ನು ತರಲು ಸರ್ಕಾರ ಉದ್ದೇಶಿಸಿದೆ ಎಂದು ಹೇಳಿದರು.

“ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಇದು ಮುಸ್ಲಿಂ ಸಮುದಾಯದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ. ಜಂಟಿ ಸಂಸದೀಯ ಸಮಿತಿಯು ನೀಡಿರುವ ಸಲಹೆಗಳನ್ನು ಆಧರಿಸಿ ಮಸೂದೆಯನ್ನು ಪರಿಷ್ಕರಿಸಲಾಗಿದೆ. ವಕ್ಫ್ ಆಸ್ತಿಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಒಂದು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ನಂತರ, ಅದರ ಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ” ಎಂದು ರಿಜಿಜು ಹೇಳಿದರು.

ಮಸೂದೆ ಮಂಡನೆ ಬಳಿಕ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಸರ್ಕಾರದ ಕ್ರಮವನ್ನು ಟೀಕಿಸಿದರು. ಅವರಿಗೆ ತಿರುಗೇಟು ನೀಡಿದ ಬಿಜೆಪಿಯ ರಾಧಾ ಮೋಹನ್ ದಾಸ್ ಅಗರ್ವಾಲ್ ಕರ್ನಾಟಕದಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಾಗ ಕಾಂಗ್ರೆಸ್‌ ಸಂಸದ ನಾಸಿರ್‌ ಹುಸೇನ್‌ ಬೆಂಬಲಿಗರು "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದನ್ನು ಸದನದಲ್ಲಿ ಪ್ರಸ್ತಾಪಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, “ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆಯ ಮೂಲಕ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ಮತ್ತು ಶಾಂತಿಯನ್ನು ಕದಡುವ ಪ್ರಯತ್ನವಾಗಿದೆ. ಈ ಮಸೂದೆಯು ಅಸಂವಿಧಾನಿಕವಾಗಿದ್ದು, ಭಾರತೀಯ ಮುಸ್ಲಿಮರಿಗೆ ಒಳಿತು ಮಾಡುವುದಿಲ್ಲ. ಹಲವು ತಪ್ಪುಗಳನ್ನು ಹೊಂದಿರುವ ಈ ಮಸೂದೆಯನ್ನು ಹಿಂಪಡೆಯಬೇಕು. ಇದನ್ನು ಪ್ರತಿಷ್ಠೆಯ ವಿಚಾರವಾಗಿ ನೋಡಬಾರದು” ಎಂದರು.

ಈ ಸುದ್ದಿಯನ್ನು ಓದಿ: Waqf Bill: ಐತಿಹಾಸಿಕ ಕ್ಷಣ... ವಕ್ಫ್‌ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಹರ್ಷ

ಕೇಂದ್ರ ಸರ್ಕಾರವು ಮುಸ್ಲಿಮರ ಭೂಮಿಯನ್ನು ಕಸಿದುಕೊಂಡು ತನ್ನ ಕಾರ್ಪೊರೇಟ್ ಸ್ನೇಹಿತರಿಗೆ ಹಸ್ತಾಂತರಿಸಲು ಬಯಸುತ್ತಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದರು. ವಿಪಕ್ಷ ನಾಯಕರ ಆರೋಪಗಳಿಗೆ ಉತ್ತರಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಸಂಸದ ಜೆ.ಪಿ.ನಡ್ಡಾ ಅವರು, “ಕಾಂಗ್ರೆಸ್‌ ತನ್ನ ಅಧಿಕಾರಾವಧಿಯಲ್ಲಿ ಮುಸ್ಲಿಂ ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಿತ್ತು” ಎಂದರು.

ಈಗ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಅಂಗೀಕಾರಗೊಂಡಿರುವ ವಕ್ಫ್‌ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳು ಈ ತಿದ್ದುಪಡಿ ಮಸೂದೆಗೆ ಸಹಿ ಹಾಕಿದ ಬಳಿಕ, ಮಸೂದೆಯು ಕಾನೂನಾಗಿ ಬದಲಾಗಲಿದೆ.