ದ್ವೇಷ ಭಾಷಣ ತಡೆ ಕಾಯ್ದೆ; ಜಿಹಾದಿ ಮನಸ್ಥಿತಿಯವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದ ಜೋಶಿ
Pralhad Joshi: ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ. ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ಬಾಳೆಹೊನ್ನೂರು, ಡಿ.20: 'ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ' ಮಸೂದೆ ಜಾರಿಗೊಳಿಸಿದರೆ ರಾಜ್ಯ ಸರ್ಕಾರ ಜಿಹಾದಿ ಮನಸ್ಥಿತಿ ಉಳ್ಳವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government) ತುಷ್ಟೀಕರಣಕ್ಕಾಗಿ ಈ ಕಾಯಿದೆ ತರುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ ಏನು ಮಾತನಾಡಿದರೂ ಅವರನ್ನು ಜೈಲಿಗೆ ಹಾಕಬೇಕೆಂಬ ಮನಸ್ಥಿತಿಯಲ್ಲಿ ಈ ಸರ್ಕಾರವಿದೆ. ಹಾಗಾಗಿ ಹೋರಾಟಗಾರರನ್ನು ಜೈಲಿಗೆ ಹಾಕಬೇಕು, ಹೆದರಿಸಬೇಕೆಂದು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ ಎಂದ ಸಚಿವರು, ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್ ಜೋಶಿ
ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ ಜೈಲು ಶಿಕ್ಷೆ ಮಸೂದೆ ಅನುಷ್ಠಾನ ಅಸಾಧ್ಯ. ಒಂದು ವೇಳೆ ಸರ್ಕಾರ ಅನುಷ್ಠಾನ ಮಾಡಿದರೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂದು ಮಾರ್ಮಿಕವಾಗಿ ನುಡಿದ ಸಚಿವರು, ಕಾಂಗ್ರೆಸ್ ಪಕ್ಷ ತುಷ್ಟೀಕರಣಕ್ಕಾಗಿ ಈ ಕಾಯಿದೆ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.