BJP Padayatra: ರಾಜ್ಯದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ತರುವವರೆಗೆ ಹೋರಾಟ ಮುಂದುವರಿಯಲಿದೆ: ವಿಜಯೇಂದ್ರ
BY Vijayendra: ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರವು ಅವಕಾಶ ನೀಡಿರಲಿಲ್ಲ. 15 ವರ್ಷಗಳ ಬಳಿಕ ನಮ್ಮ ಹೋರಾಟಕ್ಕೆ ಮಣಿದು ಅವಕಾಶ ಕೊಟ್ಟಿದೆ. ನಮ್ಮ ನಿಜವಾದ ಹೋರಾಟ ಇವತ್ತಿನಿಂದ ಆರಂಭ. ಎನ್‍ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
-
ಬಳ್ಳಾರಿ, ಸೆ.10: ಐತಿಹಾಸಿಕ ಬಳ್ಳಾರಿ ಚಲೋ ಕಾರ್ಯಕ್ರಮ ಅತ್ಯಂತ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ರೈತಪರ, ಬಡವರ ಪರ, ಹಿಂದೂಪರ ಸರ್ಕಾರ ತರಲು ನಾವು ಹೋರಾಟ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಮನವಿ ಮಾಡಿದರು. ಪಾದಯಾತ್ರೆಯ (BJP Padayatra) ಯಶಸ್ಸಿನ ಕುರಿತು ಬಳ್ಳಾರಿಯಲ್ಲಿ ಗುರುವಾರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರವು ಅವಕಾಶ ನೀಡಿರಲಿಲ್ಲ. 15 ವರ್ಷಗಳ ಬಳಿಕ ನಮ್ಮ ಹೋರಾಟಕ್ಕೆ ಮಣಿದು ಅವಕಾಶ ಕೊಟ್ಟಿದೆ. ಹಿಂದೆ ಮೈಸೂರಿಗೆ ಪಾದಯಾತ್ರೆ ಮಾಡಿದ್ದೆವು ಎಂದು ನೆನಪಿಸಿದರು. ನಮ್ಮ ನಿಜವಾದ ಹೋರಾಟ ಇವತ್ತಿನಿಂದ ಆರಂಭ. ಎನ್‍ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು. ರಾಜ್ಯದ 224 ಕ್ಷೇತ್ರಗಳಿಗೂ ನಮ್ಮ ಯಾತ್ರೆ ಮುಂದುವರೆಯಬೇಕು ಎಂದು ತಿಳಿಸಿದರು.
ಲಿಂಗಸುಗೂರಿನಿಂದ ಪ್ರಾರಂಭವಾದ ಈ ಪಾದಯಾತ್ರೆ 9 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಬಂದಿದೆ. ನಮ್ಮ ಪಾದಯಾತ್ರೆಯುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ರೈತರು, ದೀನದಲಿತರು ನಮಗೆ ಶುಭ ಕೋರಿದ್ದಾರೆ. ರೈತರು, ದೀನದಲಿತರು ನಮಗೆ ತಮ್ಮ ಸಂಕಷ್ಟಗಳನ್ನು ತಿಳಿಸಿದ್ದಾಗಿ ವಿವರಿಸಿದರು.
ವಿದ್ಯಾರ್ಥಿ ಸಂವಾದ, ಕುರಿಗಾರರ ಸಂಕಷ್ಟ ಅರ್ಥ ಮಾಡಿಕೊಳ್ಳುವ ಪ್ರಯತ್ನ ಸೇರಿ 10 ದಿನದ ಈ ಪಾದಯಾತ್ರೆಯು ನಮ್ಮ ಹೃದಯ ತೆರೆಸಿದೆ, ನಮ್ಮ ಕಣ್ಣು ತೆರೆಸುವ ಕೆಲಸ ಮಾಡಿದೆ. ಕಾಂಗ್ರೆಸ್ ಆಡಳಿತವು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡದೇ ದುರಾಡಳಿತ ನಡೆಸಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು 100 ದಿನಗಳ ಸಂಭ್ರಮಾಚರಣೆಯಲ್ಲಿದ್ದಾರೆ. ನಾವು 10 ದಿನಗಳಲ್ಲಿ ಜನರ ಸಂಕಷ್ಟವನ್ನು ಅರಿತುಕೊಳ್ಳಲು ಕ್ರಮ ಕೈಗೊಂಡಿದೆ. ಸಚಿವ ಸಂಪುಟವು ವಂದೇ ಮಾತರಂ ಅನ್ನು ಮೊಟಕುಗೊಳಿಸುವ ನಿರ್ಧಾರ ಮಾಡಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಈ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸಲು ನೀವು ಅವಕಾಶ ಮಾಡಿಕೊಡಲಿದ್ದೀರಿ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ ಆಗಿತ್ತು. ಭ್ರಷ್ಟ ಸಚಿವನನ್ನು ಕೈಬಿಡಬೇಕು, ಹಣ ಮರಳಿ ತರಬೇಕು. 5 ಲಕ್ಷ ರೂ. ಕೃಷಿ ಸಾಲ ಮನ್ನಾ ಮಾಡುವುದು, ಎಸ್‍ಸಿಪಿ, ಟಿಎಸ್‍ಪಿಯ 45 ಸಾವಿರ ಕೋಟಿ ಹಣವನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿದ್ದಾರೆ. ಅದನ್ನು ಮರಳಿ ನೀಡಬೇಕೆಂದು ಒತ್ತಾಯಿಸಿದ್ದೇವೆ. ಮೀಸಲಾತಿ ಹೆಚ್ಚಳ ಮಾಡಬೇಕು. ದುಡಿಯುವ ಯುವಜನರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ಬಿಡದಿ ಟೌನ್‍ಶಿಪ್ ಕಡೆಗೆ ಈ ಸರ್ಕಾರ ಆದ್ಯತೆ ಕೊಟ್ಟಿದೆ
ಬಿಡದಿ ಟೌನ್‍ಶಿಪ್ ಕಡೆಗೆ ಈ ಸರ್ಕಾರ ಆದ್ಯತೆ ಕೊಟ್ಟಿದೆ. ರೈತರನ್ನು ಕಡೆಗಣಿಸಿದೆ. ನವಲಿ ಸಮಾನಾಂತರ ಜಲಾಶಯದ ಬೇಡಿಕೆಯನ್ನು ಅನುಷ್ಠಾನಕ್ಕೆ ಮುಂದಾಗಿಲ್ಲ. 50- 55 ಸಾವಿರ ಕೋಟಿ ಟನಲ್ ರಸ್ತೆ ಬಗ್ಗೆ ಇವರು ತಲೆ ಕೆಡಿಸಿಕೊಳ್ಳುತ್ತಾರೆ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಇದು ಎಂದು ಟೀಕಿಸಿದರು. ರೈತರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಯಡಿಯೂರಪ್ಪ ಅವರು ಮಾಡಿಕೊಟ್ಟಿದ್ದರು. ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಹಾರಾಟದ ಹಿನ್ನೆಲೆಯ ಮುಖ್ಯಮಂತ್ರಿಗಳು ಯುವಕರು, ಬಡವರು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರದಲ್ಲಿ ಇದ್ದಷ್ಟು ದಿನ ಬಡವರು, ರೈತರ ಪರವಾಗಿ ಕೆಲಸ ಮಾಡಿ ಮುಖ್ಯಮಂತ್ರಿಗಳೇ ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ಅವರು ಪ್ರಧಾನ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಅವರು ಕಪಟ ನಾಟಕ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಯೋಗಿ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್; 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ
ರೈತರನ್ನು ಕಡೆಗಣಿಸಿದ ಕಾಂಗ್ರೆಸ್
ಬರಗಾಲದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಏನೂ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ದೊಡ್ಡ ಪ್ರಮಾಣದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ನೆರೆಯ ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ರೈತರನ್ನು ನಿರ್ಲಕ್ಷ್ಯ ಮಾಡಿದರೆ, ಅವರ ಕೋಪದಿಂದ ಸರ್ಕಾರ ಉಳಿಯಲು ಅಸಾಧ್ಯ ಎಂದು ಎಚ್ಚರಿಸಿದರು. ಬಿಜೆಪಿ ಜನಪರ ಯೋಜನೆಗಳನ್ನು ನಿಲ್ಲಿಸಿದ್ದಾರೆ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಿದ ಈ ಸರ್ಕಾರವನ್ನು ಮನೆಗೆ ಕಳಿಸೋಣ ಎಂದು ಮನವಿ ಮಾಡಿದರು.