ಕೊಲೆ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಬರಬೇಕು: ಬಸವರಾಜ ಹೊರಟ್ಟಿ
Basavaraj Horatti: ಪಕ್ಷ, ಜಾತಿಯು ನಮ್ಮಲ್ಲಿ ಬರಬಾರದು. ಅಂತೆಯೇ ನಮ್ಮ ರಾಜ್ಯ, ನಮ್ಮ ದೇಶ ಎನ್ನುವುದು ಮುಖ್ಯ. ನಮ್ಮ ರಾಜ್ಯದವರು ಇನ್ನೊಂದು ರಾಜ್ಯದವರಿಂದ ಹೇಳಿಸಿಕೊಳ್ಳುವ ಕಾರ್ಯವಾಗಬಾರದು ಎಂದು ಕೇರಳದ ಮಧ್ಯಪ್ರವೇಶದ ಕುರಿತಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. -
ಶಿರಸಿ, ಜ.5: ಹತ್ಯೆ ಮಾಡುವಂತ ಅಪರಾಧಿಗಳನ್ನು ಸಾರ್ವನಿಕವಾಗಿ ನೇಣಿಗೇರಿಸುವ ಕಾನೂನು ನಮ್ಮಲ್ಲಿ ಬರಬೇಕು. ಅಂತದ್ದನ್ನು ಸರ್ಕಾರ ಮಾಡುವಲ್ಲಿ ನಾನೂ ಸಹ ಕೈ ಜೋಡಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು. (Sirsi News) ಹಳಿಯಾಳಕ್ಕೆ ಸೋಮವಾರ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಪಕ್ಷ, ಜಾತಿಯು ನಮ್ಮಲ್ಲಿ ಬರಬಾರದು. ಅಂತೆಯೇ ನಮ್ಮ ರಾಜ್ಯ, ನಮ್ಮ ದೇಶ ಎನ್ನುವುದು ಮುಖ್ಯ. ನಮ್ಮ ರಾಜ್ಯದವರು ಇನ್ನೊಂದು ರಾಜ್ಯದವರಿಂದ ಹೇಳಿಸಿಕೊಳ್ಳುವ ಕಾರ್ಯವಾಗಬಾರದು ಎಂದು ಕೇರಳದ ಮಧ್ಯಪ್ರವೇಶದ ಕುರಿತಂತೆ ಅವರು ಮಾತನಾಡಿದರು. ಅದು ಮೂರ್ಖತನ ಎಂದು ಇದೇ ವೇಳೆ ತಿಳಿಸಿದರು.
ಇದಕ್ಕೂ ಮುನ್ನ ಹಳಿಯಾಳ ಪಟ್ಟಣದಲ್ಲಿ ತಾವು ಅನುದಾನ ನೀಡಿದ್ದ ಅರ್ಬನ್ ಯೂತ್ ಕ್ಲಬ್‌ನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಅತಿ ಹೆಚ್ಚು ಅನುದಾನವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು, ಅಂತೆಯೇ ಹೆಣ್ಣು ಮಕ್ಕಳ ಶಾಲೆಗೆ ಹೆಚ್ಚು ಅನುದಾನ ನೀಡಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟ ಯಾರಿಗೂ ನಾನು ಎಂದಿಗೂ ಕೈ ಬಿಟ್ಟಿಲ್ಲ, ಏಕೆಂದರೆ ಶಿಕ್ಷಣ ನಂಬಿ ಬದುಕಿದರೆ ಶಿಕ್ಷಣ ಎಂದಿಗೂ ಕೈ ಬಿಡುವುದಿಲ್ಲ. ನಾನು ರಾಜಕೀಯ ಪಕ್ಷಗಳಿಂದ ಹೊರಗುಳಿದರೂ ಸಾಮಾಜಿಕ ಜವಾಬ್ದಾರಿಯನ್ನು ಮರೆತಿಲ್ಲ. ನನ್ನ ಕೈಲಾದಷ್ಟು ಸಹಾಯವನ್ನು ಸಮಾಜಕ್ಕೆ ಮೀಸಲಿಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ದೇಶದಲ್ಲಿಯೇ ಅತಿ ಹೆಚ್ಚು ಕಾಲ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಶಿಕ್ಷಕರು ತಲೆ ತಗ್ಗಿಸದಂತೆ, ಶಾಸಕರ ಮನೆಗಳಗಳಿಗೆ ಅಲೆಯದಂತೆ ಕಾರ್ಯಗಳನ್ನು ಮಾಡಿದ್ದಾರೆ ಎಂದು ಬಸವರಾಜ ಹೊರಟ್ಟಿ ಅವರನ್ನು ಶ್ಲಾಘಿಸಿದರು. ಅಂತೆಯೇ ಅರ್ಬನ್ ಯೂಥ್ ಕ್ಲಬ್‌ಗೆ 5 ಲಕ್ಷ ಅನುದಾನ ನೀಡಿದ್ದನ್ನೂ ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಎಂ.ಎಚ್ ಕುಲಕರ್ಣಿ, ಶ್ರೀಪತಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.