ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆ; ವಿಡಿಯೊ ವೈರಲ್

Woman doctor slaps on patient's father: ರೋಗಿಯ ಮಗುವಿನ ತಂದೆಯ ಜೊತೆ ವಾಗ್ವಾದ ನಡೆಸಿದ ಮಹಿಳಾ ವೈದ್ಯರೊಬ್ಬರು ಸಿಟ್ಟಿಗೆದ್ದು ಅವರಿಗೆ ಕಪಾಳಮೋಕ್ಷ ನಡೆಸಿದ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ. ಇದರ ವಿಡಿಯೊ ವೈರಲ್ ಆಗಿದೆ.

ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿದ ವೈದ್ಯೆ

-

Priyanka P Priyanka P Oct 28, 2025 1:42 PM

ಅಹಮದಾಬಾದ್‌: ಆಸ್ಪತ್ರೆಯಲ್ಲಿ ತೀವ್ರ ವಾಗ್ವಾದ ನಡೆದ ಸಂದರ್ಭದಲ್ಲಿ ಮಹಿಳಾ ವೈದ್ಯರೊಬ್ಬರು ರೋಗಿಯ ತಂದೆಗೆ ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‍ನ (Gujarat) ಅಹಮದಾಬಾದ್‍ನಲ್ಲಿರುವ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ. ಅಕ್ಟೋಬರ್ 26 ರಂದು ನಡೆದ ಈ ವಾಗ್ವಾದದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದೆ. ಈ ವಿಡಿಯೊ ವೈರಲ್ (Viral Video) ಆದ ಬೆನ್ನಲ್ಲೇ, ವ್ಯಾಪಕ ಟೀಕೆಗೆ ಗುರಿಯಾಗಿದೆ ಮತ್ತು ಶಿಸ್ತು ಕ್ರಮಕ್ಕೆ ಕರೆ ನೀಡಲಾಗಿದೆ.

ವರದಿಯ ಪ್ರಕಾರ, ವಿಡಿಯೊದಲ್ಲಿರುವ ವ್ಯಕ್ತಿಯನ್ನು ಆಶಿಕ್ ಹರಿಭಾಯಿ ಚಾವ್ಡಾ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಮಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಚಾವ್ಡಾ ತಮ್ಮ ಫೋನ್‌ನಲ್ಲಿ ಸಂಭಾಷಣೆಯನ್ನು ಚಿತ್ರೀಕರಿಸಲು ಪ್ರಾರಂಭಿಸಿದ ನಂತರ ವಾಗ್ವಾದ ಪ್ರಾರಂಭವಾಯಿತು. ವಿಡಿಯೊದಲ್ಲಿ ಹಳದಿ ಕುರ್ತಾ ಧರಿಸಿ ಕುತ್ತಿಗೆಗೆ ಸ್ಟೆತೊಸ್ಕೋಪ್ ಧರಿಸಿದ್ದ ವೈದ್ಯರು, ಉದ್ವಿಗ್ನತೆ ಹೆಚ್ಚಾದಾಗ ಚಾವ್ಡಾ ಅವರನ್ನು ಬೈಯುವುದನ್ನು ವಿಡಿಯೊದಲ್ಲಿ ನೋಡಬಹುದು. ಕೋಪಗೊಂಡಂತೆ ಕಾಣುತ್ತಿದ್ದ ವೈದ್ಯರು, ರೆಕಾರ್ಡಿಂಗ್ ನಿಲ್ಲಿಸುವಂತೆ ಹೇಳಿದರು.

ನಿಮ್ಮ ಮೊಬೈಲ್ ಕೆಳಗೆ ಇರಿಸಿ ಎಂದು ಅವರು ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು. ಚಾವ್ಡಾ ಅವರು ಮಾತನಾಡುತ್ತಿದ್ದಂತೆ, ಇದ್ದಕ್ಕಿದ್ದಂತೆ ಮುಂದೆ ಬಂದ ವೈದ್ಯೆ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಒಬ್ಬ ಭದ್ರತಾ ಸಿಬ್ಬಂದಿಯೂ ವಿಡಿಯೊದಲ್ಲಿ ಕಾಣಿಸಿಕೊಂಡರು. ಆದರೆ, ಹಲ್ಲೆ ನಡೆದರೂ ಅವರು ಯಾವುದೇ ತಕ್ಷಣದ ಕ್ರಮ ಕೈಗೊಳ್ಳಲಿಲ್ಲ.

ವಿಡಿಯೊ ವೀಕ್ಷಿಸಿ:



ಈ ಜಗಳ ನಡೆದ ನಂತರ, ವೈದ್ಯೆಯು ಚಾವ್ಡಾ ಅವರ ಮಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಅವರು ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದರು. ನೀವು ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದೀರಿ, ಆದ್ದರಿಂದ ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಅವರು ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: Viral Video: ಉರಗ ರಕ್ಷಕನ ಮೇಲೆಯೇ ದೈತ್ಯ ಕಾಳಿಂಗ ಸರ್ಪದ ಡೆಡ್ಲಿ ಅಟ್ಯಾಕ್‌; ಎದೆ ಝಲ್ಲೆನಿಸೋ ವಿಡಿಯೊ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾದ ವಿಡಿಯೊ

ಈ ವಿಡಿಯೊ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಅನೇಕ ಬಳಕೆದಾರರು ವೈದ್ಯರ ವರ್ತನೆಯನ್ನು ಖಂಡಿಸಿದರು. ವೈದ್ಯೆಯನ್ನು ಅಮಾನತುಗೊಳಿಸಬೇಕು ಅಥವಾ ಬಂಧಿಸಬೇಕೆಂದು ಒತ್ತಾಯಿಸಿದರು. ಅವರನ್ನು ಸೇವೆಯಿಂದ ತೆಗೆದುಹಾಕುವಂತೆ ಒತ್ತಾಯಿಸುವ ಹ್ಯಾಶ್‌ಟ್ಯಾಗ್‌ಗಳು ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದವು.

ಯಾವುದೇ ಸಂದರ್ಭದಲ್ಲಿ ಯಾವುದೇ ರೋಗಿ ಅಥವಾ ಕುಟುಂಬದ ಸದಸ್ಯರ ಮೇಲಿನ ಹಿಂಸಾಚಾರ ಸ್ವೀಕಾರಾರ್ಹವಲ್ಲ ಎಂದು ಹಲವಾರು ಮಂದಿ ನೆಟ್ಟಿಗರು ಹೇಳಿದರು. ಕೆಲವು ಬಳಕೆದಾರರು ವೈದ್ಯಕೀಯ ವೃತ್ತಿಪರರು ಮತ್ತು ಸಾರ್ವಜನಿಕರ ನಡುವೆ ಹೆಚ್ಚುತ್ತಿರುವ ವಾಗ್ವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಸೋಲಾ ಸಿವಿಲ್ ಆಸ್ಪತ್ರೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆಂತರಿಕ ವಿಚಾರಣೆ ಅಥವಾ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.