ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vice President Election: ಉಪರಾಷ್ಟ್ರಪತಿ ಚುನಾವಣೆ- ಸಿ.ಪಿ. ರಾಧಾಕೃಷ್ಣನ್ ಗೆಲುವು ಖಚಿತ? ಏನಿದೆ NDA ಲೆಕ್ಕಾಚಾರ?

ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ರಹಸ್ಯ ಮತದಾನ ನಡೆಯಲಿದೆ. ಇದರ ಪ್ರಕ್ರಿಯೆ ಹೇಗಿರುತ್ತದೆ, ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ, ಆಡಳಿತ ಮತ್ತು ವಿರೋಧ ಪಕ್ಷಗಳ ಲೆಕ್ಕಾಚಾರಗಳು ಯಾವ ರೀತಿಯಲ್ಲಿ ಇದೆ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ನಾಳೆ ಉಪರಾಷ್ಟ್ರಪತಿ ಚುನಾವಣೆ-ಏನಿದೆ NDA ಲೆಕ್ಕಾಚಾರ?

-

ನವದೆಹಲಿ: ಮುಂದಿನ ಉಪರಾಷ್ಟ್ರಪತಿ (Vice President) ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಬಿಜೆಪಿ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಗೆಲ್ಲುವ ನಿರೀಕ್ಷೆ ಇದ್ದರೂ ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ (NDA) ಮೈತ್ರಿ ಕೂಟ ಪ್ರತಿ ಮತವನ್ನು ಕೂಡ ಲೆಕ್ಕ ಹಾಕುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯು (Vice President Election) ರಹಸ್ಯ ಮತದಾನದ ಮೂಲಕ ನಡೆಯುತ್ತದೆ. ಹೀಗಾಗಿ ಎಲ್ಲ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸುತ್ತಾರೆ. ಹೀಗಾಗಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲಾ ಸಂಸತ್ ಸದಸ್ಯರು ರಹಸ್ಯ ಮತದಾನದ ಮೂಲಕ ತಮ್ಮ ಮತ ಚಲಾಯಿಸುತ್ತಾರೆ. ಹೆಚ್ಚಾಗಿ ಇದು ಪಕ್ಷದ ಆಧಾರದ ಮೇಲೆಯೇ ನಡೆಯುತ್ತದೆ. ಆದರೂ ಅಡ್ಡ ಮತದಾನವಾಗುವ ಸಾಧ್ಯತೆ ಇರುತ್ತದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಮತ್ತು ಮಾಜಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿಯು ಈ ಹಿಂದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದವು. ಹೀಗಾಗಿ 2022ರಲ್ಲಿ ಜಗದೀಪ್ ಧಂಖರ್ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದರು. ಇದರಲ್ಲಿ ವೈಎಸ್ಆರ್ ಕಾಂಗ್ರೆಸ್ ಮತ್ತು ಆಗಿನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ಮತಗಳು ಸೇರಿದ್ದವು.

Vp1

ಬಿಜೆಪಿ ಲೆಕ್ಕಾಚಾರ ಹೇಗಿದೆ?

ಪ್ರಸ್ತುತ ರಾಜ್ಯಸಭೆಯ 239 ಸಂಸದರು ಮತ್ತು ಲೋಕಸಭೆಯ 542 ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಹೀಗಾಗಿ ಒಟ್ಟು 781 ಮತದಾರರ ಸಂಖ್ಯೆಯನ್ನು ಆಧರಿಸಿ 391 ಬಹುಮತದ ಸಂಖ್ಯೆಯಾಗಿ ಗುರುತಿಸಲಾಗಿದೆ. ಎನ್‌ಡಿಎ ಒಟ್ಟು 425 ಸಂಸದರನ್ನು ಹೊಂದಿರುವುದರಿಂದ ಬಿಜೆಪಿಯಿಂದ ಆಯ್ಕೆಯಾಗುವ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಅಲ್ಲದೇ ಎನ್ ಡಿಎ ಮೈತ್ರಿ ಕೂಟಕ್ಕೆ 2022ರಲ್ಲಿ ಸಿಕ್ಕಿರುವಂತೆ ಹೊರಗಿನಿಂದ ಬೆಂಬಲ ಸಿಗುವ ನಿರೀಕ್ಷೆಯೂ ಇದೆ. ಯಾಕೆಂದರೆ ಈಗಾಗಲೇ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ರಾಧಾಕೃಷ್ಣನ್ ಅವರಿಗೆ ಬೆಂಬಲ ಸೂಚಿಸಿದೆ.

ವೈಎಸ್‌ಆರ್‌ಸಿಪಿ ರಾಜ್ಯಸಭೆಯಲ್ಲಿ ಏಳು ಮತ್ತು ಲೋಕಸಭೆಯಲ್ಲಿ ನಾಲ್ಕು ಸೇರಿದಂತೆ ಒಟ್ಟು 11 ಸಂಸದರನ್ನು ಹೊಂದಿದೆ. ಇನ್ನು ಬಿಆರ್‌ಎಸ್ ಯ ನಾಲ್ಕು ಸಂಸದರು ಮತ್ತು ಬಿಜೆಡಿಯ ಏಳು ಸಂಸದರು ಯಾರಿಗೆ ಬೆಂಬಲ ನೀಡಬಹುದು ಎನ್ನುವುದು ಸ್ಪಷ್ಟವಾಗಿಲ್ಲ. ಪಕ್ಷದ ಮುಖ್ಯಸ್ಥೆ ಕೆಸಿಆರ್ ಅವರ ಪುತ್ರಿ ಕೆ. ಕವಿತಾ ಅವರ ರಾಜೀನಾಮೆಯಿಂದಾಗಿ ಇದು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಬಿಜೆಡಿ ಬೆಂಬಲ ನೀಡುವ ನಿರೀಕ್ಷೆಯಿದೆಯಾದರೂ ಅದು ಈ ಕುರಿತು ಯಾವುದೇ ದೃಢೀಕರಣ ನೀಡಿಲ್ಲ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅದನ್ನು ಸೋಲಿಸಿದ ಪಕ್ಷವನ್ನು ಬೆಂಬಲಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬಿಆರ್‌ಎಸ್ ಮತ್ತು ಬಿಜೆಡಿ ಬೆಂಬಲ ಇಲ್ಲದೆಯೂ ಎನ್‌ಡಿಎ 436 ಮತಗಳನ್ನು ಹೊಂದಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

ಅಲ್ಲದೇ ಆಪ್, ಏಳು ಸ್ವತಂತ್ರ ಸಂಸದರ ಮತ ಯಾರಿಗೆ ದೊರೆಯುವುದು ಎಂದು ಹೇಳಲು ಸಾಧ್ಯವಿಲ್ಲ. ಅಕಾಲಿ ದಳ ಮತ್ತು ಝೆಡ್ ಪಿಎಂ ತಲಾ ಒಬ್ಬ ಸಂಸದರನ್ನು ಹೊಂದಿದ್ದು ಇವರ ಮತ ಕೂಡ ಯಾರಿಗೆ ಎನ್ನುವುದು ಸ್ಪಷ್ಟವಾಗಿಲ್ಲ. ಪ್ರತಿ ಮತವು ರಾಧಾಕೃಷ್ಣನ್ ಅವರಿಗೆ ಎಂದುಕೊಂಡರೂ ಬಿಜೆಪಿಯ ಅಭ್ಯರ್ಥಿಯು 458 ಮತಗಳಾಗಬಹುದು. ಇದು ಧಂಖರ್ ಪಡೆದ 528 ಕ್ಕಿಂತ ಮತಕ್ಕಿಂತ ಕಡಿಮೆಯಾದರೂ ಗೆಲ್ಲಲು ಅಡ್ಡಿಯಿಲ್ಲ.

ಕಾಂಗ್ರೆಸ್ ಲೆಕ್ಕಾಚಾರ ಹೇಗಿದೆ?

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಇಂಡಿಯಾ ಬ್ಲಾಕ್ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಬಿ. ಸುದರ್ಶನ್ ರೆಡ್ಡಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಎರಡೂ ಸದನಗಳಲ್ಲಿ ಪ್ರತಿಪಕ್ಷವು ಒಟ್ಟು 324 ಮತಗಳನ್ನು ಪಡೆಯಲಿದೆ. ಸ್ಪರ್ಧೆ ಈ ಬಾರಿ ಹೆಚ್ಚು ಕಠಿಣವಾಗಿದೆ. ಯಾಕೆಂದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಬಲ ಪ್ರತಿಪಕ್ಷದಲ್ಲಿದೆ. ಆದರೆ ಗೆಲ್ಲುವ ಸಾಧ್ಯತೆ ಕಡಿಮೆ ಎನ್ನಬಹುದು. ಯಾಕೆಂದರೆ ಶೇಕಡಾ 100 ರಷ್ಟು ವಿರೋಧ ಪಕ್ಷದ ಸಂಸದರು ನ್ಯಾಯಮೂರ್ತಿ ರೆಡ್ಡಿ ಅವರಿಗೆ ಮತ ಹಾಕಿದರೂ ಅವರು ಗೆಲ್ಲಲು 100 ರಿಂದ 135 ಮತಗಳ ಕೊರತೆ ಪಡೆಯುತ್ತಾರೆ. ಇನ್ನು ಬಿಆರ್‌ಎಸ್ ಮತ್ತು ಬಿಜೆಡಿ ಮತ ಹಾಕಿದರೂ ಪ್ರಯೋಜನವಿಲ್ಲ. ಎಷ್ಟೇ ಬೆಂಬಲ ದೊರೆತರೂ ಇಂಡಿಯಾ ಒಕ್ಕೂಟಕ್ಕೆ ಸುಮಾರು 70ರಷ್ಟು ಮತಗಳು ಕೊರತೆಯಾಗಬಹುದು ಎನ್ನುತ್ತದೆ ಲೆಕ್ಕಾಚಾರ. ಇನ್ನು ಒಂದು ವೇಳೆ ಅಡ್ಡ ಮತದಾನವಾದರೆ ಸುಮಾರು 150ರಷ್ಟು ಮಾತ್ರವಾಗುತ್ತದೆ. ಹೀಗಾಗಿ ಗೆಲ್ಲುವ ನಿರೀಕ್ಷೆಯಿಲ್ಲ ಎಂಬುದನ್ನು ಈಗಾಗಲೇ ಇಂಡಿಯಾ ಬಣ ಒಪ್ಪಿಕೊಂಡಿದೆ.

ಇದನ್ನೂ ಓದಿ: HD Kumaraswamy: ರೈತನ ಮೇಲೆ ತೋರಿದ ದರ್ಪ ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆಗೆ ಕುಮಾರಸ್ವಾಮಿ ಟೀಕೆ

ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ

ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ರಿಟರ್ನಿಂಗ್ ಅಧಿಕಾರಿಯನ್ನಾಗಿ ಹಿರಿಯ ಸಂಸದೀಯ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಸಂಭಾವ್ಯ ಅಭ್ಯರ್ಥಿಯು ನಾಮಪತ್ರ ಸಲ್ಲಿಸಲು ಸಂಸದರಲ್ಲಿ ಕನಿಷ್ಠ 20 ಸೂಚಕರು ಮತ್ತು 20 ಅನುಮೋದಕರನ್ನು ಪಡೆಯಬೇಕು. ಇದರೊಂದಿಗೆ 15,000 ರೂ. ಭದ್ರತಾ ಠೇವಣಿಯನ್ನು ಇರಿಸಬೇಕಾಗುತ್ತದೆ. ಅಭ್ಯರ್ಥಿಯು ಗೆಲ್ಲಲ್ಲು ಸರಳ ಬಹುಮತವನ್ನು ಪಡೆಯಬೇಕು. ಅಂದರೆ ಒಟ್ಟು ಮಾನ್ಯ ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಡೆಯಲೇಬೇಕು.