Sitaram Kesri: ರಾಷ್ಟ್ರಪತಿ ಹುದ್ದೆಯನ್ನೇ ತಿರಸ್ಕರಿಸಿ ದೇವೇಗೌಡರನ್ನೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ರು ಕಾಂಗ್ರೆಸ್‌ನ ಈ ವೀರ ʻಕೇಸರಿʼ
ಸೀತಾರಾಮ್ ಕೇಸರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದ ಎಚ್ ಡಿ ದೇವೇಗೌಡ ಭಾರತದ ಪ್ರಧಾನಿಯಾಗಿದ್ದರು. 1997ರಲ್ಲಿ ಕೇಸರಿ ದೇವೇಗೌಡರ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದವರು ಇದೇ ಸೀತಾರಾಮ್ ಕೇಸರಿ.
ಸೀತಾರಾಮ್ ಕೇಸರಿ -
Rakshita Karkera
Oct 28, 2025 5:00 AM
ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ನಲ್ಲಿ ಕಳೆದ 25 ವರ್ಷಗಳಲ್ಲಿ ನಡೆಯದಂತಹ ಘಟನೆಯೊಂದು ನಡೆದಿತ್ತು. 90ರ ದಶಕದಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ಕಾರ್ಯನಿರ್ವಹಿಸಿದ್ದ ಸೀತಾರಾಮ್ ಕೇಸರಿ(Sitaram Kesri) ಅವರ ಪುಣ್ಯ ಸ್ಮರಣೆಯನ್ನು ದೆಹಲಿ ಎಐಸಿಸಿ (AICC)ಕಚೇರಿಯಲ್ಲಿ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇಸರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರನ್ನು ಸ್ಮರಿಸಿದ್ದರು. ಆದರೆ ಇಷ್ಟು ವರ್ಷಗಳ ಕಾಲ ಇರದ ಈ ಪುಣ್ಯ ಸ್ಮರಣೆ ಅಚಾನಕ್ಕಾಗಿ ಹೇಗೆ ಪ್ರಾರಂಭವಾಯಿತು ಎಂಬ ಪ್ರಶ್ನೆ ಸಹಜ ಎಂಬಂತೆ ಎಲ್ಲರಲ್ಲೂ ಮೂಡಿತ್ತು. ಈ ದಿಢೀರ್ ಸ್ಮರಣೆ ಹಿಂದೆ ಬಿಹಾರ ಚುನಾವಣೆಯ ಕಾರ್ಯತಂತ್ರ ಅಡಗಿದೆ ಎಂದು ಹಲವರ ವಿಶ್ಲೇಷಣೆಯಾಗಿತ್ತು. ಸೀತಾರಾಂ ಕೇಸರಿ ಅವರು ಮೂಲತಃ ಬಿಹಾರದವರು. ಹೀಗಾಗಿ ಅವರನ್ನು ಸ್ಮರಿಸುವ ಮೂಲಕ ಬಿಹಾರಿಗಳ ಒಲವನ್ನು ತನ್ನತ್ತ ಸೆಳೆಯುವ ಮಾಸ್ಟರ್ ಪ್ಲ್ಯಾನ್ ಕಾಂಗ್ರೆಸ್‌ನದ್ದು ಎನ್ನಲಾಗಿದೆ. ಹಾಗಾದರೆ ಈ ಸೀತಾರಾಂ ಕೇಸರಿ ಯಾರು? ಪಕ್ಷ ಇಷ್ಟು ಕಾಲ ಮರೆತಿದ್ದ ಕೇಸರಿಯವರು ಒಂದು ಕಾಲದಲ್ಲಿ ಪಕ್ಷದ ಅಸ್ಥಿತ್ವದ ಉಳಿವಿಗಾಗಿ ಅರಸಿ ಬಂದ ರಾಷ್ಟ್ರಪತಿ ಹುದ್ದೆಯನ್ನೇ ತಿರಸ್ಕರಿಸಿದ್ದ ವಿಚಾರ ಗೊತ್ತೇ? ಇಲ್ಲಿದೆ ಮಾಹಿತಿ.
ಸೀತಾರಾಮ್ ಕೇಸರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದ ಎಚ್ ಡಿ ದೇವೇಗೌಡ ಭಾರತದ ಪ್ರಧಾನಿಯಾಗಿದ್ದರು. 1997ರಲ್ಲಿ ಕೇಸರಿ ದೇವೇಗೌಡರ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದವರು ಇದೇ ಸೀತಾರಾಮ್ ಕೇಸರಿ. ಅದು ದೇವೇಗೌಡರು ಅಚಾನಕಕ್ಕಾಗಿ ಒದಗಿ ಬಂದಿದ್ದ ಪ್ರಧಾನಿ ಪಟ್ಟವನ್ನು ಉಳಿಸಿಕೊಂಡು ಮುಂದುವರಿಸುವ ಮಹತ್ವಾಕಾಂಕ್ಷೆಯಲ್ಲಿದ್ದ ಕಾಲ. ಪ್ರಧಾನಿ ಪಟ್ಟದ ಉಳಿವಿಗಾಗಿ ದೇವೇಗೌಡರು ನಾನಾ ಕಸರತ್ತುಗಳನ್ನು ಮಾಡಿದ್ದರು. ಇದಕ್ಕೆ ಪ್ರಮುಖ ಅಡ್ಡಿಯಾಗಿದ್ದವರು ಸೀತಾರಾಂ ಕೇಸರಿ. ಹೀಗಾಗಿ ಅವರನ್ನು ಮನವೊಲಿಸಲು ಗೌಡ್ರು ಹಲವು ಪ್ರಯತ್ನಗಳನ್ನು ಮಾಡಿದ್ದರು.
ಈ ಸುದ್ದಿಯನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪಂಜಾಬ್ ರೈತರಿಂದ ವಿಶೇಷ ಗೌರವ
ಈ ಬಗ್ಗೆ ದಿ ಎಕಾಮಿಕ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ಮತ್ತು ಸಂಸದ ಅನ್ವರ್ ಮಾಹಿತಿ ಹಂಚಿಕೊಂಡಿದ್ದು, ಆಗಿನ ಯುನೈಟೆಡ್ ಫ್ರಂಟ್ ಸರ್ಕಾರದ ಪ್ರಧಾನಿ ಎಚ್‌ಡಿ ದೇವೇಗೌಡರು 1997 ರಲ್ಲಿ ಕೇಸರಿ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಲು ಮುಂದಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಇದು ಕಾಂಗ್ರೆಸ್‌ನ ಬೆಂಬಲವನ್ನು ಉಳಿಸಿಕೊಳ್ಳಲು ಗೌಡರ ಶಾಂತಿ ಒಪ್ಪಂದದ ಭಾಗವಾಗಿತ್ತು. ಆದಾಗ್ಯೂ, ಕೇಸರಿ ಈ ಆಫರ್‌ನನ್ನು ತಿರಸ್ಕರಿಸಿ ಇದನ್ನು ಆಮಿಷ ಮತ್ತು ಕಾಂಗ್ರೆಸ್ ಅನ್ನು ವಿಭಜಿಸುವ ಪಿತೂರಿ ಎಂದು ಎಂದು ನೇರವಾಗಿಯೇ ಹೇಳಿದರು. ಕಾಂಗ್ರೆಸ್ ಬೆಂಬಲ ವಾಪಾಸ್ ಪಡೆದ ಬಳಿಕ ದೇವೇಗೌಡ ಪ್ರಧಾನಿ ಪಟ್ಟದಿಂದ ಕೆಳಗಿಳಿದು ಐ.ಕೆ. ಗುಜ್ರಾಲ್ ಪ್ರಧಾನಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು ಎಂದ ಹೇಳಿದ್ದಾರೆ.
ಅಂದಿನ ಪ್ರಧಾನಿ ದೇವೇಗೌಡರು ತಮ್ಮ ಸಚಿವಾಲಯದಲ್ಲಿ 50% ಸಚಿವ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡುವುದಾಗಿ ಹೇಳಿದ್ದರು ಮತ್ತು ಕೆಲವು ಹಿರಿಯ ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರೂ ಕೇಸರಿ ಅದಕ್ಕೆ ಒಪ್ಪಲಿಲ್ಲ. ಯುಎಫ್ ಸರ್ಕಾರ ಮತ್ತು ಕಾಂಗ್ರೆಸ್ (ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ) ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಲು ಪ್ರಾರಂಭಿಸಿದಾಗ, ಪ್ರಧಾನಿ ಎಚ್‌ಡಿ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ ಅವರ ಮನವೊಲಿಸಲು ಕೆಲವು ಪ್ರಯತ್ನಗಳನ್ನು ಮಾಡಿದರು. 1997 ರಲ್ಲಿ ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಅವಧಿ ಮುಗಿಯುತ್ತಿದ್ದಂತೆ ಕೇಸರಿ ಅವರನ್ನು ರಾಷ್ಟ್ರಪತಿ (ಭಾರತದ ರಾಷ್ಟ್ರಪತಿ) ಮಾಡಬಹುದು ಎಂದು ಪ್ರಧಾನಿ ಪ್ರಸ್ತಾಪಿಸಿದರು. ಪ್ರಧಾನಿಯವರು ಕಾಂಗ್ರೆಸ್‌ಗೆ 50% ಸಚಿವ ಸ್ಥಾನಗಳನ್ನು ಸಹ ನೀಡಿದರು. ಆಗಿನ ಸಚಿವ ಸಿಎಂ ಇಬ್ರಾಹಿಂ (ಗೌಡರ ಆಪ್ತ) ಆಗಿನ ಪ್ರಧಾನಿ ಪರವಾಗಿ ಕೇಸರಿಜಿಗೆ ಪ್ರಸ್ತಾವನೆಗಳನ್ನು ತಂದರು, ಕೇಸರಿಜಿ ಅದರ ಬಗ್ಗೆ ನನ್ನ ಜೊತೆ ಮಾಹತಿ ಹಂಚಿಕೊಂಡಿದ್ದರು ಎಂದು ಅನ್ವರ್ ತಿಳಿಸಿದರು.
ಗೌಡ ಸರ್ಕಾರದ ಉಳಿವನ್ನು ಖಚಿತಪಡಿಸಿಕೊಳ್ಳಲು ಈ ಪ್ರಸ್ತಾಪಗಳು ರಾಜಕೀಯ ಆಮಿಷ ಎಂದು ಕೇಸರಿಯವರು ದೃಢವಾಗಿ ನಂಬಿದ್ದರು. ಈ ಪ್ರಸ್ತಾಪಗಳು ಕಾಂಗ್ರೆಸ್ ಅನ್ನು ವಿಭಜಿಸುವ ಪಿತೂರಿ ಎಂದೂ ಅವರು ಭಾವಿಸಿದ್ದರು. ಕೇಸರಿಜಿ ಈ ಪ್ರಸ್ತಾಪಗಳನ್ನು ಖಡಾ ಖಂಡಿತವಾಗಿ ತಿರಸ್ಕರಿಸಿದರು. ಯುಎಫ್ ಸರ್ಕಾರದ ಪತನದ ನಂತರ ಕಾಂಗ್ರೆಸ್ ತನ್ನ ಶಕ್ತಿಯನ್ನು ಮರಳಿ ಪಡೆಯುತ್ತದೆ ಮತ್ತು ತನ್ನದೇ ಆದ ಸರ್ಕಾರವನ್ನು ಮುನ್ನಡೆಸುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಗೌಡರ ಸರ್ಕಾರವನ್ನು ಸೇರುವ ಒಲವು ಹೊಂದಿದ್ದರು. ಆದರೆ ಕೇಸರಿಜಿ ತಮ್ಮ ದೃಢ ನಿರ್ಧಾರವನ್ನು ಬದಲಿಸಿಕೊಳ್ಳಲೇ ಇಲ್ಲ ಎಂದು ಅನ್ವರ್ ಹೇಳಿದರು.
ಶರದ್ ಪವಾರ್ ಆಗ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ಗೌಡ ಸರ್ಕಾರವನ್ನು ಪದಚ್ಯುತಗೊಳಿಸಿದ ತಿಂಗಳುಗಳಲ್ಲಿ, ಕೆ.ಆರ್. ನಾರಾಯಣನ್ 1997 ರಲ್ಲಿ ಯುಎಫ್-ಕಾಂಗ್ರೆಸ್-ಎಡಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಭಾರತದ ರಾಷ್ಟ್ರಪತಿಯಾದರು.
ಕೊನೆಗೂ ಕೇಸರಿಯವರ ದೃಢ ನಿರ್ಧಾರದಿಂದಾಗಿ ಆಗಿನ ಸರ್ಕಾರದ "ಬ್ಲ್ಯಾಕ್‌ಮೇಲಿಂಗ್ ತಂತ್ರಗಳು" ವಿಫಲವಾಯಿತು. ಇದು ದೇವೇಗೌಡ ಸರ್ಕಾರವನ್ನು ಕೆಳಗಿಳಿಸಲು ಕಾರಣವಾಯಿತು ಎಂದು ಅನ್ವರ್ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮತ್ತು 17 ವರ್ಷಗಳ ಕಾಲ ಎಐಸಿಸಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಕೇಸರಿ ಅವರನ್ನು ಆಮಿಷವೊಡ್ಡಿ ತಮ್ಮತ್ತ ಸೆಳೆಯವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದಾಗ, ಆಗಿನ ಪ್ರಧಾನಿ ಕಚೇರಿಯು ಸುಳ್ಳು ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಿ (ತನ್ವಾರ್ ಕೊಲೆ ಪ್ರಕರಣ) ಸಿಬಿಐ ತನಿಖೆಯ ಮೂಲಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿತು. ಆದರೆ ಕೇಸರಿ ಅವರು ಅದಕ್ಕೂ ಮಣಿಯಲಿಲ್ಲ ಎಂದರು ಅನ್ವರ್ ತಿಳಿಸಿದರು.