D K Shivakumar’s Delhi Visit: ಸಿಎಂ ಹೇಳಿದ್ಮೇಲೆ ಇನ್ನೇನಿದೆ? ಅವರು ಹೇಳಿದಂತೆ ನಡೆಯುತ್ತೇವೆ ಎಂದ ಡಿಕೆಶಿ
Karnataka Politics: ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ ಅವರು, "ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆಯಾದ ಅಂಬಿಕಾ ಸೋನಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದರು. ಹೀಗಾಗಿ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದೆ ಎಂದು ಮಾಹಿತಿ ನೀಡಿದ್ದಾರೆ.
-
Prabhakara R
Oct 27, 2025 9:49 PM
ಬೆಂಗಳೂರು, ಅ. 27: "ಸಿಎಂ ಅವರು ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar’s Delhi Visit) ಅವರು ಹೇಳಿದ್ದಾರೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಸೋಮವಾರ ಪ್ರತಿಕ್ರಿಯಿಸಿದರು. "ಹೈಕಮಾಂಡ್ ಒಪ್ಪಿದರೇ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆ" ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.
ದೆಹಲಿಗೆ ಖಾಸಗಿ ಭೇಟಿ
ದೆಹಲಿ ಭೇಟಿ ಬಗ್ಗೆ ಕೇಳಿದಾಗ, "ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆಯಾದ ಅಂಬಿಕಾ ಸೋನಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದರು. ಹೀಗಾಗಿ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಅವರು ಸೋನಿಯಗಾಂಧಿ ಅವರ ಜತೆ ಬಂದು ನನ್ನನ್ನು ಭೇಟಿ ಮಾಡಿದ್ದರು. ನನಗೂ ಅವರಿಗೂ ಬಹಳ ಆತ್ಮೀಯತೆ. ನಮ್ಮ ಪಕ್ಷದ ನಾಯಕರು ಅವರು. ಎಸ್.ಎಂ.ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ನಮಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನನ್ನನ್ನು ತಮ್ಮನಂತೆ ಕಂಡಿದ್ದರು, ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗಾಗಿ ನಾನು ಅವರ ಮನೆಗೆ ಭೇಟಿ ನೀಡಿದ್ದೆ" ಎಂದು ತಿಳಿಸಿದರು.
ನೀವು ಹೈಕಮಾಂಡ್ ಭೇಟಿಗೆ ದಿಲ್ಲಿಗೆ ಹೋಗಿದ್ದಿರಿ ಎಂದು ಚರ್ಚೆಯಾಗುತ್ತಿದೆಯಲ್ಲ ಎಂದು ಕೇಳಿದಾಗ, "ನಾನು ದಿಲ್ಲಿಗೆ ಹೋಗಿದ್ದ ವಿಷಯ, ಕೆಲಸದ ಬಗ್ಗೆ ಮಾತ್ರ ಹೇಳಬಲ್ಲೆ. ಹೈಕಮಾಂಡ್ ಭೇಟಿ ಬಗ್ಗೆ ನೀವು ಮಾಧ್ಯಮದವರು, ಸಾರ್ವಜನಿಕರು, ಇನ್ನೂ ಬೇರೆಯವರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಿ. ಯಾರು ಬೇಕಾದರೂ ಮಾತಾಡಿಕೊಳ್ಳಲಿ. ನನಗದು ಸಂಬಂಧ ಪಡದ ವಿಷಯ" ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕಾಲಮಿತಿಯಲ್ಲಿ ಅನುಮೋದನೆ ನೀಡದಿದ್ರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ
ರಾಹುಲ್ ಗಾಂಧಿ ಭೇಟಿಗೆ ಸಿಗದ ಅವಕಾಶ?
ಭಾನುವಾರ ಸಂಜೆ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದರು. ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಡಿಕೆಶಿ ಸಮಯಾವಕಾಶ ಕೇಳಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಸಮಯಾವಕಾಶ ಕೇಳಲಾಗಿತ್ತು. ಆದರೆ, ಆದರೆ ರಾಹುಲ್ ಗಾಂಧಿ ಅವರು ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಿಂದ ಹೊರಗಿದ್ದಾರೆ. ಇನ್ನು ಕೆಪಿ ವೇಣುಗೋಪಾಲ್ ಅವರು ದೆಹಲಿಯಲ್ಲಿ ಇಲ್ಲ. ಹೀಗಾಗಿ ಡಿಕೆ ಶಿವಕುಮಾರ್ ವಾಪಸ್ ಆಗಿದ್ದಾರೆ. ಆದರೆ ಮತ್ತೆ ನವೆಂಬರ್ 11 ಕ್ಕೆ ಡಿಕೆಶಿ ದೆಹಲಿ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ರಾಜ್ಯದ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ನವೆಂಬರ್ 14ರಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.