ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅತ್ಯಾಚಾರಿಗಳ ಸಮರ್ಥನೆ; ಪ್ರಲ್ಹಾದ್‌ ಜೋಶಿ ಬದಲಿಗೆ ಅರ್ಹರಿಗೆ ಶಿಕ್ಷಣ ಖಾತೆ ನೀಡಲು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಆಗ್ರಹ

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಲ್ಹಾದ್‌ ಜೋಶಿ ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಲ್ಹಾದ್‌ ಜೋಶಿ ಬದಲಿಗೆ ಅರ್ಹರಿಗೆ ಶಿಕ್ಷಣ ಖಾತೆ ನೀಡಲಿ: ಸಿದ್ದರಾಮಯ್ಯ

-

Prabhakara R
Prabhakara R Jul 29, 2026 5:45 PM

ಬೆಂಗಳೂರು: ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಲ್ಹಾದ್‌ ಜೋಶಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿರುವುದು ಕನ್ನಡಿಗರೆಲ್ಲರೂ ತಲೆತಗ್ಗಿಸುವ ವಿಚಾರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಖಾತೆಯನ್ನು ಜೋಶಿ ಅವರ ಬದಲಿಗೆ ಅರ್ಹರಿಗೆ ಮಹತ್ವದ ಖಾತೆಯ ಹೊಣೆ ವಹಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಲ್ಹಾದ್‌ ಜೋಶಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ.

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಲ್ಹಾದ್‌ ಜೋಶಿ ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ - ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಶಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್.ಎಸ್.ಎಸ್ ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ.



ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಬಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಲ್ಹಾದ್‌ ಜೋಶಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ.

ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಲ್ಹಾದ್ ಜೋಶಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ.

ʼʼಅತ್ಯಾಚಾರಿಗಳಿಗೆ ಬೆಂಬಲ ನೀಡಿದವರಿಗೆ ಶಿಕ್ಷಣ ಸಚಿವ ಪಟ್ಟʼʼ: ಪ್ರಲ್ಹಾದ ಜೋಶಿ ವಿರುದ್ಧ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ

ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಶಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಶಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.