ಮುಂಬೈ: ಮಹಾರಾಷ್ಟ್ರದ(Maharashtra) ಜನರ ಸೇವೆಗೆ ಸದಾ ಮುಂಚೂಣಿಯಲ್ಲಿ ನಿಂತಿದ್ದ ನಾಯಕ ಅಜಿತ್ ಪವಾರ್(Ajit Pawar) ಅವರ ಅಕಾಲಿಕ ನಿಧನ ದೇಶವನ್ನೇ ದುಃಖದಲ್ಲಿ ಮುಳುಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ( PM Narendra Modi) ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ (Palane Crash) ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಎಕ್ಸ್ (ಟ್ವಿಟರ್)ನಲ್ಲಿ ಭಾವುಕ ಸಂತಾಪ ಸಂದೇಶವನ್ನು ಸೂಚಿಸಿದ್ದಾರೆ.
ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನಃಪೂರ್ವಕವಾಗಿ ಕಂಬನಿ ಮಿಡಿದು, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
“ಅಜಿತ್ ಪವಾರ್ ಅವರು ಜನಸಾಮಾನ್ಯರೊಂದಿಗೆ ಆಳವಾದ ಸಂಪರ್ಕ ಹೊಂದಿದ್ದವರು. ರಾಜ್ಯದ ಅಭಿವೃದ್ಧಿ, ಬಡವರ ಕಲ್ಯಾಣ ಮತ್ತು ಆಡಳಿತ ಸುಧಾರಣೆಗೆ ಅವರು ತಮ್ಮ ಜೀವನವನ್ನೇ ಅರ್ಪಿಸಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ಮಹಾರಾಷ್ಟ್ರ ಮತ್ತು ದೇಶದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ” ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಪವಾರ್ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ತಮ್ಮ ಸಂತಾಪಗಳನ್ನು ಸಲ್ಲಿಸಿರುವ ಅವರು, “ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಬುಧವಾರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಖಾಸಗಿ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದ್ದು, ಈ ದುರ್ಘಟನೆಯಲ್ಲಿ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣವನ್ನು ತಿಳಿದುಕೊಳ್ಳಲು ನಾಗರಿಕ ವಿಮಾನಯಾನ ಇಲಾಖೆ ತನಿಖೆಗೆ ಆದೇಶಿಸಿದೆ.
ಪ್ರಧಾನಿ ಮೋದಿ ಟ್ವೀಟ್
Ajit Pawar Death: ರನ್‌ವೇಗೆ 100 ಮೀಟರ್ ಮೊದಲೇ ನೆಲಕ್ಕಪ್ಪಳಿಸಿದ ಅಜಿತ್ ಪವಾರ್ ವಿಮಾನ
ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದು, ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ಆವರಿಸಿದೆ.
ಫ್ಲೈಟ್‌ರಾಡಾರ್ ಮಾಹಿತಿಯ ಪ್ರಕಾರ, ವಿಮಾನವು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟು ಸುಮಾರು 8.45ರ ನಂತರ ರಾಡಾರ್ ಸಂಪರ್ಕದಿಂದ ಕಣ್ಮರೆಯಾಯಿತು. ಫೆಬ್ರವರಿ 5ರಂದು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರದ ಭಾಗವಾಗಿ ಅಜಿತ್ ಪವಾರ್ ಅವರು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಬಾರಾಮತಿಗೆ ತೆರಳುತ್ತಿದ್ದರು. ವಿಮಾನ ಇಳಿಯುವ ವೇಳೆ ತಾಂತ್ರಿಕ ದೋಷ ಅಥವಾ ಹವಾಮಾನ ವೈಪರಿತ್ಯದಿಂದ ನಿಯಂತ್ರಣ ತಪ್ಪಿರಬಹುದೆಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.
ಅಲ್ಲದೇ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಅತ್ಯಂತ ಅನುಭವಿ ಮತ್ತು ಪ್ರಭಾವಶಾಲಿ ರಾಜಕಾರಣಿಗಳಲ್ಲೊಬ್ಬರಾಗಿದ್ದರು. ಅವರು ಹಲವು ಸರ್ಕಾರಗಳಲ್ಲಿ ಒಟ್ಟು ಆರು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ರಾಜಕೀಯ, ಅಭಿವೃದ್ಧಿ ಯೋಜನೆಗಳು ಹಾಗೂ ಜನಸೇವೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪವಾರ್ ಅವರು ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್, ಪುತ್ರರಾದ ಪಾರ್ಥ್ ಪವಾರ್ ಮತ್ತು ಜಯ್ ಪವಾರ್ ಅವರನ್ನು ಅಗಲಿದ್ದಾರೆ. ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕನಾಗಿದ್ದು, ಇತ್ತೀಚೆಗೆ ಪುಣೆ ಹಾಗೂ ಪಿಂಪ್ರಿ–ಚಿಂಚ್‌ವಾಡ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಜೊತೆ ಮೈತ್ರಿಯಾಗಿ ಸ್ಪರ್ಧಿಸಿದ್ದರು.