ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೋಟು ಕೊಟ್ಟ ಪಾಪಕ್ಕೆ ಜನರನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ದಾರುಣ ಬಜೆಟ್ ಇದು: ಎಚ್‌.ಡಿ. ಕುಮಾರಸ್ವಾಮಿ

HD Kumaraswamy: ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ವೋಟು ಕೊಟ್ಟ ಪಾಪಕ್ಕೆ ಜನರನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಬಜೆಟ್

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Mar 6, 2026 6:50 PM

ಬೆಂಗಳೂರು, ಮಾ.6: ಸ್ಲೋಗನ್ ರಾಮಯ್ಯನವರ ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ (Karnataka Budget 2026) ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸಿದ್ದರಾಮಯ್ಯ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಟೀಕಿಸಿದ್ದಾರೆ.

ರಾಜ್ಯ ಬಜೆಟ್‌ 2026ರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಒಂದು ಮಾತು ಸ್ಪಷ್ಟ; ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಿವೆ. ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ‌

ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರ್ಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61% ರಿಂದ 4.7% ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ ₹11,000 ಕೋಟಿಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ ಎಂದಿದ್ದಾರೆ.

ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು. ರಾಜ್ಯದ್ದು ಈಗ ₹4.48 ಲಕ್ಷ ಕೋಟಿ ಗಾತ್ರದ ಬಜೆಟ್. ರಾಜ್ಯದ ಈಗಿನ ಒಟ್ಟು ಸಾಲ ₹8.24 ಲಕ್ಷ ಕೋಟಿ! ಈ ಸಾಲ ₹1.16 ಲಕ್ಷ ಕೋಟಿಯಿಂದ ₹1.32 ಲಕ್ಷ ಕೋಟಿಗೆ ಏರಿದೆ. ಮುಂದಿನ ವರ್ಷಕ್ಕೆ ₹9 ಲಕ್ಷ ಕೋಟಿ ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ತಿಳಿಸಿದ್ದಾರೆ.

Karnataka Budget 2026: ʼಅರ್ಥʼ ವಿಲ್ಲದ ಬಜೆಟ್; ರಾಜ್ಯವನ್ನು ದಾಖಲೆ ಸಾಲದ ಶೂಲಕ್ಕೆ ತಳ್ಳಿದ ಸಿಎಂ: ಪ್ರಹ್ಲಾದ್‌ ಜೋಶಿ ಟೀಕೆ

ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ದಾರುಣ ಬಜೆಟ್ ಇದಾಗಿದೆ ಎಂದು ಆರೋಪಿಸಿದ್ದಾರೆ. ಮುಂಬರುವ ಸರ್ಕಾರಗಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.