ಸ್ಯಾಂಡಲ್‌ವುಡ್ ನಟಿಗೆ ಉದ್ಯುಮಿ ಕಿರುಕುಳ ನೀಡಿದ ಪ್ರಕರಣಕ್ಕೆ ಟ್ವಿಸ್ಟ್; ಇಬ್ಬರ ಖಾಸಗಿ ಫೋಟೊ ವೈರಲ್
ಸ್ಯಾಂಡಲ್‌ವುಡ್ ಖ್ಯಾತ ನಟಿಗೆ ಉದ್ಯಮಿ ಅರವಿಂದ್ ರೆಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದೀಗ ಅರವಿಂದ್ ರೆಡ್ಡಿ ಜತೆ ನಟಿ ಬೆಡ್‌ರೂಂನಲ್ಲಿರುವ ಫೋಟೊ ಸೇರಿದಂತೆ ಹಲವು ಖಾಸಗಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರವಿಂದ್ ರೆಡ್ಡಿ ಮತ್ತು ಸಾಂದರ್ಭಿಕ ಚಿತ್ರ -
ಬೆಂಗಳೂರು, ಜ. 11: ಸ್ಯಾಂಡಲ್‌ವುಡ್ ಖ್ಯಾತ ನಟಿಗೆ ಉದ್ಯಮಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿ ದೂರು ಕೊಟ್ಟ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಅರವಿಂದ್ ರೆಡ್ಡಿ ಜತೆ ನಟಿ ಬೆಡ್‌ರೂಂನಲ್ಲಿರುವ ಫೋಟೊ ಸೇರಿದಂತೆ ಹಲವು ಖಾಸಗಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಮೂಲಕ ನಟಿಯ ದೂರಿನ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.
ಕೆಲವು ತಿಂಗಳ ಹಿಂದೆ ನಟಿಯ ದೂರಿನ ಮೇರೆಗೆ ಉದ್ಯಮಿ ಅರವಿಂದ್ ರೆಡ್ಡಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅರವಿಂದ್ ರೆಡ್ಡಿ ನಟಿಯ ವಿರುದ್ಧ ಸ್ಪೋಟಕ ಮಾಹಿತಿಗಳನ್ನು ನೀಡಿ, ವಂಚನೆಯ ಆರೋಪ ಮಾಡಿದ್ದರು. ಇದೀಗ ಇದಕ್ಕೆ ಪೂರಕವಾಗಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡಿರುವ ಖಾಸಗಿ ಫೋಟೊ ಹರಿದಾಡುತ್ತಿದೆ.
ಈ ಹಿಂದೆ ಅರವಿಂದ್ ರೆಡ್ಡಿ ನಟಿಗೆ ದುಬಾರಿ ಕಾರ್ ಅನ್ನು ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಲಕ್ಷಾಂತರ ರುಪಾಯಿ ಮೌಲ್ಯದ ಗಿಫ್ಟ್ ಕೂಡ ನೀಡಿದ್ದಾರೆ ಎನ್ನುವುದಕ್ಕೆ ಈಗ ಸಾಕ್ಷಿ ಲಭ್ಯವಾಗಿದೆ.
ನಟಿಗೆ ಲೈಂಗಿಕ ಕಿರುಕುಳ, ಕನ್ನಡದ ನಟ- ನಿರ್ದೇಶಕ ಹೇಮಂತ್ ಬಂಧನ
ಅರವಿಂದ್ ರೆಡ್ಡಿ ನಟಿಯೊಂದಿಗೆ ಲಿವಿಂಗ್ ರಿಲೀಷನ್‌ಶಿಪ್‌ನಲ್ಲಿದ್ದಾಗ ಆಕೆಗೆ 7 ಲಕ್ಷ ರುಪಾಯಿ ಮೌಲ್ಯದ ಟಿವಿ, 1 ಲಕ್ಷ ರುಪಾಯಿಯ ಹಾಸಿಗೆ, 10 ಲಕ್ಷ ರುಪಾಯಿಯ ಪೀಠೋಪಕರಣ, 15 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಬೆಲೆಬಾಳುವ ಉಡುಗೊರೆ ನೀಡಿದ್ದರು ಎನ್ನಲಾಗಿದೆ.
ಪ್ರಕರಣದ ವಿವರ
ತನಗೆ ಕಿರುಕುಳ ನೀಡಿದ್ದಾನೆ ಎಂದು ಕೆಲವು ತಿಂಗಳ ಹಿಂದೆ ನಟಿ ದೂರು ನೀಡಿದ ಹಿನ್ನಲೆಯಲ್ಲಿ ಅರವಿಂದ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಅರವಿಂದ್‌ಗೆ ಜಾಮೀನೂ ಲಭಿಸಿತ್ತು. ಬಳಿಕ ಮಾತನಾಡಿದ ಅರವಿಂದ್ ನಟಿಯ ವಿರುದ್ಧ ಆರೋಪ ಹೊರಿಸಿದ್ದರು. ಲಕ್ಷಾಂತರ ರುಪಾಯಿ ಮೌಲ್ಯದ ಉಡುಗೊರೆ ಪಡೆದು ಮೋಸ ಮಾಡಿದ್ದಾಗಿ ದೂರಿದ್ದರು.
2021ರಲ್ಲಿ ಅವರವಿಂದ್‌ಗೆ ನಟಿಯ ಪರಿಚಯವಾಗಿತ್ತು. ಬಳಿಕ ಇಬ್ಬರ ಮಧ್ಯೆ ಲೀವ್ ಇನ್ ರಿಲೀಷನ್‌ಶಿಪ್ ಇತ್ತು. ʼʼಫಾರಿನ್ನಲ್ಲಿ ಫೋಟೊಶೂಟ್ ಮಾಡಿಸಬೇಕು ಅಥವಾ ಟ್ರಿಪ್ ಹೋಗಬೇಕು ಎಂದಾಗಲೆಲ್ಲ ನಾನು ಆಕೆಗೆ ಆಸೆಗಳನ್ನೆಲ್ಲ ಪೂರೈಸಿದ್ದೇನೆ. ಆದರೆ ಆಕೆ ನನಗೆ ಗೊತ್ತಿಲ್ಲದೆ ಮತ್ತೊಬ್ಬ ಹುಡುಗ ಜತೆ ಆತ್ಮೀಯ ಸಂಬಂಧ ಹೊಂದಿದ್ದಳು. ಒಮ್ಮೆ ನನಗೆ ಗೊತ್ತಿಲ್ಲದೆ ಆತನ ಜತೆ ವಿದೇಶಕ್ಕೂ ಹೋಗಿ ಬಂದಿದ್ದಳು. ಆ ಟಿಕೆಟ್ ತೋರಿಸಿ ನಾನು ಪ್ರಶ್ನೆ ಮಾಡಿದಾಗ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತುʼʼ ಎಂದು ಅರವಿಂದ್ ಹೇಳಿದ್ದರು.
ʼʼ2024ರಲ್ಲಿ ಆಕೆಯೊಂದಿಗೆ ಮದುವೆಯಾಗುವ ಯೋಜನೆಯೂ ಇತ್ತು. ಅಷ್ಟರಲ್ಲಿ ಆಕೆಯ ವಂಚನೆ ಬಯಲಿಗೆ ಬಂದಿದ್ದರಿಂದ ನನ್ನ ವಿರುದ್ಧ ದೂರು ದಾಖಲಿಸಿದ್ದಾಳೆʼʼ ಎಂದು ಅರವಿಂದ್ ತಿಳಿಸಿದ್ದರು. ಸದ್ಯ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ನಿಜವಾಗಿಯೂ ತಪ್ಪಿತಸ್ಥರು ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.