ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Milk Price Hike: ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುತ್ತಾ? ಸಿಎಂ ಡಿಕೆಶಿ ಹೇಳಿದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ.ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ. ತಮಿಳುನಾಡಿನಲ್ಲಿ 9ರಿಂದ 10 ರೂ. ಹೆಚ್ಚಳ ಮಾಡಲಾಗಿದೆ. ನಮಗೂ 8-9 ರೂ. ಜಾಸ್ತಿ ಮಾಡಿ ಎಂದು ನಮ್ಮ ರೈತರು ಮನವಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುತ್ತಾ? ಸಿಎಂ ಹೇಳಿದ್ದೇನು?

-

Prabhakara R
Prabhakara R Sep 19, 2026 5:35 PM

ಚಿಕ್ಕಮಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ (Nandini Milk Price Hike) ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಲೀಟರ್‌ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ. ತಮಿಳುನಾಡಿನಲ್ಲಿ 9ರಿಂದ 10 ರೂ. ಹೆಚ್ಚಳ ಮಾಡಲಾಗಿದೆ. ನಮಗೂ 8-9 ರೂ. ಜಾಸ್ತಿ ಮಾಡಿ ಎಂದು ನಮ್ಮ ರೈತರು ಮನವಿ ಮಾಡಿದ್ದಾರೆ, ಈ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಾನುವಾರುಗಳಿಗೆ ನೀಡುವ ಮೇವು ಹಾಗೂ ಬೂಸಾದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಹಾಲಿನ ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಹೆಚ್ಚಿನ ದರ ಸಿಗುತ್ತೆ ಎಂದು ಪಕ್ಕದ ರಾಜ್ಯಗಳಿಗೆ ನಮ್ಮ ರೈತರು ಹಾಲು ಕಳುಹಿಸುತ್ತಿದ್ದಾರೆ. ಅಲ್ಲದೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದು, ದರ ಹೆಚ್ಚಳಕ್ಕಾಗಿ ರೈತರು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಏನು ಪರಿಹಾರ ಕ್ರಮ ಕೈಗೊಳ್ಳಲು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಹಾಲಿನ ದರ ಹೆಚ್ಚಳ ಮಾಡುವುದು ಅನಿವಾರ್ಯ: ಸಿ. ಪುಟ್ಟರಂಗಶೆಟ್ಟಿ

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಕುರಿತು ಪಶುಸಂಗೋಪನೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪ್ರತಿಕ್ರಿಯಿಸಿ, ದರ ಏರಿಕೆ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಶು ಆಹಾರ, ಹಿಂಡಿ, ಬೂಸಾ ಹಾಗೂ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಹಾಲು ಉತ್ಪಾದಕ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿನ ಲೀಟರ್ ದರ ಹೆಚ್ಚಳ ಮಾಡುವುದು ತೀರಾ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹಾಲಿನ ದರವನ್ನು ಪರಿಷ್ಕರಿಸದಿದ್ದರೆ ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಅಪಾಯವಿದ್ದು, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತಷ್ಟು ಕುಸಿಯಬಹುದು ಎಂದು ಪುಟ್ಟರಂಗಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ಬರ, ಕಸ್ತೂರಿ ರಂಗನ್‌ ವರದಿ ಕುರಿತ ಚರ್ಚೆಗೆ 3 ದಿನ ವಿಶೇಷ ಅಧಿವೇಶನ: ಡಿಸಿಎಂ ಡಾ. ಜಿ.ಪರಮೇಶ್ವರ್

ದರ ಏರಿಕೆಯಿಂದ ಬರುವ ಹೆಚ್ಚುವರಿ ಹಣ ನೇರವಾಗಿ ರೈತರ ಜೇಬಿಗೇ ತಲುಪಲಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ರೈತರ ಹಿತದೃಷ್ಟಿಯಿಂದ ಸರ್ಕಾರದ ಮತ್ತು ಹಾಲು ಒಕ್ಕೂಟಗಳ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.