ಕೋಲ್ಕತ್ತಾ: ಸಂಸದರು, ಶಾಸಕರ ರಾಜೀನಾಮೆ ನಡುವೆ ಪಕ್ಷದಲ್ಲಿ ಹೆಚ್ಚಾಗಿರುವ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸಲು ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷ ಶ್ರಮಿಸುತ್ತಿದೆ. ಈ ನಡುವೆ ಇತ್ತೀಚೆಗೆಷ್ಟೇ ಯುವ (Trinamool youth wing) ಮತ್ತು ಮಹಿಳಾ ವಿಭಾಗದ ಅಧ್ಯಕ್ಷರನ್ನಾಗಿ (Trinamool Mahila Congress) ನೇಮಕಗೊಂಡಿದ್ದ ಸಾಯೋನಿ ಘೋಷ್, ಮಾಲಾ ರಾಯ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವ ಟಿಎಂಸಿ ಮುಖ್ಯಸ್ಥೆ (Trinamool Chief) ಮಮತಾ ಬ್ಯಾನರ್ಜಿ (Mamata Banerjee) ಅವರು ಅವರ ಸ್ಥಾನಕ್ಕೆ ಅರ್ನಬ್ ಬ್ಯಾನರ್ಜಿಮತ್ತು ಅಲಿಫಾ ಅಹ್ಮದ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಹೆಚ್ಚಾಗಿರುವಾಗಲೇ ಪಕ್ಷದ ಮೇಲಿನ ಹಿಡಿತವನ್ನು ಬಿಗಿಗೊಳಿಸಲು ಮಮತಾ ಬ್ಯಾನರ್ಜಿ ಅವರು ಹಲವಾರು ಬದಲಾವಣೆ ಮುಂದಾಗಿದ್ದಾರೆ. ಇದರ ಪ್ರಯತ್ನದ ಭಾಗವಾಗಿ ಸಾಯೋನಿ ಘೋಷ್, ಮಾಲಾ ರಾಯ್ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ವಜಾಗೊಳಿಸಲಾಗಿದೆ. ವಾರದ ಹಿಂದೆಯಷ್ಟೇ ಶಾಸಕಿ, ಜಾದವ್‌ಪುರ ಸಂಸದೆ ಸಾಯೋನಿ ಘೋಷ್ ಟಿಎಂಸಿಯ ಯುವ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಆದರೆ ಇದೀಗ ಅವರನ್ನು ಆ ಸ್ಥಾನದಿಂದ ವಜಾಗೊಳಿಸಿ ಯುವ ನಾಯಕ ಅರ್ನಬ್ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದೆ.
ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಬಾಗಿಲು ತೆರೆದಿಡಬೇಕು: ಮೋಹನ್ ಭಾಗವತ್
ತೃಣಮೂಲ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದ ಕೋಲ್ಕತ್ತಾ ದಕ್ಷಿಣ ಸಂಸದೆ ಮಾಲಾ ರಾಯ್ ಅವರನ್ನುಕೂಡ ಸ್ಥಾನದಿಂದ ವಜಾಗೊಳಿಸಿ ನಾಡಿಯಾ ಜಿಲ್ಲೆಯ ಕಾಲಿಗಂಜ್‌ನ ಟಿಎಂಸಿ ಶಾಸಕಿ ಅಲಿಫಾ ಅಹ್ಮದ್ ಅವರನ್ನು ತೃಣಮೂಲ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ.
ಇತ್ತೀಚಿನ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿರುವ ತೃಣಮೂಲ ಕಾಂಗ್ರೆಸ್ ನಲ್ಲಿ ಇದೀಗ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಈಗಾಗಲೇ 20 ಬಂಡಾಯ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಇದರೊಂದಿಗೆ 58 ಬಂಡಾಯ ಟಿಎಂಸಿ ಶಾಸಕರು ವಿಧಾನ ಸಭೆಯಲ್ಲಿ ಋತಬ್ರತ ಬ್ಯಾನರ್ಜಿ ಅವರನ್ನು ತಮ್ಮ ನಾಯಕನಾಗಿ ಗುರುತಿಸಿ ತಾವು ಸದನದ ಪ್ರಮುಖ ವಿರೋಧ ಪಕ್ಷವೆಂದು ಘೋಷಿಸಿಕೊಂಡರು. ಇದು ತೃಣಮೂಲ ಕಾಂಗ್ರೆಸ್ ಗೆ ಬಹುದೊಡ್ಡ ಹೊಡೆತವಾಗಿದೆ.
ಇದರಿಂದ ಟಿಎಂಸಿಯ ಎಲ್ಲಾ ಹಿಂದಿನ ಸಮಿತಿಗಳು ಮತ್ತು ಸಂಘಟನೆಗಳನ್ನು ವಿಸರ್ಜಿಸಿ ಹೊಸ ನಾಯಕತ್ವ ರಚನೆ ಪಕ್ಷಕ್ಕೆ ಅನಿವಾರ್ಯವಾಯಿತು. ಈ ನಿಟ್ಟಿನಲ್ಲಿ ಇದೀಗ ಪಕ್ಷ ಕಾರ್ಯನಿರತವಾಗಿದೆ. ಈಗಾಗಲೇ ಪಕ್ಷದ ಡೈಮಂಡ್ ಹಾರ್ಬರ್ ಸಂಸದ ಮತ್ತು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಟಿಎಂಸಿಯ ಬೆಲೆಘಾಟ ಸಂಸದ ಕುನಾಲ್ ಘೋಷ್ ಅವರನ್ನು ಸುದೀಪ್ ಬಂಡೋಪಾಧ್ಯಾಯ ನಿರ್ವಹಿಸುತ್ತಿದ್ದ ಪಕ್ಷದ ಉತ್ತರ ಕೋಲ್ಕತ್ತಾ ಸಾಂಸ್ಥಿಕ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜೊತೆಗೆ ಹಿರಿಯ ಸಂಸದೆ ಸೌಗತ ರಾಯ್ ಅವರನ್ನು ಟಿಎಂಸಿಯ ಲೋಕಸಭಾ ವಿಭಾಗದ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿರುವ ಎಂಟು ಸಂಸದರಿದ್ದಾರೆ.