MLC Election 2026: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ನಮೋಶಿಗೆ ಭರ್ಜರಿ ಗೆಲುವು; ಎನ್ಡಿಎ ಕಾರ್ಯಕರ್ತರ ವಿಜಯೋತ್ಸವ
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವಿನ ಸುದ್ದಿ ಹೊರಬೀಳುತ್ತಿದ್ದಂತೆ ಕಲಬುರಗಿಯ ಮತ ಎಣಿಕೆ ಕೇಂದ್ರದ ಎದುರು ಎನ್ಡಿಎ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿಕೊಂಡು, ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.
-
ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ (North East Teacher Constituency Election) ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ (Shashil G. Namoshi) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆದ ಮತ ಎಣಿಕೆಯಲ್ಲಿ ನಮೋಶಿ ಎರಡು ಸುತ್ತುಗಳಲ್ಲೇ 14,540 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.
ಮೊದಲ ಸುತ್ತಿನಲ್ಲಿ ನಮೋಶಿ 7,239 ಮತಗಳನ್ನು ಪಡೆದರೆ, ಎರಡನೇ ಸುತ್ತಿನಲ್ಲಿ 7,311 ಮತಗಳನ್ನು ಗಳಿಸಿದರು. ಎರಡು ಸುತ್ತುಗಳಲ್ಲಿ ಒಟ್ಟು 14,540 ಮತಗಳು ನಮೋಶಿ ಪಾಲಾಗಿದ್ದು, ಎದುರಾಳಿ ಅಭ್ಯರ್ಥಿಗಳಿಗಿಂತ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದರು.

ಗೆಲುವಿನ ಬೆನ್ನಲ್ಲೇ ಸಂಭ್ರಮ
ನಮೋಶಿ ಗೆಲುವಿನ ಸುದ್ದಿ ಹೊರಬೀಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಎದುರು ಎನ್ಡಿಎ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿಕೊಂಡು, ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು. ನಮೋಶಿ ಅವರ ಗೆಲುವನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಿದರು.
ಶಿಕ್ಷಕರ ಕ್ಷೇತ್ರದಲ್ಲಿ ಮತ್ತೆ ಹಿಡಿತ
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ನಮೋಶಿ ಅವರ ಗೆಲುವು ಎನ್ಡಿಎಗೆ ಮಹತ್ವದ ರಾಜಕೀಯ ಬಲ ನೀಡಿದೆ. ಎರಡು ಸುತ್ತುಗಳಲ್ಲೇ ಭರ್ಜರಿ ಮತ ಗಳಿಸುವ ಮೂಲಕ ನಮೋಶಿ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಹೊರಗೆ ಸೇರಿದ್ದ ಕಾರ್ಯಕರ್ತರು ನಮೋಶಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳ ಪರವಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಶುಭ ಹಾರೈಸಿದರು.