Waqf Bill: ಐತಿಹಾಸಿಕ ಕ್ಷಣ... ವಕ್ಫ್ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಹರ್ಷ
PM Narendra Modi:ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ, ಪ್ರಧಾನಿ ಮೋದಿ, ಸಂಸತ್ತಿನ ಎರಡೂ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ ಎಂದರು.


ನವದೆಹಲಿ: ರಾಜ್ಯಸಭೆಯು ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ(Waqf Bill), 2025 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯನ್ನು ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ(PM Narendra Modi) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ನಿರ್ಣಾಯಕ ಕ್ಷಣ ಎಂದು ಕರೆದಿದ್ದಾರೆ, ಈ ಮಸೂದೆಗಳು ಧ್ವನಿ ಹತ್ತಿಕ್ಕಲ್ಪಟ್ಟ ಮತ್ತು ಅವಕಾಶ ವಂಚಿತ ಜನರಿಗೆ ಸಹಾಯ ಮಾಡುತ್ತವೆ ಎಂದು ಹೇಳುವ ಮೂಲಕ ಮಸೂದೆಯನ್ನು ಸಮರ್ಥಿಸಿಕೊಂಡರು. ಅಲ್ಲದೇ ಇದೇ ವೇಳೆ ಅವರು ಸಂಸತ್ ಸದಸ್ಯರು ಮತ್ತು ಮಸೂದೆಯ ಕುರಿತು ಶಿಫಾರಸುಗಳನ್ನು ಮಾಡಲು ನೇಮಕಗೊಂಡ ಜಂಟಿ ಸಂಸದೀಯ ಸಮಿತಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡ ಜನರಿಗೆ ಕೃತಜ್ಞತೆ ಸಲ್ಲಿಸಿದರು.
ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ, ಮೋದಿ, "ಸಂಸತ್ತಿನ ಎರಡೂ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ. ಸಂಸದೀಯ ಮತ್ತು ಸಮಿತಿ ಚರ್ಚೆಗಳಲ್ಲಿ ಭಾಗವಹಿಸಿದ, ತಮ್ಮ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದ ಮತ್ತು ಈ ಶಾಸನಗಳ ಬಲವರ್ಧನೆಗೆ ಕೊಡುಗೆ ನೀಡಿದ ಎಲ್ಲಾ ಸಂಸತ್ ಸದಸ್ಯರಿಗೆ ಕೃತಜ್ಞತೆಗಳು. ಸಂಸದೀಯ ಸಮಿತಿಗೆ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿದ ಅಸಂಖ್ಯಾತ ಜನರಿಗೆ ವಿಶೇಷ ಧನ್ಯವಾದಗಳು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Waqf Bill: ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ವಕ್ಫ್ ವಿಧೇಯಕ ಅಂಗೀಕಾರ
ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲು ಕೇಂದ್ರವು ನೀಡಿದ ಪ್ರಮುಖ ಕಾರಣವೆಂದರೆ ವಕ್ಫ್ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ. ಮೋದಿ ತಮ್ಮ ಪೋಸ್ಟ್‌ನಲ್ಲಿ ಅದನ್ನೇ ಉಲ್ಲೇಖಿಸಿದ್ದು, ಪ್ರಾತಿನಿಧ್ಯದ ಕೊರತೆಯಿಂದಾಗಿ ಈ ವ್ಯವಸ್ಥೆಯು ಮುಸ್ಲಿಂ ಮಹಿಳೆಯರು ಮತ್ತು ಬಡ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿದರು. ದಶಕಗಳಿಂದ, ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಕೊರತೆ ಹೊಂದಿದೆ. ಇದು ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರು, ಪಸ್ಮಾಂಡಾ ಮುಸ್ಲಿಮರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿತ್ತು. ಸಂಸತ್ತು ಅಂಗೀಕರಿಸಿದ ಕಾಯಿದೆ ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸುತ್ತವೆ” ಎಂದು ಅವರು ಬರೆದಿದ್ದಾರೆ.