ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'370 ರುಪಾಯಿ ಬಿರಿಯಾನಿ' ವಿವಾದದ ಕಿಡಿಗೇಡಿ ಹಿಮಾಂಶು ಪಶ್ಚಾತಾಪ: ಅತ್ತ ಕೆಲಸವೂ ಇಲ್ಲ, ಇತ್ತ ಕಾನೂನು ಹೋರಾಟದ ಅನಿವಾರ್ಯತೆ

Himanshu Jangra: ಸ್ಟ್ಯಾಂಡ್‌ಅಪ್ ಕಾಮಿಡಿ ಶೋದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಹರಿಯಾಣದ ಹಿಮಾಂಶು ಜಾಂಗ್ರಾ ಈಗ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. ಉದ್ಯೋಗ ಕಳೆದುಕೊಂಡಿರುವುದಾಗಿ, ಕುಟುಂಬ ಸಾಮಾಜಿಕ ಒತ್ತಡ ಎದುರಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಪ್ರಕರಣದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ಜಾರಿ ಮಾಡಿದ್ದು, ಕಾಮಿಡಿಯನ್ ಪ್ರಣೀತ್ ಮೋರೆ ಕೂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಉದ್ಯೋಗ ಕಳೆದುಕೊಂಡು ಟ್ರೋಲ್‌ಗೆ ತುತ್ತಾದ ಹಿಮಾಂಶು ಕಂಗಾಲು

ಹಿಮಾಂಶು ಜಾಂಗ್ರಾ -

Profile
Sushmitha Jain Jun 13, 2026 11:38 PM

ಚಂಡೀಗಢ, ಜೂ. 13: ಸ್ಟ್ಯಾಂಡ್‌ಅಪ್ ಕಾಮಿಡಿ ಶೋದಲ್ಲಿ (Stand-up comedy show) ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ಹರಿಯಾಣದ 22 ವರ್ಷದ ಯುವಕ ಹಿಮಾಂಶು ಜಾಂಗ್ರಾ (Himanshu Jangra) ಪ್ರಸ್ತುತ ತಾನು ತೀವ್ರ ಪಶ್ಚಾತ್ತಾಪ ಪಡುತ್ತಿರುವುದಾಗಿ, ಕಾನೂನು ಸಂಕಷ್ಟ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾನೆ. ಇತ್ತೀಚೆಗೆ ಹಿಮಾಂಶುನನ್ನು ಕೆಲಸದಿಂದ ವಜಾಗೊಳಿಸಿದ್ದ ಗುರುಗ್ರಾಮದ 'ಸ್ಟಾರ್ವಿಕ್ ಡಿಸೈನ್' ಕಂಪನಿಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮ ಅವರೊಂದಿಗೆ ನಡೆಸಿದ ವಿಡಿಯೊ ಸಂಭಾಷಣೆಯಲ್ಲಿ ಆತ ತನ್ನ ಅಳಲು ತೋಡಿಕೊಂಡಿದ್ದಾನೆ. "ಸರ್, ನಾನು ಈಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದೇನೆ ಮತ್ತು ತೀವ್ರ ಒತ್ತಡದಲ್ಲಿದ್ದೇನೆ. ನನ್ನ ಕುಟುಂಬವನ್ನು ನೋಡಿದಾಗ, ಆ ಶೋಗೆ ನಾನು ಏಕೆ ಹೋದೆ ಎಂದು ತೀವ್ರವಾಗಿ ಪಶ್ಚಾತ್ತಾಪವಾಗುತ್ತಿದೆ" ಎಂದು ಹಿಮಾಂಶು ಹೇಳಿದ್ದಾನೆ.

ಗುರುಗ್ರಾಮದಲ್ಲಿ ನಡೆದ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನಲ್ಲಿ, ತಾನು ಡೇಟಿಂಗ್ ವೇಳೆ ಚಿಕನ್ ಬಿರಿಯಾನಿಗೆ 370 ರುಪಾಯಿ ಖರ್ಚು ಮಾಡಿದ್ದರಿಂದ ಗೆಳತಿಯಿಂದ ಲೈಂಗಿಕ ಸಾಮೀಪ್ಯ ಪಡೆಯಲು ತನಗೆ ಹಕ್ಕಿದೆ ಎಂದು ಹಿಮಾಂಶು ವಾದಿಸಿದ್ದ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಜೂನ್ 22ರಂದು ವಿಚಾರಣೆಗೆ ಹಾಜರಾಗುವಂತೆ ಹಿಮಾಂಶು ಮತ್ತು ಕಾಮಿಡಿಯನ್ ಪ್ರಣೀತ್ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ, ತಕ್ಷಣದ ಕ್ರಮಕ್ಕಾಗಿ ಹರಿಯಾಣ ಡಿಜಿಪಿಗೆ ಪತ್ರ ಬರೆದಿದೆ.

"ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಸತತವಾಗಿ ಟ್ರೋಲ್ ಮತ್ತು ನಿಂದನೆಗಳು ಬರುತ್ತಿವೆ. ವಿಷಯ ತಿಳಿದು ನನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ತಂದೆ-ತಾಯಿಯನ್ನು ಪ್ರಶ್ನಿಸಿ ಅವಮಾನಿಸಿದ್ದಾರೆ. ಉದ್ಯೋಗವೂ ಹೋದ ಕಾರಣ ಕುಟುಂಬದವರು ತೀವ್ರ ಆತಂಕದಲ್ಲಿದ್ದಾರೆ" ಎಂದು ಹಿಮಾಂಶು ತಿಳಿಸಿದ್ದಾನೆ. ಮನರಂಜನೆಯ ವಾತಾವರಣ ಮತ್ತು ಕಾಮಿಡಿಯನ್ ನೀಡಿದ ಪ್ರೋತ್ಸಾಹದಿಂದಾಗಿ ಕಥೆಯನ್ನು ಕೊಂಚ ಉತ್ಪ್ರೇಕ್ಷೆ ಮಾಡಿ ಸುಳ್ಳು ಹೇಳಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಹಿಮಾಂಶು ತನ್ನ ಕಚೇರಿಯಲ್ಲಿ ಮಹಿಳಾ ಸಹೋದ್ಯೋಗಿಗಳೊಂದಿಗೆ ಉತ್ತಮ ನಡವಳಿಕೆ ಹೊಂದಿದ್ದರೂ, ವೇದಿಕೆಯ ಮೇಲಿನ ಆತನ ಬೇಜವಾಬ್ದಾರಿತನಕ್ಕೆ ಬೆಲೆ ತೆರಬೇಕಾಗಿದೆ ಎಂದು ಮಾಜಿ ಬಾಸ್ ವಿವೇಕ್ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು ಜಂಗ್ರಾ, ಸೇಜಲ್ ಪವಾರ್‌ಗೆ ಮಹಿಳಾ ಆಯೋಗ ನೋಟಿಸ್

ಮತ್ತೊಂದೆಡೆ, ಕಾಮಿಡಿಯನ್ ಪ್ರಣೀತ್ ಮೋರೆ ಶನಿವಾರ ಎರಡನೇ ಬಾರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, "ನನಗೆ ಈ ದ್ವೇಷ ಮತ್ತು ಟೀಕೆಗಳು ಅರ್ಹವಾಗಿವೆ. ಆತ ಅಸಭ್ಯವಾಗಿ ಮಾತನಾಡುತ್ತಿದ್ದರೂ ಎಲ್ಲರೂ ನಗುತ್ತಿದ್ದರಿಂದ ನಾನು ಕೂಡ ಕೊಚ್ಚಿಹೋದೆ. ನಾನು ಅವನನ್ನು ಅಲ್ಲೇ ತಡೆದು ನಿಲ್ಲಿಸಬೇಕಿತ್ತು, ಇದು ನನ್ನ ದೊಡ್ಡ ತಪ್ಪು" ಎಂದು ಒಪ್ಪಿಕೊಂಡಿದ್ದಾರೆ. ಮಹಿಳಾ ಸುರಕ್ಷತೆ ಮತ್ತು ಸಮ್ಮತಿಯನ್ನು ಕಡೆಗಣಿಸುವ ಇಂತಹ ಪ್ರವೃತ್ತಿ ಸಮಾಜಕ್ಕೆ ಮಾರಕ ಎಂದು ಮಹಿಳಾ ಆಯೋಗವು ಗಂಭೀರ ಎಚ್ಚರಿಕೆ ನೀಡಿದೆ.