ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಜಿತ್ ಪವಾರ್ ಉತ್ತರಾಧಿಕಾರಿ ಯಾರಾಗ್ತಾರೆ? ಸುನೇತ್ರಾ ಅವರಲ್ಲದಿದ್ದರೆ ಬೇರೆ ಯಾರು?

ವಿಮಾನ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಯಾರು ಎನ್ನುವ ಚರ್ಚೆ ಈಗ ಪ್ರಾರಂಭವಾಗಿದೆ. ಸುನೇತ್ರಾ ಪವಾರ್ ಅವರಿಗೆ ಅಧಿಕಾರ ನೀಡಲು ಪಕ್ಷ ಯೋಜನೆ ಮಾಡುತ್ತಿದೆ. ಆದರೆ ಒಂದು ವೇಳೆ ಅವರು ನಿರಾಕರಿಸಿದರೆ ಯಾರಿಗೆ ಈ ಅಧಿಕಾರ ಎನ್ನುವ ಕುರಿತು ಕೂಡ ಚಿಂತನೆ ನಡೆಯುತ್ತಿದೆ. ಹಾಗಿದ್ದರೆ ಯಾರಿದ್ದಾರೆ ಸಂಭಾವ್ಯ ಪಟ್ಟಿಯಲ್ಲಿ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಜಿತ್ ಪವಾರ್ ಅವರೂಂದಿಗೆ ಪ್ರಫುಲ್ ಪಟೇಲ್ (ಸಂಗ್ರಹ ಚಿತ್ರ)

ಮುಂಬೈ: ಕಳೆದ ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಎನ್‌ಸಿಪಿ ನಾಯಕ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra Deputy Chief Minister Ajit Pawar) ಅವರು ಸಾವನ್ನಪ್ಪಿದ್ದು, ಮುಂದೆ ಇವರ ಉತ್ತರಾಧಿಕಾರಿ ಯಾರಾಗ್ತಾರೆ ಎನ್ನುವ ಚರ್ಚೆ ಆರಂಭವಾಗಿದೆ. ಅವರ ಪತ್ನಿ, ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ (Rajya Sabha MP Sunetra Pawar) ಅವರು ಉತ್ತರಾಧಿಕಾರಿಯಾಗಲು ನಿರಾಕರಿಸಿದರೆ ಮುಂದಿನ ಆದ್ಯತೆ ಪಕ್ಷ ಯಾರಿಗೆ ನೀಡಬೇಕು ಎನ್ನುವ ಚಿಂತನೆಗಳು ಕೂಡ ಪ್ರಾರಂಭವಾಗಿದೆ. ಇದರಲ್ಲಿ ಮೊದಲ ಹೆಸರು ಕೇಳಿ ಬರುತ್ತಿರುವುದು ಎನ್‌ಸಿಪಿಯ ಪ್ರಫುಲ್ ಪಟೇಲ್ (Praful Patel).

ಇದೀಗ ಮಹಾರಾಷ್ಟ್ರದ ರಾಜಕೀಯದಲ್ಲಿ ಪವಾರ್ ಕುಟುಂಬ ಮತ್ತು ಪ್ರಮುಖ ಹುದ್ದೆಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನದ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ಜಗಳ ಆರಂಭವಾಗಿದ್ದು ಪತ್ನಿ ಸುನೇತ್ರಾ ಪವಾರ್ ಅವರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಲು ಪಕ್ಷ ಸಿದ್ಧತೆ ನಡೆಸುತ್ತಿದ್ದರೆ ಪಕ್ಷವನ್ನು ಮುನ್ನಡೆಸಲು ಪ್ರಫುಲ್ ಪಟೇಲ್ ಅವರಿಗೆ ಅಧಿಕಾರ ನೀಡುವ ಚಿಂತನೆ ನಡೆಯುತ್ತಿದೆ.

ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪಟ್ಟ? ಗರಿಗೆದರಿದ ರಾಜಕೀಯ ಚಟುವಟಿಕೆ

ಎನ್‌ಸಿಪಿಯೊಳಗಿನ ಗುಂಪು ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರನ್ನೇ ಪಕ್ಷದ ಅಧ್ಯಕ್ಷೆ ಮತ್ತು ಶಾಸಕಾಂಗ ಪಕ್ಷದ ನಾಯಕಿಯಾಗಿ ನೇಮಕ ಮಾಡಲು ಕೋರುತ್ತಿದೆ. ಆದರೆ ಇದು ಸಾಧ್ಯವಾಗದೇ ಇದ್ದರೆ ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರಿಗೆ ಈ ಅಧಿಕಾರ ಸಿಗುವ ಸಾಧ್ಯತೆ ಇದೆ.

ಪ್ರಫುಲ್ ಪಟೇಲ್ ಯಾಕೆ?

ಅತ್ಯಂತ ಪ್ರಭಾವಶಾಲಿ ಮತ್ತು ಅನುಭವಿ ನಾಯಕನಾಗಿರುವ ಪ್ರಫುಲ್ ಪಟೇಲ್ ನಾಲ್ಕು ಬಾರಿ ಲೋಕಸಭಾ ಸಂಸದರಾಗಿದ್ದು, ಆರು ಬಾರಿ ರಾಜ್ಯಸಭಾ ಸಂಸದರಾಗಿದ್ದರು. ಹೀಗಾಗಿ ದೆಹಲಿಯೊಂದಿಗೆ ಇವರಿಗಿರುವ ಸಂಪರ್ಕದಿಂದಾಗಿ ಪಕ್ಷದ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗುವ ಸಾಧ್ಯತೆ ಇದೆ. ಇದು ಅವರಿಗೆ ಮತ್ತಷ್ಟು ಬಲ ತುಂಬಿಸಲಿದೆ ಎನ್ನಲಾಗುತ್ತಿದೆ. ಪ್ರಫುಲ್ ಪಟೇಲ್ ಅವರು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ 2004 ರಿಂದ 2011ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಇದರಿಂದ ಅವರಿಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಉನ್ನತ ನಾಯಕರೊಂದಿಗೆ ಹೆಚ್ಚಿನ ಸಂಪರ್ಕವಿದೆ.

ಬಿಜೆಪಿ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಅವರು ಎನ್‌ಸಿಪಿ ವಿಭಜನೆಯಾದಾಗ ಕಾನೂನು ತೊಡಕುಗಳು ಮತ್ತು ಚುನಾವಣಾ ಆಯೋಗದೊಂದಿಗಿನ ಹೋರಾಟವನ್ನು ನಿರ್ವಹಿಸಿದ್ದರು. ಪ್ರಫುಲ್ ಪಟೇಲ್ ಅವರು ಶರದ್ ಪವಾರ್ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದರಿಂದ ಅವರನ್ನು ಎದುರಿಸುವುದು ಅಜಿತ್ ಪವಾರ್ ಗೆ ಸುಲಭವಾಯಿತು.

ಅಜಿತ್‌ ಪವಾರ್‌ ಸಾವಿನ ಹಿಂದಿದೆಯಾ ರಾಜಕೀಯ ನಂಟು? ಮಮತಾ ಬ್ಯಾನರ್ಜಿ ಆರೋಪ ಯಾರ ಮೇಲೆ?

2011 ರಿಂದ 2014ರ ವರೆಗೆ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಕ್ಷೇತ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಪ್ರಫುಲ್ ಪಟೇಲ್ ಹೆಚ್ಚಿನವರೊಂದಿಗೆ ಕಾರ್ಪೊರೇಟ್ ಜಗತ್ತಿನಲ್ಲೂ ಮೈತ್ರಿ ಹೊಂದಿದ್ದಾರೆ. ಭಾರತೀಯ ವಾಯುಯಾನ ಕ್ಷೇತ್ರದ ಆಧುನೀಕರಣ ಮತ್ತು ಏರ್ ಇಂಡಿಯಾದ ವಿಸ್ತರಣೆ ಕೀರ್ತಿಯೂ ಪ್ರಫುಲ್ ಪಟೇಲ್ ಅವರಿಗೆ ಸಲ್ಲುತ್ತದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುನೇತ್ರಾ ಪವಾರ್ ಒಂದು ವೇಳೆ ಎನ್‌ಸಿಪಿಯ ಮುಖ್ಯಸ್ಥೆಯಾಗದೇ ಇದ್ದರೆ ಪ್ರಫುಲ್ ಪಟೇಲ್ ಅವರನ್ನು ಅರ್ಹರು ಎಂದು ಪರಿಗಣಿಸುವ ಸಾಧ್ಯತೆ ಇದೆ.

ವಿದ್ಯಾ ಇರ್ವತ್ತೂರು

View all posts by this author