ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (west bengal) ತೃಣ ಮೂಲ ಕಾಂಗ್ರೆಸ್ (Trinamool Congress) ಆಂತರಿಕ ಭಿನ್ನಾಭಿಪ್ರಾಯದ ಕಾರಣದಿಂದ ಈಗಾಗಲೇ ಒಡೆದು ಎರಡು ಹೋಳಾಗಿದೆ. ಈ ನಡುವೆ ಮಮತಾ ಬ್ಯಾನರ್ಜಿ (Mamata Banerjee) ಅವರ ಆಪ್ತೆ, ತೃಣ ಮೂಲ ಕಾಂಗ್ರೆಸ್ ನ ನಿಷ್ಠಾವಂತರು ಎಂದೇ ಗುರುತಿಸಿಕೊಂಡಿದ್ದ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಬಿಜೆಪಿ ನಾಯಕ, ಮುಖ್ಯಮಂತ್ರಿ ಸುವೇಂದು ಅಧಿಕಾರಿಯನ್ನು (CM Suvendu Adhikari) ಬಹಿರಂಗವಾಗಿ ಹೊಗಳಿದ್ದು, ಇದು ಇಲ್ಲಿನ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಂದರ್ಶನವೊಂದರಲ್ಲಿ ಅವರು ಸುವೇಂದು ಅಧಿಕಾರಿ ಅವರೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಹೇಳಿಕೊಂಡಿದ್ದಾರೆ.
ಪಶ್ಚಿಮ ಬಾಂಗ್ಲಾದಲ್ಲಿ ತೃಣ ಮೂಲ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ತೀವ್ರವಾಗಿರುವಾಗಲೇ ಟಿಎಂಸಿ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಹೊಗಳಿದ್ದು, ಅಧಿಕಾರಿ ಅವರೊಂದಿಗೆ ಭಾವನಾತ್ಮಕ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಈಗಾಗಲೇ ಋತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ನಾಯಕರ ಬಣದೊಂದಿಗೆ ಪಕ್ಷವನ್ನು ತನ್ನ ಮುಷ್ಟಿಯಲ್ಲಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅಲ್ಲದೇ ಟಿಎಂಸಿಯ ಸಂಸದೀಯ ವಿಭಾಗದಲ್ಲಿ ಮಮತಾ ಅವರ ಬೆಂಬಲಿಗರ ಸಂಖ್ಯೆ ಕಡಿಮೆಯಾಗುತ್ತಿರುವಾಗ ಮೊಯಿತ್ರಾ ಅವರ ಈ ಹೇಳಿಕೆ ಬಂಗಾಳದ ರಾಜಕೀಯ ವಲಯಗಳಲ್ಲಿ ಹೊಸ ಊಹಾಪೋಹಗಳನ್ನು ಸೃಷ್ಟಿಸಿದೆ.
ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಮೊಯಿತ್ರಾ ಅವರು ಸುವೇಂದು ಅಧಿಕಾರಿಯನ್ನು ಹೊಗಳಿರುವ ತಮ್ಮ ಸಂದರ್ಶನದ ಆಯ್ದ ಭಾಗವನ್ನು ಹಂಚಿಕೊಂಡಿದ್ದಾರೆ.
ವೈಯಕ್ತಿಕವಾಗಿ ನಾನು ಸುವೇಂದು ಅಧಿಕಾರಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ನಾವು ಒಟ್ಟಿಗೆ ಟಿಎಂಸಿಯಲ್ಲಿದ್ದಾಗ, ಅವರು ನನಗೆ ಬಹಳಷ್ಟು ಬೆಂಬಲ ನೀಡಿದ್ದರು. ತಮ್ಮ ರಾಜಕೀಯ ಜೀವನದ ಕಠಿಣ ಹಂತದಲ್ಲಿ ಅವರು ನನ್ನನ್ನು ಬೆಂಬಲಿಸಿದ್ದಾರೆ. 2014 ರ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಿದಾಗ ಅವರು ಅಸಮಾಧಾನಗೊಂಡಿದ್ದರು. ಆ ದಿನ ನಾನು ಇಡೀ ರಾತ್ರಿ ಅಳುತ್ತಿದ್ದೆ. ಆ ಸಮಯದಲ್ಲಿ ಸುವೇಂದು ನನಗೆ ಧೈರ್ಯ ತುಂಬಿದ್ದರು ಎಂದು ಮೊಯಿತ್ರಾ ಹೇಳಿದ್ದಾರೆ.
ನಾನು ಮೊದಲು ಕರೀಂಪುರದಿಂದ ಸ್ಪರ್ಧಿಸಿದಾಗ ಯಾರೂ ನನ್ನ ಪರವಾಗಿ ಪ್ರಚಾರ ಮಾಡಲು ಬರಲಿಲ್ಲ. ಆದರೆ ಸುವೇಂದು ಅಧಿಕಾರಿ ಮಾಡಿದರು ಎಂದು ಅವರು ಹೇಳಿದ್ದಾರೆ.
ಸುವೇಂದು ಅವರು ಇಂದು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದ್ದರಿಂದ ನಾವು ಇನ್ನು ಮುಂದೆ ಮಾತನಾಡುವುದಿಲ್ಲ. ಆದರೆ ಅವರು ನನಗೆ ನೀಡಿದ ಸಹಾಯವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಮೊಯಿತ್ರಾ ಹೇಳಿದರು.
ಇನ್ನೊಂದು ಹೇಳಿಕೆಯಲ್ಲಿ ಮೊಯಿತ್ರಾ ಅವರು ತೃಣಮೂಲದ ಶುದ್ಧೀಕರಣಕ್ಕಾಗಿ ಸುವೇಂದು ಅವರಿಗೆ ಧನ್ಯವಾದ ಹೇಳಿದ ಅವರು, ಮಮತಾ ಬ್ಯಾನರ್ಜಿ ಮಾಡಲು ಸಾಧ್ಯವಾಗದ್ದನ್ನು ಸುವೇಂದು ಮತ್ತು ಬಿಜೆಪಿ ಒಂದೇ ದಿನದಲ್ಲಿ ಮಾಡಿದೆ ಎಂದು ಹೇಳಿದ್ದರು.
ಮಮತಾ ಅವರು ಟಿಎಂಸಿಯ ಕೆಲವು ನಾಯಕರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಕಾಯ್ದುಕೊಳ್ಳಲು ಇಷ್ಟಪಡುತ್ತಾರೆ. ಆದರೆ ಇದು ಕೆಲವರಿಗೆ ತಾವು ನಿಷ್ಪ್ರಯೋಜಕ ಎಂದೆನಿಸುವಂತೆ ಮಾಡಿತ್ತು ಎಂದು ಮೊಯಿತ್ರಾ ತಿಳಿಸಿದ್ದಾರೆ.
ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ
ಬಿಜೆಪಿಯು ಬಲವಾದ ಕಾರ್ಯಕರ್ತರನ್ನು ಹೊಂದಿದೆ ಮತ್ತು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ. ಅದು ಸ್ಪಷ್ಟ ಹಿಂದುತ್ವ ಸಿದ್ಧಾಂತವನ್ನು ಹೊಂದಿದೆ. ಪಕ್ಷವು ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿದ ಅವರು ಟಿಎಂಸಿಯು ಸೈದ್ಧಾಂತಿಕವಾಗಿ ಕಾಂಗ್ರೆಸ್ ಗೆ ಹತ್ತಿರವಾಗಿದೆ. ಆದರೆ ಅದರೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದರು.