BSY Abhimanotsava: ಬಿಎಸ್‌ವೈ ಅಭಿಮಾನೋತ್ಸವ; ಮಾಜಿ ಸಿಎಂ ಕುರಿತು ಪ್ರಧಾನಿ ಮೋದಿಯಿಂದ ಬಂತು ವಿಶೇಷ ಸಂದೇಶ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನ ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅತ್ಯಂತ ತಳ ಮಟ್ಟದಿಂದ ಬೆಳೆದು ಅವರು ತಮ್ಮ ಸಾಮಾಜಿಕ ಜೀವನವನ್ನು ಹಂತ ಹಂತವಾಗಿ ಕಠಿಣ ನಿರಂತರ ಪರಿಶ್ರಮದ ಮೂಲಕ ಕಟ್ಟಿದರು ಎಂದು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ. -
ಚಿತ್ರದುರ್ಗ: ನಗರದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ಶನಿವಾರ ಅದ್ಧೂರಿಯಾಗಿ ನೆರವೇರಿದ್ದು, ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷ ಸಂದೇಶ ಕಳುಹಿಸಿ, ಬಿಎಸ್‌ವೈ ಕೊಡುಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ವೇದಿಕೆಯ ಮೇಲೆ ಪ್ರಧಾನಿ ಮೋದಿ ಅವರ ಸಂದೇಶವನ್ನು ಓದಿ ತಿಳಿಸಿದರು.
ಪ್ರಧಾನಿ ಮೋದಿ ಸಂದೇಶದಲ್ಲಿ ಏನಿದೆ?
ಬಿ. ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ವರ್ಷಗಳ ಪಯಣವು ಬದ್ಧತೆ, ಸಂಘರ್ಷ, ತ್ಯಾಗ ಮತ್ತು ಜನರಿಗಾಗಿನ ಸಮರ್ಪಣೆಯ ಕಥೆಯಾಗಿದೆ. ಇದು ಕೇವಲ ಸಂಭ್ರಮಾಚರಣೆಯ ಸಮಯವಲ್ಲ, ನಮ್ಮ ದೇಶದಾದ್ಯಂತ ಇರುವ ಅಗಣಿತ ಕಾರ್ಯಕರ್ತರಿಗೆ ಪ್ರೇರಣೆ ಪಡೆಯುವ ಅವಕಾಶವೂ ಹೌದು. ಈ ವಿಶೇಷ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭೌತಿಕವಾಗಿ ಹಾಜರಾಗಲು ನನಗೆ ಸಾಧ್ಯವಾಗಲಿಲ್ಲ, ಆದರೆ ತನ್ನನ್ನು ತಾನು ಜನಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಿಕೊಂಡಿರುವ ನಾಯಕನನ್ನು ಗೌರವಿಸಲು ನೆರೆದಿರುವ ಅಪಾರ ಜನಸ್ತೋಮದೊಂದಿಗೆ ನನ್ನ ಮನಸ್ಸು ಬೆರೆತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರೊಂದಿಗೆ ಹಲವು ವರ್ಷಗಳ ಕಾಲ ನಿಕಟವಾಗಿ ಕಾರ್ಯನಿರ್ವಹಿಸುವ ಸದವಕಾಶವನ್ನು ನಾನು ಪಡೆದುಕೊಂಡಿದ್ದೇನೆ. ಅವರು ಸದಾ ವಿನಮ್ರತೆ, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದಿಂದ ಕೂಡಿದ್ದರು. ಅವರನ್ನು ನಾನು ಸಂಘರ್ಷ ಮತ್ತು ಯಶಸ್ಸಿನ ಎರಡೂ ಸಂದರ್ಭದಲ್ಲಿ ನೋಡಿದ್ದೇನೆ. ಪ್ರತಿ ಸಂದರ್ಭದಲ್ಲೂ ಒಂದು ವಿಷಯ ಸ್ಥಿರವಾಗಿತ್ತು, ಅದೇನೆಂದರೆ ಕರ್ನಾಟಕದ ಜನತೆಗೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಅವರ ಅಚಲ ಬದ್ಧತೆ. ಅವರ ರಾಜಕೀಯ ಜೀವನ ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅತ್ಯಂತ ತಳ ಮಟ್ಟದಿಂದ ಬೆಳೆದು ಅವರು ತಮ್ಮ ಸಾಮಾಜಿಕ ಜೀವನವನ್ನು ಹಂತ ಹಂತವಾಗಿ ಕಠಿಣ ನಿರಂತರ ಪರಿಶ್ರಮದ ಮೂಲಕ ಕಟ್ಟಿದರು.
ಬಿಜೆಪಿ ಕೇವಲ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ ಎಂಬ ಆರೋಪಗಳಿದ್ದ ಸಂದರ್ಭದಲ್ಲಿ ಬಿ. ಎಸ್. ಯಡಿಯೂರಪ್ಪನವರು ತಮ್ಮ ಅಮೋಘ ನಾಯಕತ್ವದ ಮೂಲಕ ಬಿಜೆಪಿ ಇಡೀ ಭಾರತಕ್ಕೆ ಸೇರಿದ ಪಕ್ಷ ಎಂಬುದನ್ನು ಸಾಬೀತು ಮಾಡಿ ತೋರಿಸಿದರು. ಅವರು ಕರ್ನಾಟಕದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಿ ಹೊರಹೊಮ್ಮಿದರು. ಮತ್ತು ಆಡಳಿತಾತ್ಮಕ ಚತುರತೆಯ ಮೂಲಕ ಸಂಘಟನಾತ್ಮಕ ಶಕ್ತಿಯನ್ನು ತೋರಿಸಿದರು. ಅವರು ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಪ್ರವರ್ತಕ. ಅವರ ನೀರಾವರಿ ಪ್ರಯತ್ನಗಳು, ಗ್ರಾಮೀಣಾಭಿವೃದ್ಧಿ, ರೈತ ಕಲ್ಯಾಣ ಯೋಜನೆಗಳು ದೂರಗಾಮಿ ಫಲಿತಾಂಶಗಳನ್ನು ನೀಡಿದೆ ಮತ್ತು ಅವರನ್ನು ಅತ್ಯುನ್ನತ ರೈತ ನಾಯಕನನ್ನಾಗಿ ಮಾಡಿದೆ.
BSY Abhimanotsava: ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್ ಲೀಡರ್: ಬೊಮ್ಮಾಯಿ
ಶಿಕ್ಷಣ, ಕೌಶಲ್ಯ ಮತ್ತು ವಸತಿ ಯೋಜನೆಗಳ ಮೂಲಕ ಅವರು ದುರ್ಬಲ ವರ್ಗಗಳನ್ನು ಮೇಲೆತ್ತಿದರು. ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅತ್ಯಂತ ಸಂವೇದನಾಶೀಲರಾಗಿ ಕಾರ್ಯ ನಿರ್ವಹಿಸಿದರು. ಅಭಿವೃದ್ಧಿ ಎಲ್ಲರನ್ನೂ ಒಳಗೊಂಡಿರಬೇಕು ಎಂಬುದನ್ನು ಅವರು ಖಚಿತಪಡಿಸಿದರು. ಅವರ ಸರಳತೆ ಮತ್ತು ಜನಸಂಪರ್ಕಕ್ಕಾಗಿ ಕರ್ನಾಟಕದ ಜನತೆ ಸದಾ ಅವರನ್ನು ಶ್ಲಾಘಿಸಿದ್ದಾರೆ. ಅತ್ಯುನ್ನತ ಹುದ್ದೆ ಅಲಂಕರಿಸಿದರು ಕೂಡಾ ಅವರು ಸಾಮಾನ್ಯ ಕಾರ್ಯಕರ್ತರಿಂದ ಮತ್ತು ಜನರಿಂದ ಅಂತರ ಕಾಯ್ದು ಕೊಳ್ಳಲಿಲ್ಲ. 50 ವರ್ಷಗಳ ಸಾರ್ವಜನಿಕ ಸೇವೆಯ ಈ ಅಪೂರ್ವ ಮೈಲುಗಲ್ಲಿನ ಸಂದರ್ಭದಲ್ಲಿ ಶ್ರೀ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಮತ್ತು ಶುಭ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.